
ಮೂಡುಬಿದಿರೆ (ದಕ್ಷಿಣ ಕನ್ನಡ): ಸೇನಾ ನೇಮಕಾತಿ ಕಚೇರಿ, ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಯೋಗದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ್‍ಯಾಲಿ ಜ.30ರಿಂದ ಫೆ.9ರವರೆಗೆ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯಲಿದೆ.
2025-26ನೇ ಸಾಲಿನಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮೂಡುಬಿದಿರೆಯ ರ್‍ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ವಿಜಯಪುರ, ಬಾಗಲಕೋಟೆ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ, ಗದಗ, ಹಾವೇರಿ, ಶಿವಮೊಗ್ಗ ಸೇರಿ 11 ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸುವರು. 11 ದಿನದ ರ್‍ಯಾಲಿಯಲ್ಲಿ ಪ್ರತಿ ದಿನ ಸುಮಾರು ಒಂದು ಸಾವಿರ ಮಂದಿ ಭಾಗವಹಿಸಲಿದ್ದಾರೆ. ನೇಮಕಾತಿ ಅಧಿಕಾರಿಗಳು ಗುರುವಾರದಿಂದಲೇ ಆಯ್ಕೆ ಪ್ರಕ್ರಿಯೆಯ ಸಿದ್ಧತೆಗಳಲ್ಲಿ ತೊಡಗಿದ್ದರು.
ಮೊದಲ ದಿನ ನಸುಕಿನ 3 ಗಂಟೆಗೆ ಸ್ವರಾಜ್ಯ ಮೈದಾನದಲ್ಲಿ ಕಾರ್ಡ್ ಸ್ಕ್ಯಾನಿಂಗ್ ಪ್ರವೇಶದ ಮೂಲಕ ಮೊದಲ ದಿನದ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಮೊದಲ ದಿನ ದೈಹಿಕ ಪರೀಕ್ಷೆ, ವೈದ್ಯಕೀಯ ತಪಾಸಣೆ ನಡೆಯಲಿದೆ.
ಎಲ್ಲ ಅಭ್ಯರ್ಥಿಗಳಿಗೂ ಪ್ರತಿ ದಿನ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಕಾರದೊಂದಿಗೆ ಕಂದಾಯ ಇಲಾಖೆ ವ್ಯವಸ್ಥೆ ಮಾಡಿದೆ. ಫಲಹಾರ, ಊಟದ ತಯಾರಿ ಕನ್ನಡ ಭವನದಲ್ಲಿ ನಡೆಯಲಿದೆ. ಅಭ್ಯರ್ಥಿಗಳಿಗೆ ಉಳಿದು ಕೊಳ್ಳಲು ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೆಸ್ಕಾಂನಿಂದ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಬಿಎಸ್ಎನ್ಎಲ್‌ನಿಂದ ಇಂಟರ್‌ನೆಟ್ ಸೌಲಭ್ಯ ಒದಗಿಸಲಾಗಿದೆ. ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ರ್‍ಯಾಲಿ ವೇಳೆ ಪೊಲೀಸ್ ಬಂದೋಸ್ತ್ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾ, ಬಯೋಶೌಚಾಲಯ ಮತ್ತು ನೀರಿನ ವ್ಯವಸ್ಥೆಯನ್ನು ಪುರಸಭೆ ನೋಡಿಕೊಳ್ಳಲಿದೆ. ಅಗ್ನಿಪಥ್ ರ್‍ಯಾಲಿಯ ಯಶಸ್ವಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಸಹಕಾರ ನೀಡಲು ಬದ್ಧವಾಗಿದೆ ಎಂದು ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ತಿಳಿಸಿದ್ದಾರೆ.
ಅಗ್ನಿಪಥ್ ರ್‍ಯಾಲಿಯ ಸಿದ್ಧತೆ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಮೂಲಸೌಕರ್ಯ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಅಗ್ನಿಪಥ್ ರ್‍ಯಾಲಿ ನೋಡಲ್ ಅಧಿಕಾರಿ, ತಹಶೀಲ್ದಾರ್ ಶ್ರೀಧರ್ ಮುಂದಲಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.