‘ಆಳ್ವಾಸ್ ಪ್ರಗತಿ’ ಉದ್ಯೋಗಮೇಳ
-ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಮೂಡುಬಿದಿರೆ (ದಕ್ಷಿಣ ಕನ್ನಡ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ಆಳ್ವಾಸ್ ಪ್ರಗತಿ ಉದ್ಯೋಗ ಮೇಳ’ದಲ್ಲಿ ವಿವಿಧ ಕಂಪನಿಗಳು 2,468 ಅಭ್ಯರ್ಥಿಗಳನ್ನು ಸ್ಥಳದಲ್ಲೇ ನೇಮಕಾತಿ ಮಾಡಿಕೊಂಡವು.
ಮೇಳದಲ್ಲಿ ಪಾಲ್ಗೊಂಡಿದ್ದ 258 ಕಂಪನಿಗಳಲ್ಲಿ 217 ಕಂಪನಿಗಳು 5,953 ಅಭ್ಯರ್ಥಿಗಳಿಗೆ ಪ್ರಾಥಮಿಕ ಹಂತದಿಂದ ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಎರಡು ದಿನಗಳ ಉದ್ಯೋಗ ಮೇಳದಲ್ಲಿ ಒಟ್ಟು 14,780 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.
ಬೆಂಗಳೂರಿನ ಸರ್ಕಾರಿ ಎಸ್‌ಕೆಎಸ್‌ಜೆ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್‌ನ 43 ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇರೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ವಾಹನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ, ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈ ವಿದ್ಯಾರ್ಥಿಗಳು ಇಜಿ ಇಂಡಿಯಾ, ಇಸಿಯಾ ಸಾಫ್ಟ್ ಹಾಗೂ ಫ್ಲಿಪ್ ಕಾರ್ಟ್ ಕಂಪನಿಗಳಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾರೆ.
‘ಟೊಯೊಟ ಕಿರ್ಲೋಸ್ಕರ್ ಆಟೊ ಪಾರ್ಟ್ಸ್ ಕಂಪನಿಗೆ ವಾರ್ಷಿಕ ₹ 4.7 ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದೇನೆ. ಈ ಮೇಳ ನನಗೆ ಉತ್ತಮ ಉದ್ಯೋಗ ದೊರಕಿಸಿಕೊಟ್ಟಿದೆ’ ಎಂದು ಮುಂಬೈನ ಠಾಕೂರ್ ಎಂಜಿನಿಯರಿಂಗ್ ಕಾಜೇಜಿನ ವಿದ್ಯಾರ್ಥಿ, ಪಡುಬಿದ್ರಿಯ ಶೌರ್ಯ ಪೂಜಾರಿ ಸಂತಸ ಹಂಚಿಕೊಂಡರು.
‘ಕಂಪನಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಆತಿಥ್ಯ ಕಲ್ಪಿಸುವುದು, ಇಷ್ಟೊಂದು ಅಭ್ಯರ್ಥಿಗಳು ಒಂದೆಡೆ ಸೇರುವಂತೆ ಮಾಡುವುದು ಆಳ್ವಾಸ್ ಪ್ರಗತಿ ಉದ್ಯೋಗ ಮೇಳದ ಹೆಗ್ಗುರುತು. ಇದು ಯಶಸ್ವಿ ಉದ್ಯೋಗ ಮೇಳ’ ಎಂದು ಫ್ಯಾಕ್ಟ್‌ಸೆಟ್ ಕಂಪನಿ ಪ್ರತಿನಿಧಿಗಳಾದ ವೆಂಕಟ ಸತ್ಯಕೃಷ್ಣ, ಸತ್ಯನಾರಾಯಣ ದುರ್ಹಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.