ಬೊಳಿಯಾರಿನಲ್ಲಿ ಆಕಾಂಕ್ಷಾ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಉಜಿರೆ: ಪಂಜಾಬಿನಲ್ಲಿ ಕಟ್ಟಡವೊಂದರ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟ ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ ಆಕಾಂಕ್ಷಾ (22) ಅವರ ಪಾರ್ಥಿವ ಶರೀರವನ್ನು ಆಂಬುಲೆನ್ಸ್ ಮೂಲಕ ಮನೆಗೆ ಬುಧವಾರ ಬೆಳಿಗ್ಗೆ ತರಲಾಯಿತು.
ಮನೆಯ ಅಂಗಳದಲ್ಲಿ ಮೃತದೇಹದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ನೂರಾರು ಮಂದಿ ಸ್ಥಳೀಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು.
ಆಕಾಂಕ್ಷಾ ತಂದೆ ಸುರೇಂದ್ರನ್ ನಾಯರ್ ಹಾಗೂ ಅವರ ಸಹೋದರ ಪ್ರಕಾಶ್ ಅವರು ಮನೆಗೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದರು. ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಪಾರ್ಥಿವ ಶರೀರವನ್ನು ಮನೆಯ ಅಂಗಳಕ್ಕೆ ತಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಕಾಂಕ್ಷಾ ಅವರ ತಾಯಿ ಸಿಂಧೂದೇವಿ, 'ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಪಂಜಾಬಿನ ಪ್ರೊಫೆಸರ್ ದಂಪತಿ ಸಂಚು ಮಾಡಿ ಕೊಲೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ. ಸಿಂಧೂದೇವಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕ ಹರೀಶ್ ಪೂಂಜ ಅವರು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಗೃಹಸಚಿವರ ಮೂಲಕ ಪಂಜಾಬ್ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.