ಬಜಪೆ: ಅಡ್ಡೂರು ಗ್ರಾಮದ ಕೋಡಿಬೆಟ್ಟು ಕಡೆಗೆ ಹೋಗುವ ರಸ್ತೆಯ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಹಾಗೂ ಅದರ ಸಾಗಾಟಕ್ಕೆ ಬಳಸಿದ್ದ ಟಿಪ್ಪರ್ ಲಾರಿಯನ್ನು ಬಜಪೆ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಲಾರಿಯ ಬೆಲೆ ₹ 3 ಲಕ್ಷ. ವಾಹನದಲ್ಲಿ ಎರಡು ಯೂನಿಟ್‌ಗಳಷ್ಟು ಮರಳಿದ್ದು, ಅದರ ಮೌಲ್ಯ ₹ 5 ಸಾವಿರ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನಿಡಿದ್ದಾರೆ.
‘ಬಜಪೆ ಠಾಣೆಯ ಪಿಎಸ್‌ಐ ಲತಾ ಅವರು ಗಸ್ತು ಕಾರ್ಯ ನಿರತರಾಗಿದ್ದಾಗ ಕೋಡಿಬೆಟ್ಟು ರಸ್ತೆ ಬಳಿ ಟಿಪ್ಪರ್ ಲಾರಿ ಎದುರಾಗಿತ್ತು. ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ, ಚಾಲಕ ಹಿಂದಕ್ಕೆ ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಚಾಲಕನನ್ನು ಹಿಡಿದು ವಿಚಾರಿಸಿದಾಗ ಗುರುಪುರದಲ್ಲಿ ಫಲ್ಗುಣಿ ನದಿಯಿಂದ ರಾಜಧನ ಪಾವತಿಸದೇ ತೆಗೆದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಒಪ್ಪಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕನನ್ನು ತೋಕೂರು ಗ್ರಾಮದ ಹಳೆಯಂಗಡಿಯ ಆದಿತ್ಯ ಕೀರ್ತನ್ (40) ಎಂದು ಗುರುತಿಸಲಾಗಿದೆ. ಆತ ಲಾರಿಯ ಮಾಲೀಕರ ಇಬ್ಬ ಜೊತೆ ಸೇರಿ ಮರಳು ಅಕ್ರಮ ಸಾಗಾಟ ದಂಧೆಯಲ್ಲಿ ತೊಡಗಿದ್ದ. ಪಿಎಸ್‌ಐ ಲತಾ ನೀಡಿದ ದೂರಿನ ಅನ್ವಯ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.