ADVERTISEMENT

ಅಮೃತ ಮಹೋತ್ಸವದ ಸಂಭ್ರಮದಲ್ಲಿ ಬಳಂಜ ಸರ್ಕಾರಿ ಶಾಲೆ

ಉದ್ಯಮಿ ಅಶ್ವತ್ ಹೆಗ್ಡೆಯಿಂದ ಕಲಿತ ಶಾಲೆಗೆ ₹ 15 ಲಕ್ಷದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 3:13 IST
Last Updated 20 ನವೆಂಬರ್ 2025, 3:13 IST
ಬಳಂಜ ಸರ್ಕಾರಿ ಶಾಲೆ
ಬಳಂಜ ಸರ್ಕಾರಿ ಶಾಲೆ   

ಬೆಳ್ತಂಗಡಿ: ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಪ್ರೋತ್ಸಾಹ, ಮನಸ್ಸಿಗೆ ಮುದ ನೀಡುವ ವಾತಾವರಣ ಕಲ್ಪಿಸಿದರೆ ಸರ್ಕಾರಿ ಶಾಲೆಗಳು ಬೆಳೆಯುವ ಜತೆಗೆ ವಿದ್ಯಾರ್ಥಿಗಳೂ ಉತ್ತಮ ಸಾಧನೆ ಮಾಡಬಹುದು ಎಂದು ಮನಗಂಡ ಉದ್ಯಮಿ ಅಶ್ವಥ್ ಹೆಗ್ಡೆ ಅವರು ಕಲಿತ ಬಳಂಜ ಶಾಲೆಗೆ ಕೊಡುಗೆ ನೀಡುವ ಮೂಲಕ ಎಲ್ಲರನ್ನೂ ಶಾಲೆಯ ಕಡೆಗೆ ಆಕರ್ಷಿಸುವಂತೆ ಮಾಡಿದ್ದಾರೆ.

ಬಳಂಜ ಹೊಸಮನೆ ಕೋಟಿ ಯಾನೆ ಕಿ‌ನ್ನಿ ಪಡಿವಾಳರು ಶೈಕ್ಷಣಿಕವಾಗಿ ಎಲ್ಲರೂ ಸ್ವತಂತ್ರರಾಗಬೇಕು ಎಂದು ಪ್ರಾರಂಭಿಸಿದ ಬಳಂಜ ಪ್ರಾಥಮಿಕ ಶಾಲೆಯು ಇದೀಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮ ಸ್ಮರಣೀಯವಾಗಿಸಲು ಶಾಲೆಯ ಸಂಪೂರ್ಣ ಅಭಿವೃದ್ಧಿಗೆ ಆದ್ಯತೆ ನೀಡಿ ಶಾಲೆಗೆ ಹೊಸ ಜೀವಕಲೆ ತುಂಬುವ ಕೆಲಸವನ್ನು ಅಶ್ವಥ್ ಹೆಗ್ಡೆ ಮಾಡಿದ್ದಾರೆ.

ಅಶ್ವಥ್ ಹೆಗ್ಡೆ ಅವರ ಫೌಂಡೇಷನ್‌ ವತಿಯಿಂದ ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಶಾಲೆಯ ಎಲ್ಲ ಕೊಠಡಿಗಳಿಗೆ ಟೈಲ್ಸ್ ಅಳವಡಿಕೆ, ಶಾಲೆಯ ಮುಂಭಾಗ ಇಂಟರ್ ಲಾಕ್, ಶಾಲಾ ಮಂಟಪಕ್ಕೆ ಟೈಲ್ಸ್, ಶಿಕ್ಷಕರ ಕಚೇರಿ, ಸ್ವಾಗತ ಗೋಪುರ, ಧ್ವಜಸ್ತಂಭ ನಿರ್ಮಿಸಿದ್ದಾರೆ. ಜತೆಗೆ ಉಮಾಮಹೇಶ್ವರ ಯುವಕ ಮಂಡಲದಿಂದಲೂ ಪ್ರಗತಿ ಕಾರ್ಯ ನಡೆದಿವೆ.

ADVERTISEMENT

ಬಳಂಜ ಶಾಲೆಯಲ್ಲಿಯೇ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸಿದರೆ ಊರಿನಲ್ಲೇ ಆಂಗ್ಲ ಶಿಕ್ಷಣ ಪಡೆಯಬಹುದು ಎಂಬುದನ್ನು ಮನಗಂಡು ಮನೋಹರ ಬಳಂಜ ಅವರ ಅಧ್ಯಕ್ಷತೆಯಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ರಚನೆಯಾಯಿತು. ಹೀಗಾಗಿ ಎಲ್‌ಕೆಜಿ, ಯುಕೆಜಿಯಲ್ಲಿ ಸುಮಾರು 80 ವಿದ್ಯಾರ್ಥಿಗಳು ಇಲ್ಲಿ ಇದ್ದಾರೆ.

ಶಾಲೆಯು ಉತ್ತಮ ಶಿಕ್ಷಣದ ಜತೆ ಅತ್ಯುತ್ತಮ ಫಲಿತಾಂಶವನ್ನು ಪ್ರತಿ ವರ್ಷ ನೀಡುತ್ತಿದ್ದು, ಕಲೆ, ಕ್ರೀಡೆ, ಸಾಹಿತ್ಯಕ್ಕೂ ಶಿಕ್ಷಕರು ಒತ್ತು ನೀಡುತ್ತಿದ್ದಾರೆ. ಶಾಲೆಯಲ್ಲಿ ಎಲ್.ಕೆ.ಜಿಯಿಂದ ಎಸ್ಎಸ್‌ಎಲ್‌ಸಿವರೆಗೆ ದಾಖಲಾತಿ ಹೆಚ್ಚಿಸಲು, ಮಕ್ಕಳನ್ನು ಸೆಳೆಯಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ನಡೆಯುವ ಶಾಲೆಯ ಅಮೃತ ಮಹೋತ್ಸವಕ್ಕೆ ಪೂರ್ವ ತಯಾರಿ ನಡೆಯುತ್ತಿದೆ. ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಊರಿನ ಪ್ರಮುಖರಾದ ಕೆ.ವಸಂತ ಸಾಲಿಯಾನ್, ಎಚ್.ಧರ್ಣಪ್ಪ ಪೂಜಾರಿ ಅವರ ಮಾರ್ಗದರ್ಶನದಿಂದ ಶಾಲೆಯ ಚಟುವಟಿಕೆ ನಡೆಯುತ್ತಿವೆ. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಬಳಂಜ ಗ್ರಾಮ‌ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ಪಿ.ಕೆ., ಕಾರ್ಯಾಧ್ಯಕ್ಷರಾಗಿ ಸುರೇಶ್ ಶೆಟ್ಟಿ ಕುರೆಲ್ಯ, ಪ್ರಧಾನ ಸಂಚಾಲಕ ಅಶ್ವತ್ ಹೆಗ್ಡೆ ಬಳಂಜ, ಸಮಿತಿ ಪದಾಧಿಕಾರಿಗಳ ಸಹಕಾರದಿಂದ ಪೂರ್ವತಯಾರಿ ನಡೆಯುತ್ತಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ವೈ, ಶಾಲೆಯ ಮುಖ್ಯಶಿಕ್ಷಕ ರಂಗಸ್ವಾಮಿ, ಪ್ರೌಢ ಶಾಲಾ ಮುಖ್ಯಶಿಕ್ಷಕಿ ಸುಲೋಚನ ಅವರು ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.

ಶಾಲೆಯನ್ನು ಬೆಳೆಸುವಲ್ಲಿ ಅನೇಕರ ಶ್ರಮವಿದೆ. ಅವರಲ್ಲಿ ದಿ.ಅನಿಲ್ ನಾಯ್ಗ ಅಟ್ಲಾಜೆ ಪ್ರಮುಖರು. ಹಲವು ಅಭಿವೃದ್ಧಿ ಕಾರ್ಯಗಳ ಜತೆ ನಮ್ಮೂರಿನ ಮಕ್ಕಳಿಗೆ ಸುಸಜ್ಜಿತ ತರಗತಿಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಅನಿಲ್ ನಾಯ್ಗ ಅಟ್ಲಾಜೆ ಅವರ ಸವಿನೆನಪಿಗಾಗಿ ಈ ಶಾಶ್ವತ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಅಶ್ವಥ್ ಹೆಗ್ಡೆ ಬಳಂಜ ತಿಳಿಸಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯದ ದಾರಿ ಕಲ್ಪಿಸಿದ ಶಾಲೆ. ಅಶ್ವಥ್ ಹೆಗ್ಡೆಯವರು ಸುಮಾರು ₹ 15 ಲಕ್ಷ ವೆಚ್ಚದಲ್ಲಿ ಶಾಲಾ ಸೌಂದರ್ಯೀಕರಣದ ಕೊಡುಗೆ ನೀಡಿ ಎಲ್ಲ ಹಿರಿಯ ವಿದ್ಯಾರ್ಥಿಗಳ ಮತ್ತು ವಿದ್ಯಾಭಿಮಾನಿಗಳ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ. ತಿಳಿಸಿದರು.

ಗುಣಮಟ್ಟದ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಜತೆಗೆ ಸಂಸ್ಕಾರಯುತ ಶಿಕ್ಷಣ ಸಾಧ್ಯವಾದಷ್ಟು ಉಚಿತವಾಗಿ ಸಿಗಬೇಕು ಎನ್ನುವ ಅಭಿಲಾಷೆ ಟ್ರಸ್ಟ್‌ನದ್ದು. ಅದಕ್ಕಾಗಿ ಎಲ್‌ಕೆಜಿ, ಯುಕೆಜಿ ಶಿಕ್ಷಣ, ಆಂಗ್ಲ ಮಾಧ್ಯಮ ಶಿಕ್ಷಣ ಸಿಗಲಿದೆ. ನಮ್ಮೂರಿನ ಮಕ್ಕಳ ಮುಂದೆ ಮಕ್ಕಳಿಗೆ ಬಾಲ್ಯದಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಬೇಕು ಎನ್ನುವ ಕಲ್ಪನೆ ಇದೆ ಎಂದು ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.