
‘ವರ್ಣಯಾನ’ ಸಮ್ಮೇಳನದ ಅಂಗವಾಗಿ ಚಿಣ್ಣರಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು
ಪ್ರಜಾವಾಣಿ ಚಿತ್ರ
ಮಂಗಳೂರು: 'ಚಿತ್ರಕಲೆ ಮನಕ್ಕೆ ಮುದ ನೀಡುವುದಷ್ಟೇ ಅಲ್ಲ, ಮನೋವಿಕಾಸಕ್ಕೆ ಸಹಕರಿಸುತ್ತದೆ. ಕಲಿಕೆಯ ಒತ್ತಡದಿಂದ ಮುಕ್ತಿ ನೀಡಿ ಮಕ್ಕಳನ್ನು ನಿರಾಳರನ್ನಾಗಿ ಮಾಡಬಲ್ಲುದು. ಇದು ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ’ ಎಂದು ಲೇಖಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.
ಕೊಡಿಯಾಲ್‌ಬೈಲ್‌ನ ಸೇಂಟ್ ಅಲೋಷಿಯಸ್ ಪ್ರೌಢಶಾಲೆಯಲ್ಲಿ ‘ವರ್ಣಯಾನ ಬೆಳಕಿನೆಡೆಗೆ...’ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಮ್ಮೇಳನದಲ್ಲಿ ಭಾನುವಾರ ನಡೆದ ಸಂವಾದದಲ್ಲಿ ಅವರು ‘ಶಿಕ್ಷಣದಲ್ಲಿ ಚಿತ್ರಕಲೆಯ ಮಹತ್ವ ಮತ್ತು ಪ್ರಸ್ತುತ ಸ್ಥಿತಿಗತಿ’ ಕುರಿತು ಮಾತನಾಡಿದರು.
‘ಮಕ್ಕಳ ಕಲ್ಪನಾ ಶಕ್ತಿಯನ್ನು ಚಿತ್ರಕಲೆ ಹೆಚ್ಚಿಸಬಲ್ಲುದು. ಪಾಠವನ್ನು ಚಿತ್ರದ ಮೂಲಕ ಕಟ್ಟಿಕೊಟ್ಟರೆ ಬೇಗ ಅರ್ಥ ಆಗುತ್ತದೆ. ಮಕ್ಕಳ ಸೃಜನಶೀಲತೆ ಹೆಚ್ಚಿಸಲು ಅವಕಾಶ ಇರುವುದು ಚಿತ್ರಕಲಾ ಶಿಕ್ಷಕರಿಗೆ’ ಎಂದು ಅಭಿಪ್ರಾಯಪಟ್ಟರು.
‘ಚಿತ್ರಕಲೆ ಬಲ್ಲವರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಉದ್ಯೋಗಾವಕಾಶಗಳಿದ್ದು, ಅವರು ತಿಂಗಳಿಗೆ ₹10 ಲಕ್ಷದಿಂದ ₹15 ಲಕ್ಷದವರೆಗೂ ದುಡಿಯಬಲ್ಲರು. ಇಂತಹ ವಿಚಾರ ಮತ್ತೆ ಮತ್ತೆ ಹೇಳಿ ಜನರಿಗೆ ಮನವರಿಕೆ ಮಾಡಬೇಕು’ ಎಂದರು.
ರೇಖಾಚಿತ್ರ ಕಲಾವಿದ, ಚಾರಣಿಗ ದಿನೇಶ್ ಹೊಳ್ಳ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನೊ, ಶಿಕ್ಷಣ ಸಂಯೋಜಕ ರಮಾನಂದ ನೂಜಿಪಾಡಿ ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಫೀಕ್ ತುಂಬೆ ಧನ್ಯವಾದ ಸಲ್ಲಿಸಿದರು. ತಾರಾನಾಥ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆ: ಸೇಂಟ್ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ.ಮೆಲ್ವಿನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರು ಬೆಳದಿಂಗಳು ಟ್ರಸ್ಟ್‌ನ ನಿರ್ದೇಶಕ ಪದ್ಮರಾಜ ಆರ್.ಪೂಜಾರಿ, ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ದೇವದಾಸ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಫಾ.ಜಾನ್ಸನ್ ಪಿಂಟೊ, ಕೊಳ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಉಮಾನಾಥ ರೈ ಮೇರಾವು, ಚಿತ್ರ ಕಲಾವಿದ ಗಣೇಶ ಸೋಮಯಾಜಿ, ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಖಂಡಿಗ ಅಧ್ಯಕ್ಷತೆ ವಹಿಸಿದ್ದರು.
ಮುರಳೀಧರ ಆಚಾರ್ಯ, ಅಭಿಷೇಕ್ ತೀರ್ಥಹಳ್ಳಿ, ಯಶು ಸ್ನೇಹಗಿರಿ ಅವರು ‘ಕಾವ್ಯ ಕುಂಚ’ ಕಾರ್ಯಕ್ರಮ ನಡೆಸಿಕೊಟ್ಟರು.
ಮಕ್ಕಳನ್ನು ಮಾಲ್‌ಗೆ ಮಾತ್ರ ಕರೆದೊಯ್ದರೆ ಅವರು ಕಾಂಕ್ರೀಟ್ ಕಾಡೇ ಸತ್ಯ ಎಂದು ಭಾವಿಸಬಹುದು. ಹಳ್ಳಿಗಳಿಗೆ ಕಾಡುಗಳಿಗೆ ರೈತರ ಮನೆಗೆಗಳಿಗೂ ಅವರನ್ನು ಕರೆದೊಯ್ಯಬೇಕುದಿನೇಶ್ ಹೊಳ್ಳ ರೇಖಾಚಿತ್ರ ಕಲಾವಿದ
‘ಚಿತ್ರಕಲೆಯಿಂದ ನ್ಯೂರಾನ್ ಉದ್ದೀಪನ’
‘ಮಾನವ ಜನಾಂಗ ಸೃಷ್ಟಿಯಾಗಿ ಲಕ್ಷಾಂತರ ವರ್ಷಗಳಾಗಿವೆ. ನಮಗೆ ಗೊತ್ತಿರುವ ಇತಿಹಾಸ 5 ಸಾವಿರ ವರ್ಷಗಳಿಂದ ಈಚಿನದು ಮಾತ್ರ. ನಮ್ಮ ಮಿದುಳಿನಲ್ಲಿ 1.5 ಲಕ್ಷಕ್ಕೂ ಅಧಿಕ ನ್ಯೂರಾನ್‌ಗಳು ಕೆಲಸ ಮಾಡುತ್ತವೆ. ಇವುಗಳಲ್ಲಿ 1.75 ಲಕ್ಷ ವರ್ಷಗಳ ಅನುಭವ ಹುದುಗಿದೆ. ಅವುಗಳನ್ನು ಮೆಲುಕು ಹಾಕಿದಷ್ಟೂ ನೆನಪಿನ ಶಕ್ತಿ ಜಾಸ್ತಿಯಾಗುತ್ತದೆ. ಸ್ಮೃತಿಯಲ್ಲಿ ಹುದುಗಿರುವ ನೆನಪುಗಳ ನ್ಯೂರಾನ್‌ಗಳನ್ನು ಉದ್ದೀಪಿಸಲು ಚಿತ್ರಕಲೆ ಪ್ರೇರಣೆ ನೀಡುತ್ತದೆ’ ಎಂದು ಅರವಿಂದ ಚೊಕ್ಕಾಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.