ADVERTISEMENT

ಸಾಮಾಜಿಕ ಮಾಧ್ಯಮದಲ್ಲಿ ದೇಶವಿರೋಧಿ ಬರಹ ಆರೋಪ: ವೈದ್ಯೆ ವಿರುದ್ಧ ಎಫ್‌ಐಆರ್‌

ಕೆಲಸದಿಂದ ವಜಾ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 10:02 IST
Last Updated 29 ಏಪ್ರಿಲ್ 2025, 10:02 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಮಂಗಳೂರು: ಭಾರತ ವಿರೋಧಿ ಸಂದೇಶವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದ ಮೇಲೆ ನಗರದ ಆಸ್ಪತ್ರೆಯೊಂದರ ವೈದ್ಯೆ ‌ವಿರುದ್ಧ ನಗರದ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸಾಮಾಜಿಕ ಮಾಧ್ಯಮದಲ್ಲಿ ದೇಶ ವಿರೋಧಿ ಬರಹವನ್ನು ಹಂಚಿಕೊಂಡ ಬಗ್ಗೆ ಹೈಲ್ಯಾಂಡ್‌ ಆಸ್ಪತ್ರೆಯ ವೈದ್ಯೆ ಡಾ.ಅತೀಫಾ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್‌ 353 (ಕಿಡಿಗೇಡಿತನದ ಬರಹ ಪ್ರಕಟಿಸುವುದು) ಹಾಗೂ ಸೆಕ್ಷನ್‌ 196 (ಧರ್ಮಗಳ ನಡುವೆ ದ್ವೇಷ ಹಬ್ಬಿಸಲು ಯತ್ನಿಸುವುದು) ಪ್ರಕರಣ ದಾಖಲಿಸಿಕೊಂಡಿದ್ದೇವೆ. ವೈದ್ಯೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿದ್ದೇವೆ. ಆಕೆಯ ಸಂದೇಶ ಹಂಚಿಕೊಳ್ಳಲು ಬಳಸಿದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆಗಾಗಿ ವಿಧಿವಿಜ್ಞಾನ ತಜ್ಞರಿಗೆ ಕಳುಹಿಸಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್‌ ಅನುಪಮ್ ಅಗ್ರವಾಲ್ ಇಲ್ಲಿ ಮಂಗಳವಾರ ತಿಳಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಬರಹವನ್ನು ಹಂಚಿಕೊಂಡ ವೈದ್ಯೆಯು ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಹೈಲ್ಯಾಂಡ್‌ ಆಸ್ಪತ್ರೆಯು ಆಕೆಯನ್ನು ಕೆಲಸದಿಂದ ವಜಾಮಾಡಿದೆ. ಈ ಘಟನೆ ಕುರಿತು ಸ್ಪಷ್ಟನೆ ನೀಡಿ ಹೈಲ್ಯಾಡ್‌ ಆಸ್ಪತ್ರೆಯ ಆಡಳಿತ ಮಂಡಳಿ ಟ್ವೀಟ್ ಮಾಡಿದ್ದು, ‘ದೇಶವಿರೋಧಿ ಎಂದು ಪರಿಗಣಿಸುವಂತಹ ಅಭಿಪ್ರಾಯಗಳನ್ನು ನಮ್ಮ ಸಂಸ್ಥೆಯ ಒಪ್ಪುವುದಿಲ್ಲ. ವೈದ್ಯೆಯು ತಮ್ಮ ಬರಹದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಅದನ್ನು ನಾವೂ ಬಲವಾಗಿ ಖಂಡಿಸುತ್ತೇವೆ. ಇಂತಹ ದೇಶ ವಿರೋಧಿ ಭಾವನೆಗಳಿಂದ ನಾವು ಅಂತರ ಕಾಯ್ದುಕೊಳ್ಳುವ ಮೂಲಕ ದೇಶದ ಸಾರ್ವಭೌಮತೆ, ಐಕ್ಯತೆ ಹಾಗೂ ಭದ್ರತೆಯನ್ನು ಎತ್ತಿಹಿಡಿಯುತ್ತೇವೆ’ ಎಂದು ತಿಳಿಸಿದೆ.

ADVERTISEMENT

ವೈದ್ಯೆಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಬರೆಹವನ್ನು ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್‌ ಫೇಸ್‌ಬುಕ್‌ನಲ್ಲಿ ಈಚೆಗೆ ಹಂಚಿಕೊಂಡಿದ್ದು, ಆಕೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.