ADVERTISEMENT

ಅಕಾಡೆಮಿಗಳಲ್ಲಿ ದಕ್ಷಿಣ ಕನ್ನಡಕ್ಕೆ ‘ಸಿಂಹ ಪಾಲು’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 16:15 IST
Last Updated 16 ಮಾರ್ಚ್ 2024, 16:15 IST
<div class="paragraphs"><p>ಉಮರ್‌ ಯು.ಎಚ್‌., ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ</p></div>

ಉಮರ್‌ ಯು.ಎಚ್‌., ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

   

ಚಿತ್ರ: ಫೇಸ್ಬುಕ್‌

ಮಂಗಳೂರು: ವಿವಿಧ ಅಕಾಡೆಮಿಗಳಿಗೆ ರಾಜ್ಯ ಸರ್ಕಾರ ಅಧ್ಯಕ್ಷರನ್ನು ನೇಮಿಸಿದ್ದು, ಐದು ಅಕಾಡೆಮಿಗಳ ಅಧ್ಯಕ್ಷ ಸ್ಥಾನ ದಕ್ಷಿಣ ಕನ್ನಡದವರ ಪಾಲಾಗಿವೆ.

ADVERTISEMENT

ಅಕಾಡೆಮಿಗಳಿಗೆ ನೇಮಕವಾಗಿರುವ ಅಧ್ಯಕ್ಷರು ಹಂಚಿಕೊಂಡಿರುವ ಸಂಕ್ಷಿಪ್ತ ಕಾರ್ಯಯೋಜನೆ ಇಲ್ಲಿವೆ.

'ಮಾದರಿ ಅಕಾಡೆಮಿಯ ಗುರಿ’

ನಾನು ಸಾಹಿತಿ ಅಲ್ಲ, ನನಗಿಂತ ಹಿರಿಯ ಸಾಹಿತಿಗಳು ಬ್ಯಾರಿ ಸಮುದಾಯದಲ್ಲಿ ಇದ್ದಾರೆ. ಅವರು ಈ ಸ್ಥಾನಕ್ಕೆ ಹೆಚ್ಚು ಅರ್ಹರು. ನಾನು ಬ್ಯಾರಿ ಸಮುದಾಯದಲ್ಲಿ, ಸಮಾಜದಲ್ಲಿ ಮಾಡಿರುವ ಕೆಲಸವನ್ನು ಪರಿಗಣಿಸಿ ಸರ್ಕಾರ ಈ ಹುದ್ದೆ ನೀಡಿದೆಯೆಂದು ಭಾವಿಸಿದ್ದೇನೆ. ಬ್ಯಾರಿ ಸಾಹಿತ್ಯ ಅಕಾಡೆಮಿ ರೂಪುಗೊಳ್ಳುವಲ್ಲಿ ನಡೆದ ಪ್ರಯತ್ನದಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೆ. ಅಕಾಡೆಮಿಗಳು ತುಂಬಾ ಇದ್ದರೂ, ಅವುಗಳ ಮೂಲ ಆಶಯ ಅಷ್ಟಾಗಿ ಸಾಕಾರವಾಗುತ್ತಿಲ್ಲ. ನನ್ನ ಅವಧಿಯಲ್ಲಿ ಬ್ಯಾರಿ ಅಕಾಡೆಮಿಯನ್ನು ಮಾದರಿ ಅಕಾಡೆಮಿಯಾಗಿ ಕೊಂಡೊಯ್ಯುವ ಕನಸು ಇದೆ. 

– ಉಮರ್‌ ಯು.ಎಚ್‌., ಅಧ್ಯಕ್ಷ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ

‘ಯುವ ಸಾಹಿತಿಗಳಿಗೆ ಆದ್ಯತೆ’

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಸಂಶೋಧನೆಗಳಿಗೆ ಮುಖ್ಯವಾಗಿ ಭಾಷಾಭಿವೃದ್ಧಿಗೆ ಒತ್ತು ನೀಡಬೇಕಿದೆ. ಯುವ ಸಾಹಿತಿಗಳನ್ನು ಬೆಳೆಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು.

– ಸದಾನಂದ ಮಾವಜಿ, ಅಧ್ಯಕ್ಷ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

‘ಪಿಯುಸಿಯಲ್ಲಿ ತುಳು ಸೇರ್ಪಡೆಗೆ ಆದ್ಯತೆ’

ತುಳು ಅಕಾಡೆಮಿಯಲ್ಲಿ 2017ರಿಂದ 2019ರ ಅವಧಿಯಲ್ಲಿ ಸದಸ್ಯನಾಗಿ ಕೆಲಸ ಮಾಡಿದ್ದೆ. ಅಕಾಡೆಮಿಯ ಕಾರ್ಯ ಚಟುವಟಿಕೆ ವ್ಯಾಪ್ತಿಯ ಅನುಭವ ಇದೆ. ಆ ಅವಧಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ತುಳು ಸೇರ್ಪಡೆಯಾಗಿತ್ತು. ಆಗ ಎ.ಸಿ.ಭಂಡಾರಿ ಅಕಾಡೆಮಿ ಅಧ್ಯಕ್ಷರಾಗಿದ್ದರು. ಶೈಕ್ಷಣಿಕ ವಲಯದಲ್ಲಿ ತುಳು ಉಳಿಸುವ, ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ. ಪಿಯುಸಿಯಲ್ಲಿ ತುಳು ವಿಷಯ ಸೇರ್ಪಡೆ ಬಾಕಿ ಇದ್ದು, ಅದಕ್ಕೆ ಪ್ರಯತ್ನಿಸುತ್ತೇನೆ.

ಎಲ್ಲರ ಬೆಂಬಲ ಪಡೆದು ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಮತ್ತು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆಗೆ ಆಗಬೇಕಾಗಿರುವ ಎಲ್ಲ ಪ್ರಯತ್ನ ಮಾಡುತ್ತೇನೆ. ಅಕಾಡೆಮಿಯನ್ನು ಸಂಶೋಧನಾ ಕೇಂದ್ರವಾಗಿ ರೂಪಿಸುವ ಬಗ್ಗೆಯೂ ಯೋಜನೆ ಇದೆ.

– ತಾರನಾಥ್‌ ಗಟ್ಟಿ ಕಾಪಿಕಾಡ್‌, ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

‘ಎಲ್ಲರನ್ನೂ ಸೇರಿಸಿಕೊಂಡು ಕೆಲಸ’

ಕೊಂಕಣಿ ಭಾಷೆಗಾಗಿ 35 ವರ್ಷ ದುಡಿದ ಅನುಭವ ಇದೆ. ಪಕ್ಷದಿಂದ ನನಗೆ ದೊರೆತ ದೊಡ್ಡ ಪುರಸ್ಕಾರ ಇದು. ಕೊಂಕಣಿ ಭವನ ನಿರ್ಮಾಣ ಯೋಜನೆ ಅರ್ಧದಲ್ಲಿ ನಿಂತಿದ್ದು, ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ಇದೆ. ಎಲ್ಲ ಸಮುದಾಯದವರನ್ನು ಒಟ್ಟಿಗೆ ಸೇರಿಸಿ ಕೊಂಕಣಿ ಭಾಷೆ, ಸಂಸ್ಕೃತಿ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡುವ ಇಚ್ಛೆ ಇದೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಕೆಲಸ ಮಾಡುತ್ತೇವೆ.

– ಜೊಕಿಂ ಸ್ಟಾನ್ಲಿ ಅಲ್ವಾರಿಸ್‌, ಅಧ್ಯಕ್ಷ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.