ADVERTISEMENT

ಬದಿಯಡ್ಕ: ಮಲಯಾಳಂ ಶಿಕ್ಷಕಿಯ ನೇಮಕ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 14:26 IST
Last Updated 3 ಜೂನ್ 2023, 14:26 IST
ಅಡೂರಿನ ಸರ್ಕಾರಿ ಶಾಲೆಯ ಕನ್ನಡ ವಿಭಾಗಕ್ಕೆ ಮಲಯಾಳಂ ಶಿಕ್ಷಕಿಯ ನೇಮಕ ವಿರೋಧಿಸಿ ಕನ್ನಡ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು
ಅಡೂರಿನ ಸರ್ಕಾರಿ ಶಾಲೆಯ ಕನ್ನಡ ವಿಭಾಗಕ್ಕೆ ಮಲಯಾಳಂ ಶಿಕ್ಷಕಿಯ ನೇಮಕ ವಿರೋಧಿಸಿ ಕನ್ನಡ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು   

ಬದಿಯಡ್ಕ: ಅಡೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರೌಢಶಾಲಾ ಕನ್ನಡ ವಿಭಾಗದ ಸಮಾಜ ವಿಜ್ಞಾನ ವಿಷಯಕ್ಕೆ ಮಲಯಾಳಂ ಶಿಕ್ಷಕಿಯನ್ನು ನೇಮಕ ಮಾಡಿರುವುದನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ನಡೆಯಿತು.

ಪ್ರೌಢಶಾಲೆ ವಿಭಾಗದ ಸುಮಾರು 350 ಕನ್ನಡ ಮಕ್ಕಳು, ಕನ್ನಡ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶಾಲೆಗೆ ಬಂದ ಮಲಯಾಳಂ ಶಿಕ್ಷಕಿಯನ್ನು ಶಾಲಾ ಪಿಟಿಎ ಸದಸ್ಯರು, ಮಕ್ಕಳು ಹಾಗೂ ಪೋಷಕರು ಮುಖ್ಯಶಿಕ್ಷಕರ ಭೇಟಿಗೆ ಅನುಮತಿ ನೀಡದೆ, ಬೇರೆ ಶಾಲೆಯಲ್ಲಿ ಉದ್ಯೋಗ ಮಾಡಲು ಸಹಕಾರ ನೀಡುವ ಭರವಸೆ ನೀಡಿ, ಸಮಾಧಾನಿಸಿ ಕಳುಹಿಸಿದ್ದರು.

ADVERTISEMENT

ಆಗ ಶಾಲೆಯಿಂದ ನಿರ್ಗಮಿಸಿದ ಶಿಕ್ಷಕಿ ಆದೂರು ಠಾಣೆಗೆ ತೆರಳಿ, ಪೊಲೀಸರನ್ನು ಕರೆದುಕೊಂಡು ಬಂದಿದ್ದರು. ಕಾರ್ಯ ನಿಮಿತ್ತ ತೆರಳಿದ್ದ ಎಲ್ಲ ಕನ್ನಡಿಗರೂ ಮತ್ತೆ ಶಾಲೆಯಲ್ಲಿ ಸೇರಿದ್ದರು. ಶಾಲೆಯಲ್ಲಿ ತಾತ್ಕಾಲಿಕ ಶಿಕ್ಷಕರ ನೇಮಕಾತಿ ಸಂದರ್ಶನ ನಡೆಯುತ್ತಿದ್ದುದರಿಂದ ಮುಖ್ಯ ಶಿಕ್ಷಕರ ಭೇಟಿ ಸಾಧ್ಯವಾಗಲಿಲ್ಲ. ಅದುವರೆಗೂ ಕನ್ನಡ ವಿದ್ಯಾರ್ಥಿಗಳು ಉಪವಾಸವಿದ್ದು ಪ್ರತಿಭಟನೆ ನಡೆಸಿದರು.

ಶಾಲಾ ಶಿಕ್ಷಕರು ಒತ್ತಾಯಿಸಿದರೂ, ಊಟ ಮಾಡದ ಮಕ್ಕಳು, ‘ಮಲಯಾಳಂ ಶಿಕ್ಷಕಿ ನಮಗೆ ಬೇಡ’ ಎಂಬ ಘೋಷಣೆಯೊಂದಿಗೆ ನಿರಶನ ಸತ್ಯಾಗ್ರಹ ನಡೆಸಿದರು. ಈ ವೇಳೆ ಕಚೇರಿಗೆ ಬಮದ ಶಾಲಾ ಮುಖ್ಯಶಿಕ್ಷಕರು ಘಟನಾವಳಿ ತಿಳಿದು ಅಸ್ವಸ್ಥರಾಗಿ ಕುಸಿದು ಬಿದ್ದರು.

ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮುಖ್ಯಶಿಕ್ಷಕರಿಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ವೈದ್ಯರ ಸಲಹೆಯಂತೆ ಮನೆಗೆ ತೆರಳಿದರು.

ಸೋಮವಾರದಿಂದ ಮತ್ತೆ ಶಿಕ್ಷಕಿಯ ನೇಮಕಾತಿ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಕನ್ನಡ ವಿದ್ಯಾರ್ಥಿಗಳು ಘೋಷಿಸಿದ್ದಾರೆ. ಕನ್ನಡಿಗ ಶಿಕ್ಷಕರನ್ನೇ ಅಡೂರು ಸರ್ಕಾರಿ ಶಾಲೆಗೆ ಕಳುಹಿಸಿಕೊಡುವಂತೆ ಜಿಲ್ಲಾ ವಿದ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.