ADVERTISEMENT

`ಆದರ್ಶ' ಸಂಘ ಸಮಾಜಕ್ಕೂ ಮಾದರಿ

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಿಂದ ವಿದ್ಯಾನಿಧಿ-ಸಹಾಯಧನ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 5:06 IST
Last Updated 14 ಸೆಪ್ಟೆಂಬರ್ 2025, 5:06 IST
ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ನಡೆದ ‘ವಿದ್ಯಾನಿಧಿ -ಸಹಾಯಧನ ವಿತರಣಾ ಸಮಾರಂಭ’ವನ್ನು ಮಂಗಳೂರಿನ ಶ್ರೀರಾಮಕೃಷ್ಣ ಕ್ರೆಡಿಟ್ ಕೊ–ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಉದ್ಘಾಟಿಸಿದರು. ಕೆ.ಸೀತಾರಾಮ ರೈ ಸವಣೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು ಭಾಗವಹಿಸಿದ್ದರು
ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ನಡೆದ ‘ವಿದ್ಯಾನಿಧಿ -ಸಹಾಯಧನ ವಿತರಣಾ ಸಮಾರಂಭ’ವನ್ನು ಮಂಗಳೂರಿನ ಶ್ರೀರಾಮಕೃಷ್ಣ ಕ್ರೆಡಿಟ್ ಕೊ–ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಉದ್ಘಾಟಿಸಿದರು. ಕೆ.ಸೀತಾರಾಮ ರೈ ಸವಣೂರು, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು ಭಾಗವಹಿಸಿದ್ದರು   

ಪುತ್ತೂರು: ‘ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡಿ ಪ್ರೋತ್ಸಾಹಿಸುವ ಮೂಲಕ ಸಮಾಜಕ್ಕೆ ಆದರ್ಶವಾಗಿದೆ. ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರ ಮನಸ್ಸು ಮತ್ತು ಧ್ಯೇಯ ಉತ್ತಮವಾಗಿದ್ದು, ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.

ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶನಿವಾರ ನಗರದ ದರ್ಬೆಯಲ್ಲಿ ನಡೆದ ಸಂಘದ ಶಾಖೆಗಳ ವ್ಯಾಪ್ತಿಯ ಆಯ್ದ ಸರ್ಕಾರಿ ಶಾಲೆಗಳಲ್ಲಿ 7 ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ, ಆರ್ಥಿಕವಾಗಿ ಹಿಂದುಳಿದ 250 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ -ಸಹಾಯಧನ ವಿತರಣಾ ಸಮಾರಂಭ’ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಲ್ಲಿ ಆರ್ಥಿಕ ಸಹಾಯ ಪಡೆದುಕೊಂಡ ಮಕ್ಕಳೂ ಅಭಿವೃದ್ಧಿಯಾಗಿ ಒಂದೆರಡು ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಸೀತಾರಾಮ ರೈ ಅವರ ಈ ಸಹಕಾರ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಶ್ರೀರಾಮಕೃಷ್ಣ ಕ್ರೆಡಿಟ್ ಕೊ–ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಮಾತನಾಡಿ, 250 ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ ₹ 31 ಲಕ್ಷ ವಿದ್ಯಾರ್ಥಿ ವೇತನ ನೀಡುವುದು ಸುಲಭದ ಕೆಲಸವಲ್ಲ. ಇಂದಿನ ದಿನಗಳಲ್ಲಿ ವ್ಯವಹಾರ ಮಾಡುವುದು ಎಷ್ಟು ಕಷ್ಟ, ಅದರಲ್ಲಿ ಎಷ್ಟು ಮಂದಿಯ ಶ್ರಮವಿದೆ, ರಾಜ್ಯದಲ್ಲಿ ಇಂಥ ಕೆಲಸವನ್ನು ಎಷ್ಟು ಸಂಸ್ಥೆಗಳು ಮಾಡುತ್ತಿವೆ ಎಂಬುವುದನ್ನು ಹೆತ್ತವರು ತಿಳಿದುಕೊಳ್ಳಬೇಕು ಎಂದರು.

ಕೆಯ್ಯೂರಿನ ಮಹಿಮರ್ದಿನಿ- ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಎ.ಕೆ. ಮಾತನಾಡಿ, ತನ್ನ ಲಾಭಾಂಶದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಸಹಾಯಧನ ನೀಡುವ ಸಂಸ್ಥೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಮಾತ್ರ ಎಂದು ಶ್ಲಾಘಿಸಿದರು.

ಪ್ರತಿ ವಿದ್ಯಾರ್ಥಿಗೆ ತಲಾ ₹ 2 ಸಾವಿರದಂತೆ 250 ಮಂದಿಗೆ ವಿದ್ಯಾನಿಧಿ-ಸಹಾಯಧನ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಸಂಘದ ನಿರ್ದೇಶಕ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ವಕೀಲ ಅಶ್ವಿನ್ ಎಲ್.ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ ಭಾಗವಹಿಸಿದ್ದರು.

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿದರು.

ಕೇಂದ್ರ ಕಚೇರಿಯ ಸಿಬ್ಬಂದಿ ಶ್ರಮಿತಾ ಕೆ.ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ಸಂಘದ ಪಂಜ ಶಾಖೆಯ ನಿವೃತ್ತ ವ್ಯವಸ್ಥಾಪಕ ಪರಮೇಶ್ವರ ಗೌಡ ಬಿ., ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ.ನಿರೂಪಿಸಿದರು.

ಸಂಘದ ನಿರ್ದೇಶಕರಾದ ಎಸ್.ಎಂ.ಬಾಪು ಸಾಹೇಬ್ ಸುಳ್ಯ, ಬಿ.ಮಹಾಬಲ ರೈ ಬೋಳಂತೂರು, ಕೆ.ರವೀಂದ್ರನಾಥ ಶೆಟ್ಟಿ ಕೇನ್ಯ, ವಿ.ವಿ.ನಾರಾಯಣ ಭಟ್ ನರಿಮೊಗರು, ಎನ್.ಜಯಪ್ರಕಾಶ್ ರೈ ಚೊಕ್ಕಾಡಿ, ಎನ್.ರಾಮಯ್ಯ ರೈ ಕೆದಂಬಾಡಿ, ಸೀತಾರಾಮ ಶೆಟ್ಟಿ ಬಿ.ಮಂಗಳೂರು, ಚಿಕ್ಕಪ್ಪ ನಾಯ್ಕ್‌ ಅರಿಯಡ್ಕ, ಪೂರ್ಣಿಮಾ ಎಸ್.ಆಳ್ವ, ಮಹಾದೇವ ಎಂ.ಮಂಗಳೂರು, ಯಮುನಾ ಎಸ್.ರೈ, ರಶ್ಮಿ ಎಸ್.ರೈ ಭಾಗವಹಿಸಿದ್ದರು.

ಮಾನಸಿಕ ತೃಪ್ತಿ ಕೊಡುವ ಕಾರ್ಯ: ಕಷ್ಟ-ಕಾರ್ಪಣ್ಯಗಳ ನಡುವೆ ಬೆಳೆದ ನನಗೆ ಈಗ ದೇವರು ಬಹಳಷ್ಟು ಕೊಟ್ಟಿದ್ದಾರೆ. ಅದರಲ್ಲಿನ ಒಂದಂಶವನ್ನು ಮಾನಸಿಕ ತೃಪ್ತಿ ಕೊಡುವ ಕೆಲಸ ಹಮ್ಮಿಕೊಂಡು ಸಮಾಜಕ್ಕೆ ಅರ್ಪಿಸುತ್ತಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ಪ್ರತಿ ವರ್ಷ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಕವಾಗಿ ಹಿಂದುಳಿದ 250 ಮಕ್ಕಳಿಗೆ ಸಹಾಯಧನ ನೀಡಲಾಗುತ್ತಿದೆ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತಂದೆಯ ಹೆಸರಿನಲ್ಲಿ ಶೀಂಟೂರು ಶಿಷ್ಯವೇತನ ನೀಡುವ ವ್ಯವಸ್ಥೆ ಮಾಡಿಕೊಂಡಿದ್ದೇನೆ ಎಂದು ಕೆ.ಸೀತಾರಾಮ ರೈ ಸವಣೂರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.