ADVERTISEMENT

ನೀಟ್‌ ವ್ಯವಸ್ಥೆ ಎಬಿವಿಪಿ ಪ್ರಯತ್ನ ಫಲ

ಎಬಿವಿಪಿ 39 ನೇ ರಾಜ್ಯ ಸಮ್ಮೇಳನದಲ್ಲಿ ಸುನೀಲ್‌ ಅಂಬೇಕರ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:11 IST
Last Updated 8 ಫೆಬ್ರುವರಿ 2020, 14:11 IST
ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಎಬಿವಿಪಿ 39ನೇ ರಾಜ್ಯ ಸಮ್ಮೇಳನದಲ್ಲಿ ಶನಿವಾರ ಎಬಿವಿಪಿ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್‌ ಅಂಬೇಕರ್ ಮಾತನಾಡಿದರು.                                                                    ಪ್ರಜಾವಾಣಿ ಚಿತ್ರ
ಮಂಗಳೂರಿನ ಪುರಭವನದಲ್ಲಿ ನಡೆಯುತ್ತಿರುವ ಎಬಿವಿಪಿ 39ನೇ ರಾಜ್ಯ ಸಮ್ಮೇಳನದಲ್ಲಿ ಶನಿವಾರ ಎಬಿವಿಪಿ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್‌ ಅಂಬೇಕರ್ ಮಾತನಾಡಿದರು.                                                                    ಪ್ರಜಾವಾಣಿ ಚಿತ್ರ   

ಮಂಗಳೂರು: ಶಿಕ್ಷಣ ಕ್ಷೇತ್ರದಲ್ಲೂ ಸಮಾನತೆ ತರಬೇಕು ಎನ್ನುವ ನಿಟ್ಟಿನಲ್ಲಿ ನೀಟ್ ಜಾರಿಗೆ ಬಂದಿರುವುದು ಎಬಿವಿಪಿಯ ಪ್ರಯತ್ನದ ಫಲವಾಗಿದೆ ಎಂದು ಎಬಿವಿಪಿ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್‌ ಅಂಬೇಕರ್‌ ಹೇಳಿದರು.

ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಆಯೋಜಿಸಿರುವ ಎಬಿವಿಪಿ 39 ನೇ ರಾಜ್ಯ ಸಮ್ಮೇಳನದಲ್ಲಿ ಶನಿವಾರ ‘ವರ್ತಮಾನ ಭಾರತ’ ವಿಷಯದ ಕುರಿತು ಅವರು ಮಾತನಾಡಿದರು.

ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಲ್ಲಿ ಸಕಾರಾತ್ಮಕವಾದ ಬದಲಾವಣೆಗೆ ಕಾರಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಇದನ್ನು ಎಬಿವಿಪಿ ಸ್ವಾಗತಿಸುತ್ತದೆ ಎಂದರು.

ADVERTISEMENT

‘ಸಂವಿಧಾನದಲ್ಲಿ ಜಾತ್ಯತೀತತೆಯ ಪರಿಭಾಷೆಯನ್ನು ತಪ್ಪುದಾರಿಗೆ ಎಳೆಯುವ ಮೂಲಕ ರಾಜಕೀಯ ಉದ್ದೇಶಕ್ಕಾಗಿ ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ನವರು ಕಾರ್ಪೆಟ್ ಕೆಳಗೆ ಕಸವನ್ನು ಮಾತ್ರ ತುಂಬಿದ್ದರು. ಈಗ ನಾವು ಕಾರ್ಪೆಟ್ ಅನ್ನು ಶುದ್ಧೀಕರಿಸುತ್ತಿದ್ದೇವೆ. ನಮ್ಮ ಆಂಟಿ-ವೈರಸ್, ಅವರ ವೈರಸ್ ವಿರುದ್ಧ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ಟಿಪ್ಪು ಸುಲ್ತಾನ್ ಬಗ್ಗೆ ಇತಿಹಾಸದ ಪುಟಗಳಲ್ಲಿ ಸುಳ್ಳು ಸಂಗತಿಗಳಿವೆ. ಇತಿಹಾಸವನ್ನು ಮರೆತವರಿಗೆ ಇತಿಹಾಸವನ್ನು ಕಲಿಸುವ ಅವಶ್ಯಕತೆಯಿದೆ. ಸಾವರ್ಕರ್ ಅವರ ದೇಶಭಕ್ತಿಯ ಉತ್ಸಾಹದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.

ಎಬಿವಿಪಿ ಮಹಿಳಾ ಸುರಕ್ಷತೆ ಮತ್ತು ಸಶಕ್ತತೆಯ ದೃಷ್ಟಿಯಿಂದ ದೇಶದಾದ್ಯಂತ 20 ವರ್ಷದೊಳಗಿನ ಸುಮಾರು 8 ಲಕ್ಷ ಜನರಿಗೆ ತರಬೇತಿ ನೀಡಿದೆ. ಮುಂದಿನ ದಿನಗಳಲ್ಲಿ 20 ವರ್ಷದೊಳಗಿನ ಎಲ್ಲ ಯುವತಿಯರಿಗೂ ಮಹಿಳಾ ಸಶಕ್ತತೆಯ ತರಬೇತಿ ನೀಡುವ ಗುರಿ ಇದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌.ವಿನಯ್‌ ಹೆಗ್ಡೆ ಮಾತನಾಡಿ, ದೇಶದ ಹಿತಕ್ಕಾಗಿ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಲು ಯುವಕರು ಮುಂದೆ ಬರಬೇಕಾಗಿದೆ ಎಂದರು.

ನಮ್ಮ ಧರ್ಮ, ನಂಬಿಕೆಗಳೊಂದಿಗೆ ನಾವು ಇತರರಿಗೆ ತೊಂದರೆ ಉಂಟು ಮಾಡದೇ, ಬದುಕುವುದರ ಜತೆಗೆ ದೇಶ ಪ್ರೇಮವನ್ನು ತೋರಿಸಬೇಕಾಗಿದೆ. ದೇಶದ ಒಳಿತಿಗಾಗಿ ನಾವು ಸಮರ್ಪಣಾ ಭಾವದಿಂದ ಪ್ರಾಣತ್ಯಾಗಕ್ಕೂ ಸಿದ್ಧರಾಗುವ ಆದರ್ಶ ನಮ್ಮ ಮುಂದಿರಬೇಕಾಗಿದೆ ಎಂದು ತಿಳಿಸಿದರು.

ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ವೀರೇಶ್ ಬಾಳೆಕಾಯಿ, ಕಾರ್ಯದರ್ಶಿ ಪ್ರತೀಕ್ ಮಾಳಿ, ಬೆಂಗಳೂರು ನಗರ ಘಟಕದ ಕಾರ್ಯದರ್ಶಿ ಸೂರಜ್ ಪಂಡಿತ್ ವೇದಿಕೆಯಲ್ಲಿದ್ದರು. ಸತೀಶ್ ನಿರೂಪಿಸಿದರು.

‘ಎಬಿವಿಪಿ ಆಂಟಿ ವೈರಸ್‌’

ದೇಶದಲ್ಲಿ ಭಯೋತ್ಪಾದನೆ, ಮಾವೋವಾದಿಗಳು, ನಕ್ಸಲರು ಮತ್ತು ನಗರ ನಕ್ಸಲ್‌ಗಳಿಗೆ ಎಬಿವಿಪಿಯು ಆಂಟಿ-ವೈರಸ್ ಮತ್ತು ಚುಚ್ಚುಮದ್ದಾಗಿದೆ ಎಂದು ಸುನೀಲ್‌ ಅಂಬೇಕರ್‌ ಹೇಳಿದರು.

ದೇಶದಲ್ಲಿ 950 ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿವೆ. ಕೇವಲ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಎತ್ತಿದ ಧ್ವನಿಯು ಇಡೀ ವಿದ್ಯಾರ್ಥಿ ಸಮುದಾಯದ ಧ್ವನಿಯಾಗಲು ಸಾಧ್ಯವಿಲ್ಲ. ಎಬಿವಿಪಿ ವಿದ್ಯಾರ್ಥಿಗಳ ನಿಜವಾದ ಪ್ರತಿನಿಧಿಯಾಗಿದ್ದು, ದೇಶದಾದ್ಯಂತ ತನ್ನ ಅಸ್ತಿತ್ವವನ್ನು ಹೊಂದಿದೆ ಎಂದು ತಿಳಿಸಿದರು.

ದೇಶದ ಕೆಲವು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಿಂದ ಮಾವೋವಾದಿ ಸಹಾನುಭೂತಿ ಸಂದೇಶ ಕಳುಹಿಸಲಾಗುತ್ತಿದೆ. ಇಂತಹ ಚಟುವಟಿಕೆಗಳನ್ನು ಎಬಿವಿಪಿ ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಿದೆ. ಎಬಿವಿಪಿ ಮತ್ತೊಮ್ಮೆ ದೇಶದ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂಬ ಪ್ರತಿಜ್ಞೆಯನ್ನು ತೆಗೆದುಕೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.