ADVERTISEMENT

ನಮ್ಮಂಥವರಿಗೆ ಇನ್ನೆಲ್ಲಿದೆ ಬೆಲೆ...!

ಮೊಹಿದೀನ್‌ ಆತ್ಮಕತೆಯಲ್ಲಿ ಹೇಳಿದ್ದೆಲ್ಲವೂ ಸತ್ಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 10:30 IST
Last Updated 10 ಜುಲೈ 2018, 10:30 IST
ಬಿ.ಎ.ಮೊಹಿದೀನ್‌
ಬಿ.ಎ.ಮೊಹಿದೀನ್‌   

ಮಂಗಳೂರು: ಬಿ.ಎ.ಮೊಹಿದೀನ್, ರಮೇಶ್‌ ಕುಮಾರ್‌, ನಾಣಯ್ಯ, ಬಿ.ಎಲ್‌.ಶಂಕರ್, ನಾನು ಸಮಾನ ಮನಸ್ಕರು. ನಮ್ಮೊಳಗೆ ಚರ್ಚೆಗಳು ನಡೆಯದೆ ಯಾವುದೇ ನಿರ್ಧಾರವನ್ನೂ ಕೈಗೊಳ್ಳುತ್ತಿರಲಿಲ್ಲ. ಮಂಗಳವಾರ ನಾವು ಪರಸ್ಪರ ಭೇಟಿಯಾಗಬೇಕಿತ್ತು. ಅದೆಷ್ಟೋ ವಿಷಯಗಳನ್ನು ಚರ್ಚಿಸುವುದಿತ್ತು. ಆದರೆ ಭೇಟಿಯಾದುದು ಮೊಹಿದೀನ್‌ ಅವರ ಅಂತಿಮ ಯಾತ್ರೆಯಲ್ಲಿ..!

ಮೊಹಿದೀನ್‌ ಅವರು ಆತ್ಮಕತೆ ಬರೆಯುತ್ತಿದ್ದಾರೆ ಎಂಬುದು ಗೊತ್ತಿತ್ತು. ಅದರಲ್ಲಿ ಏನಿದೆ ಎಂಬ ವಿಚಾರ ‘ಪ್ರಜಾವಾಣಿ’ಯ ಮೂಲಕ ನನಗೆ ಗೊತ್ತಾಯಿತು. ತಕ್ಷಣ ಅವರಿಗೆ ಫೋನ್‌ ಮಾಡಿದೆ. ಅವರ ಆರೋಗ್ಯ ವಿಚಾರಿಸಿದಾಗ ಅವರು ಆಸ್ಪತ್ರೆಯಲ್ಲಿ ಇರುವುದು ತಿಳಿಯಿತು. ಅವರನ್ನು ಭೇಟಿ ಮಾಡಲೇಬೇಕು ಎಂದುಕೊಂಡಿದ್ದಾಗಲೇ ಎರಡು ದಿನದ ಹಿಂದೆ ನಾನು ಬ್ರಹ್ಮಾವರದಲ್ಲಿ ಜಾರಿ ಬಿದ್ದು ಕಾಲಿಗೆ ಏಟು ಮಾಡಿಕೊಂಡೆ. ಸೋಮವಾರ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಮೊಹಿದೀನ್‌ ಅವರು ರಾತ್ರಿ ಅವರ ಮನೆಗೆ ಬಂದಿದ್ದರು. ಮಂಗಳವಾರ ರಮೇಶ್‌ ಕುಮಾರ್‌ ಅವರು ಮೊಹಿದೀನ್‌ ಅವರನ್ನು ಭೇಟಿ ಮಾಡಿ, ನನ್ನನ್ನು ಭೇಟಿ ಮಾಡಲು ಬಯಸಿದ್ದರು. ಅಂದರೆ ಮಂಗಳವಾರ ನಾವೆಲ್ಲರೂ ಪರಸ್ಪರ ಭೇಟಿ ಮಾಡುವ ಯೋಚನೆಯಲ್ಲಿದ್ದೆವು. ಆದರೆ ವಿಧಿಯಾಟ ಬೇರೆಯದೇ ಇತ್ತು. ಸೋಮವಾರ ರಾತ್ರಿ ಮೊಹಿದೀನ್‌ ಅವರಿಗೆ ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಮಂಗಳವಾರ ಬೆಳಿಗ್ಗೆ ಅವರು ಇನ್ನಿಲ್ಲ ಎಂಬ ಸುದ್ದಿ ಬಂದಾಗ ಒಬ್ಬ ಸಜ್ನನ ರಾಜಕಾರಣಿಗಿಂತಲೂ ಮಿಗಿಲಾಗಿ ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಭಾವದಿಂದ ಮನಸ್ಸು ಭಾರವಾಯಿತು.

ಅವರ ಆತ್ಮಚರಿತ್ರೆ ‘ನನ್ನೊಳಗಿನ ನಾನು’ ಇದೇ 20ರಂದು ಬಿಡುಗಡೆ ಆಗಲಿದೆ. ಅಲ್ಲಿಯವರೆಗಾದರೂ ಅವರು ಬದುಕಿರಬೇಕಿತ್ತು. ಅವರ ಜೀವನವನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಆತ್ಮಚರಿತ್ರೆಯಲ್ಲಿ ಹೇಳಿದ್ದೆಲ್ಲವೂ ಸತ್ಯ ಎಂಬುದರಲ್ಲಿ ನನಗಂತೂ ಸಂಶಯವಿಲ್ಲ.

ADVERTISEMENT

ರಾಜಕಾರಣಿಯೊಬ್ಬ ಹೇಗಿರಬೇಕು ಎಂಬುದಕ್ಕೆ ಬಿ.ಎ.ಮೊಹಿದೀನ್‌ ಮಾದರಿ ಎಂಬಂತಿದ್ದರು. ‘ಸಜ್ಜನ’ ಎಂಬ ಪದಕ್ಕೆ ಅವರೊಬ್ಬ ಅನ್ವರ್ಥ. ಎಂದೂ ಜಾತಿ, ಧರ್ಮವನ್ನು ನೋಡಿ ರಾಜಕಾರಣ ಮಾಡಿದವರಲ್ಲ. ಯಾರನ್ನೂ ಕೀಳಾಗಿ ಕಂಡವರಲ್ಲ. ಸ್ವತಃ ತಮ್ಮ ಧರ್ಮದಲ್ಲಿನ ಹುಳುಕನ್ನೂ ಬಹಿರಂಗವಾಗಿಯೇ ಟೀಕಿಸುವ ಸ್ವಭಾವ ಅವರದ್ದಾಗಿತ್ತು. ಅದಕ್ಕೊಂದು ಉದಾಹರಣ ಹೇಳುತ್ತೇನೆ.

ಹೊಸದಾಗಿ ನಿರ್ಮಿಸಿದ ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಸುವುದು ಬೇಡ ಎಂಬುದು ಅವರ ನಿಲುವಾಗಿತ್ತು. ‘ಮಸೀದಿಗಳಲ್ಲಿ ಬಾಂಗ್‌ ಎಂದರೆ ಪ್ರಾರ್ಥನೆ ಅಲ್ಲ. ಬಾಂಗ್‌ ಕೂಗುತ್ತಿದ್ದುದು ಏಕೆಂದರೆ ಜನರಿಗೆ ಪ್ರಾರ್ಥನೆ ಆರಂಭವಾಯಿತು ಎಂಬುದನ್ನು ತಿಳಿಸುವುದಕ್ಕೆ. ಬಾಂಗ್‌ ಕೂಗುವಾಗ ಭಾಷಣಗಳನ್ನು ನಿಲ್ಲಿಸುವ ಅಗತ್ಯ ಇಲ್ಲ. ಇಂದು ಎಲ್ಲ ಕೈಯಲ್ಲೂ ಗಡಿಯಾರ ಇದೆ, ಹೊಸ ಮಸೀದಿಗಳಲ್ಲಿ ಧ್ವನಿವರ್ಧಕ ಮೂಲಕ ಬಾಂಗ್‌ ಕೂಗುವ ಅಗತ್ಯ ಇಲ್ಲ. ಹಳೆಯ ಮಸೀದಿಗಳಲ್ಲಿ ಬೇಕಿದ್ದರೆ ಇರಲಿ..’ ಹೀಗೆ ಅವರು ಸ್ವತಃ ನನ್ನಲ್ಲಿ ಹೇಳಿಕೊಂಡಿದ್ದರು.

ಮೊಹಿದೀನ್‌ ಅವರನ್ನು ನಾಣಯ್ಯ ಕರೆಯುತ್ತಿದ್ದುದು ‘ಮೊಯಿದಾ’, ‘ಬ್ಯಾರಿ’ ಎಂದು. ನಾನು ಅವರನ್ನು ಕರೆಯುತ್ತಿದ್ದುದು ಮೊಯಿದ್ದಿನ್‌ ಸಾಹೇಬ್ರೇ ಎಂದು. ಅವರೊಬ್ಬ ಸಮರ್ಥ ಆಡಳಿತಗಾರ ಎಂಬುದನ್ನು ಅವರು ಜೆ.ಎಚ್‌.ಪಟೇಲ್‌ ಸಂಪುಟದಲ್ಲಿ ಸಣ್ಣ ಕೈಗಾರಿಕಾ ಸಚಿವರಾಗಿದ್ದಾಗ ಹಾಗೂ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ತೋರಿಸಿಕೊಟ್ಟವರು. ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ಸಿಗದ ಭಾರಿ ತೊಂದರೆ ಎದುರಾಗಿತ್ತು. ಮೊಹಿದೀನ್‌ ಅವರು ಕೆಎಸ್‌ಎಫ್‌ಸಿ ದುಡ್ಡು ಪಡೆದು ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ಕೊಡಿಸಿದರು. ಬಳಿಕ ಸರ್ಕಾರದಿಂದ ಕೆಎಸ್‌ಎಫ್‌ಸಿಗೆ ಸಂದಾಯ ಮಾಡಲಾಯಿತು. ಸಣ್ಣ ವಿಚಾರವನ್ನೂ ಅವರು ಲಘುವಾಗಿ ಪರಿಗಣಿಸುತ್ತಿರಲಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ.

ಮೊಹಿದೀನ್ ಎಂತಹ ಪ್ರಾಮಾಣಿಕರು ಎಂದರೆ ಅವರ ಮಕ್ಕಳಿಗೂ ಏನೂ ಮಾಡಿಕೊಡಲಿಲ್ಲ. ನನ್ನಲ್ಲೂ ಪ್ರಾಮಾಣಿಕತೆ ಇದೆ ಎಂದಾದರೆ ಅದಕ್ಕೆ ಮಾದರಿ ಆಗಿದ್ದುದು ಮೊಹಿದೀನ್ ಅವರೇ. ಆದರೆ ಇಂದು ನನ್ನಂಥವರು, ಮೊಹಿದೀನ್ ಅವರಂಥವರು ಚುನಾವಣೆಯಲ್ಲಿ ಗೆದ್ದು ಬರುವುದು ಕಷ್ಟ. ಗೆದ್ದು ಬಂದರೂ, ಮಂತ್ರಿಯಾವುದು ತುಂಬಾ ಕಷ್ಟ, ಮಂತ್ರಿಯಾದರೂ ಪ್ರಮುಖ ಖಾತೆಯನ್ನು ಪಡೆಯುವುದು ಅತ್ಯಂತ ಕಷ್ಟಕರ ಸಂಗತಿ. ಏಕೆಂದರೆ ನಮ್ಮಂಥವರಲ್ಲಿ ‘ಫಂಡ್‌ ರೈಸಿಂಗ್‌ ಕೆಪ್ಯಾಸಿಟಿ’ ಇಲ್ಲ!

(ಲೇಖಕರು ಜೆ.ಎಚ್‌.ಪಟೀಲ್‌ ಸಂಪುಟದಲ್ಲಿ ಮೊಹಿದೀನ್‌ ಜತೆಯಲ್ಲಿ ಮೀನುಗಾರಿಕಾ ಮತ್ತು ಬಂದರು ಸಚಿವರಾಗಿದ್ದವರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.