ಮಂಗಳೂರು: ‘ಕಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಡಿಸೋಜ ಅವರ ಮೇಲೆ ಅಡ್ಯಾರ್ ಸೇತುವೆ ಬಳಿ ಶನಿವಾರ ಹಲ್ಲೆ ನಡೆಸಿದ ಆರೋಪಿಗಳನ್ನು 24 ಗಂಟೆಗಳ ಒಳಗಾಗಿ ಬಂಧಿಸಬೇಕು. ಪಾವೂರು, ಉಳಿಯ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕಥೋಲಿಕ್ ಸಭಾದ ಕೇಂದ್ರೀಯ ಸಮಿತಿ ಒತ್ತಾಯಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೊಮವಾರ ಮಾತನಾಡಿದ ಕಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಪಾವ್ಲ್ ರಾಲ್ಫಿ ಡಿಕೋಸ್ತ, ‘ಅಲ್ವಿನ್ ಮೇಲೆ ಹಲ್ಲೆ ನಡೆಸಿದವರನ್ನು 24 ಗಂಟೆಗಳ ಒಳಗೆ ಬಂಧಿಸದಿದ್ದರೆ ನಗರ ಪೊಲೀಸ್ ಆಯುಕ್ತ ಕಚೇರಿ, ಜಿಲ್ಲಾಧಿಕಾರಿಯವರ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಎದುರು ಧರಣಿ ನಡೆಸುತ್ತೇವೆ‘ ಎಂದರು.
‘ಪಾವೂರು ಉಳಿಯ ದ್ವೀಪದ ಬಳಿ ಅಕ್ರಮ ಮರಳುಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ನಾವು ಸೆ. 27ರಂದು ನಗರದಲ್ಲಿ ಪ್ರತಿಭಟನೆ ನಡೆಸಿದ್ದೆವು. ಆ ಬಳಿಕ, ಅಕ್ರಮ ಮರಳುಗಾರಿಕೆಗೆ ಬಳಕೆಯಾಗುತ್ತಿದ್ದ 20 ದೋಣಿಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ವಶಕ್ಕೆ ಪಡೆದಿದ್ದರು. ಅಲ್ಲಿನ ವಸ್ತು ಸ್ಥಿತಿ ಬಗ್ಗೆ ತೋರಿಸಲು ಅಲ್ವಿನ್ ಅವರು ಪತ್ರಕರ್ತರನ್ನು ಕರೆದೊಯ್ದಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ನಮ್ಮ ಬಳಿ ವಿಡಿಯೊಗಳಿವೆ. ಪೊಲೀಸರಿಗೂ ದಾಖಲೆ ಒದಗಿಸಿದ್ದೇವೆ. ಆದರೂ, ಆರೋಪಿಗಳ ವಿರುದ್ಧ ಕ್ರಮವಾಗಿಲ್ಲ’ ಎಂದು ದೂರಿದರು.
‘ಅಕ್ರಮ ಮರಳುಗಾರಿಕೆ ದಂಧೆಯು ಪಾವೂರು ಉಳಿಯ ನಿವಾಸಿಗಳ ಬದುಕನ್ನೇ ಕಸಿದುಕೊಳ್ಳುತ್ತಿದೆ. ದ್ವೀಪದ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮಳೆಗಾಲ ಮುಗಿದ ಬಳಿಕ ಸ್ಥಳೀಯರು ಸೇರಿ ಇಲ್ಲಿ ಸೇತುವೆ ನಿರ್ಮಿಸುತ್ತಿದ್ದರು. ಮರಳುಗಾರಿಕೆಯಿಂದ ನದಿ ಆಳವಾಗಿರುವುದರಿಂದ ಈ ಸಲ ಸೇತುವೆ ನಿರ್ಮಿಸಲೂ ಸಾಧ್ಯವಾಗುತ್ತಿಲ್ಲ. ಹತ್ತು ವರ್ಷಗಳಿಂದ ಪದೇ ಪದೇ ಹೋರಾಟ ನಡೆಸಿದರೂ ಅಕ್ರಮ ಮರಳುಗಾರಿಕೆಯನ್ನು ಸರ್ಕಾರ ತಡೆದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾನ ಮನಸ್ಕ ಸಂಘಟನೆ ಜಂಟಿ ವೇದಿಕೆಯ ಸುನಿಲ್ ಕುಮಾರ್ ಬಜಾಲ್, ‘ಅಲ್ವಿನ್ ಮೇಲಿನ ಹಲ್ಲೆಯನ್ನು ನಮ್ಮ ವೇದಿಕೆಯು ಖಂಡಿಸುತ್ತದೆ. ಕಥೋಲಿಕ್ ಸಭಾ ಅಧ್ಯಕ್ಷರ ಮೇಲೆ ದಾಳಿ ನಡೆದ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೂ ಕ್ರಮವಾಗಿಲ್ಲ ಏಕೆ’ ಎಂದು ಪ್ರಶ್ನಿಸಿದರು.
ದ್ವೀಪವಾಸಿಗಳಿಗೆ ಜಿಲ್ಲಾಡಳಿತ ಭದ್ರತೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ಫಾ.ಜೆ.ಬಿ.ಸಲ್ಡಾನ, ಉಪಾಧ್ಯಕ್ಷ ಸ್ವೀವನ್ ರಾಡ್ರಿಗಸ್, ಪ್ರಧಾನ ಕಾರ್ಯದರ್ಶಿ ಅಲ್ವಿನ್ ಮೊಂತೆರೊ, ಮಾಜಿ ಅಧ್ಯಕ್ಷ ಸ್ಪ್ಯಾನಿ ಲೋಬೊ, ಪಾವೂರು ಉಳಿಯ ದ್ವೀಪ ನಿವಾಸಿ ಗಿಲ್ಬರ್ಟ್ ಡಿಸೋಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.