ADVERTISEMENT

ಮಂಗಳೂರು | ಹಳೆ ಆಯುಷ್ಮಾನ್‌ ಭಾರತ್‌ ಕಾರ್ಡ್‌ ಇನ್ನು ಅನೂರ್ಜಿತ

ಎಬಿ ಪಿಎಂ ಜೆಎಎವೈ ಎಆರ್‌ಕೆ ಹೊಸ ಕಾರ್ಡ್‌ ಜಾರಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 16:02 IST
Last Updated 9 ಸೆಪ್ಟೆಂಬರ್ 2022, 16:02 IST

ಮಂಗಳೂರು: ಆಯುಷ್ಮಾನ್‌ ಭಾರತ್‌ ಪ್ರಧಾನ ಮಂತ್ರಿ ಜನ ಆರೋಗ್ಯ ಕರ್ನಾಟಕ (ಎಬಿ ಪಿಎಂ ಜೆಎಎವೈ ಎಆರ್‌ಕೆ) ಸಹಬ್ರ್ಯಾಂಡ್ ಕಾರ್ಡನ್ನು ಸರ್ಕಾರ ಜಾರಿಗೆ ತಂದಿದ್ದು, ಚಾಲ್ತಿಯಲ್ಲಿರುವ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್‌ಗಳು ಅನೂರ್ಜಿತಗೊಳ್ಳಲಿವೆ.ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ನ ದಾಖಲೆ ಒದಗಿಸಿ ‘ಗ್ರಾಮ ವನ್‌’ ಕೇಂದ್ರಗಳಲ್ಲಿ ಈ ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕಿಶೋರ್‌ ಕುಮಾರ್‌ ಎ. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈಗಾಗಲೇ ಆಯುಷ್ಮಾನ್‌ ಭಾರತ್ ಕಾರ್ಡ್‌ ಹೊಂದಿದ್ದವರೂ ಇನ್ನು ಸರ್ಕಾರಿ ಆರೋಗ್ಯ ಸೌಲಭ್ಯ ಪಡೆಯಬೇಕಾದರೆ ಎಬಿ ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ ಮಾಡಿಸುವುದು ಕಡ್ಡಾಯ. ವೆನ್ಲಾಕ್‌ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಈ ಹಿಂದೆ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ಮಾಡಿಕೊಡಲಾಗುತ್ತಿತ್ತು. ಈ ಆಸ್ಪತ್ರೆಗಳಲ್ಲಿ ಕಾರ್ಡ್‌ ಮಾಡಿಕೊಡುವುದನ್ನು ಸ್ಥಗಿತಗೊಳಿಸಲಾಗಿದೆ’ ಎಂದರು.

ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಅಭಿಯಾನದ ಜಿಲ್ಲಾ ಸಂಯೋಜಕ ಡಾ.ಸುದರ್ಶನ್‌, ‘ಎಲ್ಲರೂ ಎಬಿ ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ಗಳನ್ನು ಮಾಡಿಸಿದರೆ ಒಳ್ಳೆಯದು. ಬಿಪಿಎಲ್‌ ಕುಟುಂಬಗಳು ವರ್ಷದಲ್ಲಿ ಗರಿಷ್ಠ ₹ 5 ಲಕ್ಷ ಹಾಗೂ ಎಪಿಎಲ್‌ ಕುಟುಂಬಗಳಿಗೆ ಗರಿಷ್ಠ ₹ 1.50 ಲಕ್ಷದವರೆಗಿನ ಚಿಕಿತ್ಸೆ ವೆಚ್ಚವನ್ನು ಭರಿಸಲು ಈ ಕಾರ್ಡ್ ನೆರವಾಗಲಿದೆ. ಈ ಕಾರ್ಡನ್ನು ದೇಶದಾದ್ಯಂತ ಬಳಸಬಹುದು. ಆರೋಗ್ಯ ಸೇವೆ ಪಡೆಯಲು ದಾಖಲೆಗಳಿಗಾಗಿ ಅಲೆಯುವುದನ್ನು ಇದು ತಪ್ಪಿಸಲಿದೆ’ ಎಂದು ವಿವರಿಸಿದರು.

ADVERTISEMENT

ಆರೋಗ್ಯ ಮಾಹಿತಿಯ ಕಣಜ ‘ಅಭಾ’
ಕೇಂದ್ರ ಸರ್ಕಾರ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಅಭಿಯಾನವನ್ನು ಆರಂಭಿಸಿದೆ. ಇದರಡಿ ನೋಂದಾಯಿತ ಪ್ರತಿ ವ್ಯಕ್ತಿಗೆ ಪ್ರತ್ಯೇಕ 14 ಅಂಕಿಗಳ ಸಂಖ್ಯೆಯನ್ನು ನೀಡಿ, ಅದರ ಮೂಲಕ ಆಯುಷ್ಮಾನ್‌ ಭಾರತ್‌ ಆರೋಗ್ಯ ಖಾತೆಯನ್ನು (ಆಭಾ) ನಿರ್ವಹಿಸಲಾಗುತ್ತದೆ. ವ್ಯಕ್ತಿಯು ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅವರ ಆರೋಗ್ಯ ಸಂಬಂಧಿ ವಿವರಗಳು ಈ ಖಾತೆಯಲ್ಲಿ ನಮೂದಾಗುತ್ತವೆ. ವ್ಯಕ್ತಿಯ ಆರೋಗ್ಯ ಸಂಬಂಧಿಸಿದ ಸಮಗ್ರ ಚಿತ್ರಣವನ್ನು ಇದರಲ್ಲಿ ಸಂರಕ್ಷಿಸಬಹುದು.

ಮುಂದುವರಿದ ಚಿಕಿತ್ಸೆ ಪಡೆಯುವಾಗ ಮತ್ತೆ ಹೊಸತಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವ ಅಗತ್ಯ ಇಲ್ಲ. ಈ ದಾಖಲೆಗಳನ್ನು ಬೇರೆಯವರಿಗೆ ಹಸ್ತಾಂತರಿಸಬೇಕಾದರೆ ವ್ಯಕ್ತಿಯ ಸಮ್ಮತಿ ಅಗತ್ಯ. ಅಭಾ ಖಾತೆ ಮಾಡಿಸುವುದು ಕಡ್ಡಾಯವಲ್ಲ. ಇದರಲ್ಲಿ ಸಂಗ್ರಹಿಸಿದ ಆರೋಗ್ಯ ದಾಖಲೆಗಳನ್ನು ಅಳಿಸುವುದಕ್ಕೂ ಅವಕಾಶಗಳಿವೆ. ಸಾರ್ವಜನಿಕರು ನೇರವಾಗಿ (https://abha.abdm.gov.in/register) ಆಭಾ ಯೋಜನೆಯಡಿ ನೋದಾಯಿಸಬಹುದು. ಜಿಲ್ಲೆಯಲ್ಲಿ 4.71 ಲಕ್ಷ ಕುಟುಂಬಗಳು ಆಯುಷ್ಮಾನ್‌ ಭಾರತ್ ಕಾರ್ಡ್‌ ಪಡೆದಿದ್ದವು ಎಂದು ಡಾ.ಸುದರ್ಶನ್ ಮಾಹಿತಿ ನೀಡಿದರು.

ಆಭಾ ನಂಬರ್‌ ಅನ್ನು ಕಾರ್ಡ್‌ ಅನ್ನು (https://healthid.ndhm.gov.in/link.) ಮೊಬೈಲ್‌ ಮೂಲಕ ಅಥವಾ ಸೈಬರ್‌ ಸೆಂಟರ್‌ಗಳ ಮೂಲಕವೂ ಪಡೆದುಕೊಳ್ಳಬಹುದು. ಇದಕ್ಕೆ ಕೇವಲ ಮೂರು ಹಂತದ ನೋಂದಣಿ ಪ್ರಕ್ರಿಯೆ ಪೂರ್ತಿಗೊಳಿಸಬೇಕಾಗುತ್ತದೆ ಎಂದರು

‘ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆದ್ಯತೆ’
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕಿ ಡಾ.ಯಶಸ್ವಿನಿ, ‘ತುರ್ತು ಚಿಕಿತ್ಸೆ ಅಗತ್ಯ ಇರುವವರು ಹಾಗೂ ಅಪಘಾತಕ್ಕೊಳಗಾದವರು ಮಾತ್ರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಗೊತ್ತುಪಡಿಸಲಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಉಳಿದವರು ಸರ್ಕಾರಿ ಆಸ್ಪತ್ರೆಗಳಲ್ಲಿ ಆ ನಿರ್ದಿಷ್ಟ ಚಿಕಿತ್ಸೆ ಲಭ್ಯ ಇಲ್ಲ ಎಂಬ ಬಗ್ಗೆ ದಾಖಲೆಗಳನ್ನು ಪಡೆದು ನಂತರಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು. ಎಬಿ ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ ಜಾರಿಯಾದಂದಿನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುವ ರೆಫರೆಲ್‌ ನಮೂನೆಗಳನ್ನು ಡಿಜಿಟಿಲೀಕರಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ದಿಷ್ಟ ಚಿಕಿತ್ಸೆ ಲಭ್ಯ ಇದ್ದರೆ, ಆ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ರೆಫರ್‌ ಮಾಡುವುದಕ್ಕೆ ಅವಕಾಶವೇ ಇಲ್ಲ’ ಎಂದು ವಿವರಿಸಿದರು.

ಎಸ್‌ಎಎಸ್‌ಟಿಯ ಪ್ರಾದೇಶಿಕ ಸಂಯೋಜಕಿ ನೌಷಾತ್‌ ಬಾನು, ಜಿಲ್ಲಾ ಆರೋಗ್ಯ ಸಂರ್ವೇಕ್ಷಣಾಧಿಕಾರಿ ಡಾ. ಜಗದೀಶ್, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ರಾಜೇಶ್ ಇದ್ದರು.

ಅಂಕಿ ಅಂಶ
17,20,031
:ಜಿಲ್ಲೆಯಲ್ಲಿ ಎಬಿ ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ ವಿತರಣೆಗೆ ನಿಗದಿಪಡಿಸಿದ ಗುರಿ
10,99,064:ಜಿಲ್ಲೆಯಲ್ಲಿ ಎಬಿ ಪಿಎಂ ಜೆಎಎವೈ ಎಆರ್‌ಕೆ ಕಾರ್ಡ್‌ ಪಡೆಯಲು ಅರ್ಹತೆ ಪಡೆದ ಬಿಪಿಎಲ್‌ ಕುಟುಂಬಗಳು
282:ಗ್ರಾಮ ವನ್‌ ಕೇಂದ್ರಗಳಲ್ಲಿ ಕಾರ್ಡ್‌ ಮಾಡಿಸಿಕೊಳ್ಳಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.