ADVERTISEMENT

ದಕ್ಷಿಣ ಕನ್ನಡ | ಅಡಿಕೆಗೆ ಕೊಳೆ: ಕೃಷಿಕರ ಆದಾಯಕ್ಕೆ ಬರೆ

ಸಂಧ್ಯಾ ಹೆಗಡೆ
Published 18 ಆಗಸ್ಟ್ 2025, 3:05 IST
Last Updated 18 ಆಗಸ್ಟ್ 2025, 3:05 IST
<div class="paragraphs"><p>ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ತೋಟದಲ್ಲಿ ಕೊಳೆರೋಗದಿಂದ ಉದುರಿದ ಅಡಿಕೆ ಆರಿಸುತ್ತಿರುವ ರೈತ ವೀರಪ್ಪ ಗೌಡ&nbsp;</p></div>

ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ತೋಟದಲ್ಲಿ ಕೊಳೆರೋಗದಿಂದ ಉದುರಿದ ಅಡಿಕೆ ಆರಿಸುತ್ತಿರುವ ರೈತ ವೀರಪ್ಪ ಗೌಡ 

   

ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್

ಮಂಗಳೂರು: ತೋಟಗಳಲ್ಲಿ ಅಡಿಕೆ ಮರಗಳಿಗೆ ಸಾಮೂಹಿಕವಾಗಿ ಕೊಳೆ ರೋಗ ಹರಡಿದೆ. ರೋಗದಿಂದ ತಪ್ಪಿಸಿಕೊಂಡಿರುವ ತೋಟಗಳೇ ವಿರಳ ಎಂಬಂತಾಗಿದೆ. ರೋಗ ತಗುಲಿದ ಮರಗಳಿಂದ ಉದುರಿ ನೆಲದ ಮೇಲೆ ಹಾಸಿರುವ ಅಡಿಕೆ ಕಾಯಿಗಳನ್ನು ಕಂಡು ಬೆಳೆಗಾರರ ಒಡಲು ಸುಡುತ್ತಿದೆ.

ADVERTISEMENT

ಕೈಗೆ ಬಂದ ಫಸಲು ಕಣ್ಣೆದುರೇ ಕಮರುತ್ತಿದೆ. ಮರದ ಬುಡದಲ್ಲಿ ನಿತ್ಯವೂ ಎಳೆ ಅಡಿಕೆ ಕಾಯಿಗಳು ರಾಶಿ ಬೀಳುತ್ತಿವೆ. ಮರದಲ್ಲಿ ಉಳಿದ ಬೆಳೆಯನ್ನಾದರೂ ಉಳಿಸಿಕೊಳ್ಳಲು ಬೆಳೆಗಾರರು ಹೆಣಗಾಡುತ್ತಿದ್ದಾರೆ. ತೋಟಗಳಲ್ಲಿ ಬೋರ್ಡೊ ದ್ರಾವಣ ಸಿಂಪಡಿಸುವ ಕೆಲಸ ಭರದಿಂದ ನಡೆಯುತ್ತಿದೆ.

ಕೊಳೆರೋಗದಿಂದ ಉದುರಿರುವ ಎಳೆ ಅಡಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ ಕೊನೆಯ ವಾರದಿಂದ ಪ್ರಾರಂಭವಾಗಿ ಬಿಡುವಿಲ್ಲದೆ ಸುರಿದ ಮಳೆಗೆ ಅಡಿಕೆ ತೋಟಗಳು ನಲುಗಿವೆ. ಜಿಲ್ಲೆಯಲ್ಲಿ 1.02 ಲಕ್ಷ ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆ ಇದ್ದು, ಶೇ 95ರಷ್ಟು ತೋಟಗಳಲ್ಲಿ ಕೊಳೆರೋಗ (phytophthora) ಹರಡಿದೆ.

‘ಗೊನೆತುಂಬಿ ಬಂದ ಫಸಲು ಬೆಳೆಗಾರರಲ್ಲಿ ಭರವಸೆ ಮೂಡಿಸಿತ್ತು. ಆದರೆ, ಬೆಳವಣಿಗೆ ಹಂತದಲ್ಲಿರುವಾಗಲೇ ಕೊಳೆರೋಗ ತಗುಲಿ, ಅಡಿಕೆ ಕಾಯಿಗಳು ನೆಲದಲ್ಲಿ ಹಾಸಿವೆ. 10 ಕ್ವಿಂಟಲ್ ಬೆಳೆ ಸಿಗಬೇಕಾಗಿದ್ದ ತೋಟದಲ್ಲಿ ಈ ಬಾರಿ 2 ಕ್ವಿಂಟಲ್ ಸಿಗುವುದೂ ಅನುಮಾನ’ ಎನ್ನುತ್ತಾರೆ ಬೆಳ್ತಂಗಡಿ ತಾಲ್ಲೂಕಿನ ಬೆಳೆಗಾರ ಪ್ರಕಾಶ್ ಎಳನೀರು.

‘ನಿರಂತರ ಸುರಿದ ಮಳೆಯಿಂದ ಅಡಿಕೆ ತೋಟಗಳಿಗೆ ಕೊಳೆ ರೋಗ ಹರಡಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಇತ್ತೀಚೆಗೆ ನಡೆಸಿದ ಬೆಳೆಗಾರರ ಸಮೀಕ್ಷೆ ಪ್ರಕಾರ ಶೇ 95ರಷ್ಟು ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಂಡಿದೆ. ಶೇ 40ಕ್ಕಿಂತ ಹೆಚ್ಚು ಬೆಳೆ ಕಳೆದುಕೊಂಡ ಬೆಳೆಗಾರರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಮೊದಲಾದ ಅಡಿಕೆ ಬೆಳೆಯುವ ಜಿಲ್ಲೆಗಳ ರೈತರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು’ ಎನ್ನುತ್ತಾರೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ.

‘ಬೇಸಿಗೆಯಲ್ಲಿ 40 ಡಿಗ್ರಿ ತಲುಪಿದ ತಾಪಮಾನದಿಂದ ಅಡಿಕೆ ಕಾಯಿ ಉದುರಿದ್ದವು. ಈಗ ಪುನಃ ಕೊಳೆರೋಗ ಬಂದು ಉಳಿದ ಬೆಳೆಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಬೆಳೆಗಾರರು ಸಂಕಷ್ಟದಲ್ಲಿದ್ದು, ನಮ್ಮ ಸಂಘಟನೆ ನಡೆಸಿರುವ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರ, ತೋಟಗಾರಿಕಾ ಇಲಾಖೆ, ಸ್ಥಳೀಯ ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಕೊಳೆ ರೋಗದಿಂದ ಶೇ 20–25ರಷ್ಟು ಬೆಳೆ ಹಾನಿಯಾಗಿದೆ. ಎರಡನೇ ಬಾರಿ ಬೋರ್ಡೊ ಸಿಂಪಡಣೆ ಮಾಡಿದ್ದರಿಂದ ರೋಗ ನಿಯಂತ್ರಣಕ್ಕೆ ಬಂದಿತ್ತು. ಈಗ ಪುನಃ ಮಳೆಯಾಗುತ್ತಿರುವ ಕಾರಣ ರೋಗ ಉಲ್ಬಣಗೊಂಡು ಮತ್ತೆ ಅಡಿಕೆ ಕಾಯಿ ಉದುರುವ ಸಾಧ್ಯತೆ ಇದೆ. ತೋಟಗಾರಿಕಾ ಇಲಾಖೆಯಿಂದ ಮೈಲುತುತ್ತ ಖರೀದಿಗೆ ಸಹಾಯಧನ ಪಡೆಯುವ ಬಗ್ಗೆ ಯೋಚಿಸುತ್ತಿದ್ದೇನೆ. ಕಳೆದ ವರ್ಷದ ಬೆಳೆ ಹಾನಿಗೆ ವಿಮೆ ದೊರೆತಿದೆ’ ಎಂದು ಸುಳ್ಯ ತಾಲ್ಲೂಕು ಬೆಳ್ಳಾರೆಯ ಬೆಳೆಗಾರ ಮುರಳೀಧರ ಎಸ್‌.ಪಿ. ಹೇಳುತ್ತಾರೆ.

ಅಧಿಕ ಮಳೆಯಿಂದ ಕಾಯಿಕೊಳೆ ರೋಗ ತಗುಲಿರುವ ಕೊಕ್ಕೊಕಾಯಿ

ಬಿಸಿಲು ಬರಲು ಶುರುವಾದ ಮೇಲೆ ಸೆಪ್ಟೆಂಬರ್ – ಅಕ್ಟೋಬರ್‌ ವೇಳೆಗೆ ಎಲೆಚುಕ್ಕೆ ರೋಗ ಉಲ್ಬಣಿಸಬಹುದು. ಅಡಿಕೆಗೆ ಸುಳಿ ಕೊಳೆರೋಗ ಅಲ್ಲಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೋರ್ಡೊ ದ್ರಾವಣ ಸಿಂಪಡಣೆ ಮಾಡುವಾಗ ಮರದ ಸುಳಿ, ಚೆಂಡು, ಗರಿಗಳಿಗೂ ನೀಡಬೇಕು. ರೋಗ ಬಂದು ಸತ್ತಿರುವ ಮರಗಳನ್ನು ತಕ್ಷಣದಲ್ಲಿ ತೋಟದಿಂದ ತೆರವುಗೊಳಿಸಬೇಕು ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.

ಪ್ರತಿ ತೋಟದಲ್ಲಿ ಶೇ 20ರಷ್ಟು ಮರಗಳಿಗೆ ರೋಗ ತಗುಲಿದೆ. ಹಿಂದಿನ ಒಂದು ವಾರ ಬಿಸಿಲಿನ ವಾತಾವರಣ ಇದ್ದ ಕಾರಣ ಬೆಳೆಗಾರರು ಎರಡನೇ ಹಂತದ ಬೋರ್ಡೊ ಸಿಂಪಡಣೆ ಮಾಡಿದ್ದಾರೆ. ಇನ್ನು ರೋಗ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ಬಂಟ್ವಾಳದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರದೀಪ್ ಡಿಸೋಜ.

ಬೆಳ್ತಂಗಡಿ ತಾಲ್ಲೂಕಿನಲ್ಲಿ 25 ಸಾವಿರ ಹೆಕ್ಟೇರ್ ಅಡಿಕೆ ತೋಟ ಇದ್ದು, 2,500 ಹೆಕ್ಟೇರ್‌ನಲ್ಲಿ ಕೊಳೆರೋಗ ಹರಡಿರಬಹುದೆಂದು ಅಂದಾಜಿಸಲಾಗಿದೆ. ಹೆಚ್ಚಿನ ತೋಟಗಳಲ್ಲಿ ಮರಗಳು ರೋಗಕ್ಕೆ ತುತ್ತಾಗಿವೆ. ಮೊದಲನೇ ಸ್ಪ್ರೇ ಕೊಡಲು ಸಾಧ್ಯವಾಗದ ತೋಟಗಳಲ್ಲಿ ರೋಗ ಉಲ್ಬಣಿಸಿದೆ. ಪ್ರಸ್ತುತ ಎಲ್ಲ ಕಡೆಗಳಲ್ಲಿ ರೋಗ ನಿಯಂತ್ರಣಕ್ಕೆ ಬಂದಿದೆ ಎನ್ನುತ್ತಾರೆ ಬೆಳ್ತಂಗಡಿಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ ಕೆ.ಎಸ್.

ಜಿಲ್ಲೆಯಲ್ಲಿ 769 ಹೆಕ್ಟೇರ್ ಕೊಕ್ಕೊ ಬೆಳೆ ಇದ್ದು, ಈ ಬೆಳೆಗೂ ಕಾಯಿಕೊಳೆ ರೋಗ ಬಾಧಿಸಿದೆ. 38,011 ಹೆಕ್ಟೇರ್‌ನಲ್ಲಿ ಕಾಳುಮೆಣಸು ಕೃಷಿ ಇದೆ. ಇದಕ್ಕೂ ಸೊರಗು ರೋಗ ಕಾಣಿಸಿಕೊಂಡಿದೆ. ಆದರೆ, ಅಡಿಕೆಯಷ್ಟು ಗಂಭೀರ ಸ್ಥಿತಿ ತಲುಪಿಲ್ಲ ಎನ್ನುವುದು ಬೆಳೆಗಾರರ ಅಭಿಪ್ರಾಯ.

ಅರ್ಧಕ್ಕರ್ಧ ಫಸಲು ಉದುರಿ ಬರಿದಾಗಿರುವ ಗೊನೆ

‘ಬೋರ್ಡೊ ದ್ರಾವಣ ಪರಿಣಾಮಕಾರಿ’

ಕೊಳೆರೋಗಕ್ಕೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡುವುದು ಉತ್ತಮ. ಇದು ಪರಿಣಾಮಕಾರಿ ಜೊತೆಗೆ ಬೆಳೆಗಾರರಿಗೆ ಆರ್ಥಿಕ ಹೊರೆಯಾಗುವುದಿಲ್ಲ. ತೀವ್ರತರದಲ್ಲಿ ರೋಗ ಬಾಧಿಸಿದರೆ ಮ್ಯಾಂಡಿಪ್ರೊಪಮಿಡ್ (mandipropamid) ಸಿಂಪಡಣೆ ಮಾಡಲು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ) ಸಲಹೆ ನೀಡಿದೆ. ಇದು ಬೆಲೆ ತುಸು ದುಬಾರಿಯಾಗಿದೆ. ಅಡಿಕೆ ತೋಟಕ್ಕೆ ಮಳೆಗಾಲದ ಪೂರ್ವದಲ್ಲಿ ಒಂದೂವರೆ ತಿಂಗಳು ಬಿಟ್ಟು ಇನ್ನೊಮ್ಮೆ ಬೋರ್ಡೊ ದ್ರಾವಣ ಸಿಂಪಡಣೆ ಮಾಡಬೇಕು. ಸತತ ಮಳೆ ಇದ್ದ ಭಾಗಗಳಲ್ಲಿ ಮೂರನೇ ಬಾರಿ ಬೋರ್ಡೊ ಸಿಂಪಡಣೆ ಮಾಡಿದರೆ ಉತ್ತಮ ಎಂದು ಸಿಪಿಸಿಆರ್‌ಐ ನಿರ್ದೇಶಕ ಕೆ. ಬಾಲಚಂದ್ರ ಹೆಬ್ಬಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬೋರ್ಡೊ ದ್ರಾವಣದ ಸಿದ್ಧತೆ ಹೇಗೆ?

ಈ ಹಿಂದೆ ಬೋರ್ಡೊ ದ್ರಾವಣವನ್ನು ಮೈಲುತುತ್ತ ಮತ್ತು ಸುಣ್ಣವನ್ನು 1:1 ಪ್ರಮಾಣದಲ್ಲಿ 100 ಲೀಟರ್ ನೀರಿಗೆ ಮಿಶ್ರಣ ಮಾಡುವಂತೆ ತಿಳಿಸಲಾಗುತ್ತಿತ್ತು. ಆಗ ಚಿಪ್ಪಿನ ಸುಣ್ಣ ಬಳಕೆಯಲ್ಲಿತ್ತು. ಮೈಲುತುತ್ತ ತಟಸ್ಥಗೊಳಿಸಲು ಸುಣ್ಣವನ್ನು ಬಳಸುತ್ತಾರೆ. ಈಗ ಹೆಚ್ಚಾಗಿ ಹುಡಿ ಸುಣ್ಣವನ್ನೇ ರೈತರು ಬಳಸುತ್ತಾರೆ. ಇದು ಹೈಡ್ರೇಟ್ ಮಾಡಿರುವ ಸುಣ್ಣ ಆಗಿರುವುದರಿಂದ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ ಈಗ ಒಂದು ಕೆ.ಜಿ. ಮೈಲುತುತ್ತಕ್ಕೆ 350 ರಿಂದ 400 ಗ್ರಾಂ ಬಳಕೆ ಮಾಡಿ 100 ಲೀಟರ್ ನೀರಿಗೆ ಸೇರಿಸಿ ದ್ರಾವಣ ಮಾಡುವುದು ಸೂಕ್ತ. ಪಿಎಚ್‌ 7ರಿಂದ 7.2 ಇದ್ದರೆ ಸಾಕು. ದ್ರಾವಣವನ್ನು ಸಿದ್ಧಪಡಿಸಿದ ದಿನದಂದೇ ಖಾಲಿ ಮಾಡಿದರೆ ಒಳ್ಳೆಯದು ಎನ್ನುತ್ತಾರೆ ಸಿಪಿಸಿಆರ್‌ಐ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ವಿನಾಯಕ ಹೆಗಡೆ.

ಕೊಳೆರೋಗದಿಂದ ಉದುರಿರುವ ಎಳೆ ಅಡಿಕೆ

‘ಕೃಷಿಕರ ಬೆಳೆಸಾಲ ಮನ್ನಾಮಾಡಿ’

ಅಡಿಕೆ ಬೆಳೆಗಾರರು ಬೆಳೆ ಕಳೆದುಕೊಂಡು ಆತಂಕದಲ್ಲಿದ್ದಾರೆ. ಪರಿಹಾರ ಒದಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. 2009ರ ಹಿಂದಿನ ಬೆಳೆಸಾಲ ಪ್ರಕರಣಗಳು ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಇವೆ. 2025–26ನೇ ಸಾಲಿನ ಬೆಳೆಸಾಲ ಮನ್ನಾ ಮಾಡಬೇಕು. ಅಡಿಕೆ ಬೆಳೆಯುವ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಅಡಿಕೆ ಬೆಳೆ ನೆಲಕಚ್ಚಿದೆ. ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.