ADVERTISEMENT

ಮಂಗಳೂರು | ಕೈಗಾರಿಕಾ ಪ್ರಗತಿಗೆ ಕೃತಕ ಬುದ್ಧಿಮತ್ತೆ ಸಹಾಯಕ: ಎಸ್‌.ಸೆಲ್ವಕುಮಾರ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 3:06 IST
Last Updated 25 ಜುಲೈ 2025, 3:06 IST
ಕಾರ್ಯಕ್ರಮದಲ್ಲಿ ಎಸ್.ಸೆಲ್ವಕುಮಾರ್ ಮಾತನಾಡಿದರು. ಅಭಿನವ್ ಬನ್ಸಲ್‌, ಪವನ್ ಕುಮಾರ್‌ ಸಿಂಗ್‌, ವೆಂಕಟರಮಣ ಅಕ್ಕರಾಜು, ದರ್ಶನ್ ಎಚ್‌.ವಿ., ವಿನಾಯಕ ನರ್ವಾಡೆ ಮತ್ತಿತರರು ಭಾಗವಹಿಸಿದ್ದರು. - ಪ್ರಜಾವಾಣಿ ಚಿತ್ರ 
ಕಾರ್ಯಕ್ರಮದಲ್ಲಿ ಎಸ್.ಸೆಲ್ವಕುಮಾರ್ ಮಾತನಾಡಿದರು. ಅಭಿನವ್ ಬನ್ಸಲ್‌, ಪವನ್ ಕುಮಾರ್‌ ಸಿಂಗ್‌, ವೆಂಕಟರಮಣ ಅಕ್ಕರಾಜು, ದರ್ಶನ್ ಎಚ್‌.ವಿ., ವಿನಾಯಕ ನರ್ವಾಡೆ ಮತ್ತಿತರರು ಭಾಗವಹಿಸಿದ್ದರು. - ಪ್ರಜಾವಾಣಿ ಚಿತ್ರ    

ಮಂಗಳೂರು: ‘ರಾಜ್ಯದ ಕರಾವಳಿಯಲ್ಲಿ ಬಂಡವಾಳ ಹೂಡಿಕೆಗೆ ಹೇರಳ ಅವಕಾಶ ಇದೆ. ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಈಚಿನ ಬೆಳವಣಿಗೆಗಳಿಂದ ಸೃಷ್ಟಿಯಾಗಿರುವ ಅವಕಾಶಗಳನ್ನು ಬಳಸಿ ಕೈಗಾರಿಕೆಗಳ ಅಭಿವೃದ್ಧಿಗೆ ಸುಸ್ಥಿರ ವಾತಾವರಣ ರೂಪಿಸಬೇಕಿದೆ’ ಎಂದು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಸೆಲ್ವಕುಮಾರ್ ಹೇಳಿದರು.

‘ಅಭಿವೃದ್ಧಿ ಪಥ: ಸದೃಢ ಭವಿಷ್ಯಕ್ಕಾಗಿ ಮೂಲಸೌಕರ್ಯ ಮತ್ತು ಸಂಪರ್ಕ ಸುಧಾರಣೆ’ ಕುರಿತು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಶ್ರಯದಲ್ಲಿ ಇಲ್ಲಿ ಗುರುವಾರ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರಕು ಸಾಗಣೆ ವಲಯದ ಸಮಸ್ಯೆ ಉದ್ಯಮಿಗಳ ಪಾಲಿಗೆ ದುಸ್ವಪ್ನದಂತೆ. ಪೂರೈಕೆ ಸರಪಣಿ, ಸರಕು ಸಾಗಣೆ ವ್ಯವಸ್ಥೆ ಮೇಲೆ  ಕೃತಕ ಬುದ್ಧಿಮತ್ತೆ ನೇರ ಪರಿಣಾಮ ಬೀರಲಿದೆ. ಮಳೆಗಾಲದಲ್ಲಿ ಕರಾವಳಿ ಕೆಲವೊಮ್ಮೆ ಇತರ ಪ್ರದೇಶಗಳೊಂದಿಗೆ ಸಂಪರ್ಕ ಕಳೆದುಕೊಳ್ಳುತ್ತದೆ. ಇದು ಇಲ್ಲಿನ ಕೈಗಾರಿಕಾ ವಾತಾವರಣದ ಮೇಲೂ ಪರಿಣಾಮ ಬೀರುತ್ತಿದೆ. ಇಲ್ಲಿ ಹಸಿರುಸ್ನೇಹಿ ಮೂಲಸೌಕರ್ಯವನ್ನು ಮತ್ತಷ್ಟು ಸ್ಮಾರ್ಟ್‌ ಮತ್ತು ಸುಸ್ಥಿರವಾಗಿ ಅಭಿವೃದ್ಧಿಪಡಿಸುವ ಸವಾಲು ಇದೆ. ಇಲ್ಲಿನ ಉದ್ಯಮಿಗಳು ಹೊಸ ಆಲೋಚನೆಗಳೊಂದಿಗೆ ಮುಂದೆ ಬಂದರೆ, ಇಲ್ಲೂ ಕೈಗಾರಿಕೆಗೆ ಸದೃಢ  ಮೂಲಸೌಕರ್ಯ ಅಭಿವೃದ್ಧಿ ಸಾಧ್ಯ. ಇದಕ್ಕೆ ಸರ್ಕಾರವೂ ಉತ್ತೇಜನ ನೀಡಲಿದೆ’ ಎಂದರು.

ADVERTISEMENT

‘ರಾಜ್ಯದ ಸಮಗ್ರ ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯ. ವಿದೇಶಿ ಬಂಡವಾಳ ಆಕರ್ಷಣೆ ಹಾಗೂ  ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ನವೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಎಲ್ಲ ರಾಜ್ಯಗಳಿಗಿಂತ ಮುಂದಿದ್ದೇವೆ. ಸರಕು ಸಾಗಣೆ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುವ ಅಗತ್ಯವಿದೆ. ಇದಕ್ಕಾಗಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಹಬ್ ಪಾರ್ಕ್ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ’ ಎಂದರು. 

ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ., ‘ಮೈಸೂರು ಹಾಗೂ ಹುಬ್ಬಳ್ಳಿ–ಧಾರವಾಡಕ್ಕೆ ಹೋಲಿಸಿದರೆ ಮಂಗಳೂರಿನಲ್ಲಿ ಹೂಡಿಕೆ ಕಡಿಮೆ ಇದೆ.  ಅಂತರರಾಷ್ಟ್ರಿಯ ವಿಮಾನನಿಲ್ದಾಣ, ಬಂದರು, ರಾಷ್ಟ್ರೀಯ ಹೆದ್ದಾರಿ ಮೊದಲಾದ ಎಲ್ಲ ಸಂಪರ್ಕ ವ್ಯವಸ್ಥೆಗಳಿದ್ದರೂ ಈ ಹಿನ್ನಡೆ ಏಕೆ  ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಂಚತಾರಾ ಹೋಟೆಲ್‌, ದೊಡ್ಡ ಮಟ್ಟದ ರೆಸಾರ್ಟ್‌, ಸಮಾವೇಶ ಸಭಾಂಗಣಗಳ ಕೊರತೆ ಇಲ್ಲಿದೆ.  ಜಾಗದ ಕೊರತೆ  ನೀಗಲು, ಗಗನಚುಂಬಿ ಕಟ್ಟಡಗಳ ಮೊರೆ ಹೋಗುವ ಸಾಧ್ಯತೆ ಪರಿಶೀಲಿಸಬೇಕಿದೆ. ಇಲ್ಲಿನ ಸಮಸ್ಯೆಗಳನ್ನು ಮೆಟ್ಟಿನಿಂತು ಕೈಗಾರಿಕಾ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸುವ ಆಲೋಚನೆಗಳು ಇಲ್ಲೇ ಹುಟ್ಟಬೇಕು.’ ಎಂದರು.

‘  ಇಲ್ಲಿನ ಅನೇಕ ಉದ್ಯಮಿಗಳು ಸರ್ಕಾರ ನೀಡುವ ಪ್ರೋತ್ಸಾಹ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿಲ್ಲ. ಜಗತ್ತಿನ ಬೇರೆ ಬೇರೆ ಪ್ರದೇಶಗಳಲ್ಲಿ ನೆಲಸಿರುವ ಉದ್ಯಮಿಗಳು ಮಂಗಳೂರನ್ನು ಸಿಲಿಕಾನ್ ಬೀಚ್ ಆಗಿ ಗುರುತಿಸಿ, ಉದ್ಯಮ ಸ್ಥಾಪನೆಗೆ ಪ್ರಶಸ್ತ ತಾಣವನ್ನಾಗಿ ರೂಪಿಸಲು ಕೈಜೋಡಿಸಬೇಕು. ಪರಿಸರ ಸಂರಕ್ಷಣೆ, ಇಲ್ಲಿನ ಜನರ ಏಳಿಗೆಯ ಜೊತೆಗೆ ಕೈಗಾರಿಕಾ ಅಭಿವೃದ್ಧಿಗೂ ಕ್ರಮ ವಹಿಸಬೇಕು’ ಎಂದರು.

ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ವೆಂಕಟರಮಣ ಅಕ್ಕರಾಜು, ‘ಶಿರಾಡಿ ಹಾಗೂ ಸಂಪಾಜೆ‌ ಘಾಟಿಗಳದ್ದು ಪ್ರತಿ ವರ್ಷವೂ ಮುಗಿಯದ ಸಮಸ್ಯೆ. ಶಿರಾಡಿ ಘಾಟಿ ಅಭಿವೃದ್ಧಿ ಕಾಮಗಾರಿ 2026ರ ಮಾರ್ಚ್‌ ಒಳಗೆ ಪೂರ್ಣಗೊಂಡರೆ ಪುಣ್ಯ. ಕೈಗಾರಿಕೆಗಳು ಮಾತ್ರವಲ್ಲ, ಸಾಮಾನ್ಯ ಜನರೂ ಇದರಿಂದ ಸಮಸ್ಯೆ ಎದುರಿಸಬೇಕಾಗುತ್ತಿದೆ. ಬೆಂಗಳೂರು– ಮಂಗಳೂರು ನಡುವಿನ ವಿಮಾನಯಾನ ದರ ಕೆಲವೊಮ್ಮೆ ₹ 18ಸಾವಿರದ ವರೆಗೂ ತಲುಪುತ್ತದೆ. ಮಂಗಳೂರಿನ ಸಾರಿಗೆ ಸಂಪರ್ಕದ ಸಮಸ್ಯೆ ಇನ್ನೂ ಏಕೆ ಬಗೆಹರಿದಿಲ್ಲ ಎಂಬುದು ಯಕ್ಷಪ್ರಶ್ನೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿಐಐ ಕರ್ನಾಟಕ ಘಟಕದ ಮೂಲಸೌಕರ್ಯ ಮತ್ತು ನಗರ ಸಾರಿಗೆ ಸಮಿತಿಯ ಸಂಚಾಲಕ ಪವನ್ ಕುಮಾರ್ ಸಿಂಗ್‌ ಪ್ರಸ್ತಾವಿಕವಾಗಿ ಮಾತನಾಡಿದರು. ಸಿಐಐ ಮಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ನಟರಾಜ ಹೆಗ್ಡೆ ಸ್ವಾಗತಿಸಿದರು. ಉಪಾಧ್ಯಕ್ಷ ಅಭಿನವ್ ಬನ್ಸಲ್ ಧನ್ಯವಾದ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ ಭಾಗವಹಿಸಿದ್ದರು.

‘ಕರಾವಳಿ: ಐಟಿ ಕ್ಷೇತ್ರದಲ್ಲಿ 2 ಲಕ್ಷ ಉದ್ಯೋಗ ಸೃಷ್ಟಿ’

‘ಕರಾವಳಿಯ ಎಂಆರ್‌ಪಿಎಲ್ ಸಂಸ್ಥೆ ಪ್ರಸ್ತುತ 2550 ಮಂದಿಗೆ ಉದ್ಯೋಗ ನೀಡುತ್ತಿದ್ದರೆ ಇಲ್ಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳು 20ಸಾವಿರ ಮಂದಿಗೆ ಉದ್ಯೋಗ ಒದಗಿಸಿವೆ. 2034ರ ವೇಳೆಗೆ ಐಟಿ ಕಂಪನಿಗಳು ಇಲ್ಲಿ 2 ಲಕ್ಷ ಮಂದಿಗೆ ಉದ್ಯೋಗ ನೀಡಲಿವೆ’ ಎಂದು ರೋಬೋಸಾಫ್ಟ್‌ ಸಂಸ್ಥಾಪಕ ರೋಹಿತ್ ಭಟ್ ತಿಳಿಸಿದರು. ‘ಪ್ರಸ್ತುತ ಕರಾವಳಿಯ ಐ.ಟಿ ಉದ್ಯೋಗಿಗಳ ವಾರ್ಷಿಕ ವೇತನದ ಅಂದಾಜು ಮೊತ್ತ ₹1800 ಕೋಟಿ. ಅದು 2034ರ ವೇಳೆಗೆ ₹ 24ಸಾವಿರ ಕೋಟಿಗೆ ಹೆಚ್ಚಲಿದೆ. ಈ ಮೊತ್ತವೂ ಒಂದಿಲ್ಲ ಒಂದು ರೀತಿಯಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಬಳಕೆ ಆಗಲಿದೆ. ಐ ಟಿ ಕ್ಷೇತ್ರದ ಪ್ರತಿ ಒಂದು ಉದ್ಯೋಗವೂ ನಾಲ್ಕರಿಂದ ಐದು ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಲಿದೆ’ ಎಂದರು.

'ಕರಾವಳಿಯಲ್ಲಿ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿ' ಕುರಿತು ಬಿಯಾಂಡ್ ಬೆಂಗಳೂರು ತಂಡದ ಸುವಿನ್ ನಾರಾಯಣ್‌ 'ಭವಿಷ್ಯದ ತಂತ್ರಜ್ಞಾನ ತಾಣವಾಗಿ ಮಂಗಳೂರಿನ ಅಭಿವೃದ್ಧಿ’ ಕುರಿತು ನಿವಿಯಸ್ ಸಲ್ಯೂಷನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಯೋಗ್‌ ಶೆಟ್ಟಿ ಹಾಗೂ ಅರೆವಾಹನ ಕ್ಷೇತ್ರದ ಅವಕಾಶಗಳ ಬಗ್ಗೆ ವಿಪ್ರೊ ಸಂಶೋಧನಾ ವಿಭಾಗದ ಮುಖ್ಯ ವಿಜ್ಞಾನಿ ಜಿ.ಸುಂದರರಾಮನ್‌ ಬೆಳಕು ಚೆಲ್ಲಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.