ADVERTISEMENT

ಬಳಂಜ ಶಾಲೆ ಅಮೃತ ಸಂಭ್ರಮ ನಾಳೆಯಿಂದ  

ನಾಟಕ, ಯಕ್ಷಗಾನ, ಸಂಗೀತ, ಸಾಂಸ್ಕೃತಿಕ ವೈಭವದ ರಂಗು; ಪಥ ಸಂಚಲನದ ಮೆರುಗು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 4:27 IST
Last Updated 12 ಡಿಸೆಂಬರ್ 2025, 4:27 IST
ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಬಳಂಜ ಸರ್ಕಾರಿ ಶಾಲೆ
ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ಬಳಂಜ ಸರ್ಕಾರಿ ಶಾಲೆ   

ಬೆಳ್ತಂಗಡಿ: ‘ಬಳಂಜದ ಪಟೇಲರಾಗಿದ್ದ ಕಿನ್ನಿ ಯಾನೆ ಕೋಟಿ ಪಡಿವಾಳರು ಹಲವರ ನೆರವಿನಲ್ಲಿ ಆರಂಭಿಸಿದ ಬಳಂಜ ಶಾಲೆಗೀಗ ಅಮೃತ ಮಹೋತ್ಸವದ ಸಂಭ್ರಮ. ಡಿ.13 ಮತ್ತು 14ರಂದು ಅಮೃತ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ’ ಎಂದು ಅಮೃತೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಿ.ಕೆ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶಾಲೆಯನ್ನು ಬೆಳೆಸಲು ನೂರಾರು ಜನರು ಶ್ರಮಿಸಿದ್ದಾರೆ. ಕೆ ವಸಂತ ಸಾಲಿಯಾನ್, ಎಚ್ ಧರ್ಣಪ್ಪ ಪೂಜಾರಿ, ಉದಯವರ್ಮ ಪಡಿವಾಳ್, ಚಂದ್ರರಾಜ ಪೂವಣಿ ಮುಂತಾದವರ ಪ್ರಯತ್ನದಿಂದ ಮುನ್ನಡೆದ ಶಾಲೆ ಹಳೆ ವಿದ್ಯಾರ್ಥಿಗಳ ಕೊಡುಗೆ, ವಿದ್ಯಾಭಿಮಾನಿಗಳ ದೇಣಿಗೆ ಹಾಗೂ ಇಲಾಖೆಯ ಅನುದಾನದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ’ ಎಂದರು.

‘ಹೈಸ್ಕೂಲ್ ಇದೇ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ ಸುಮಾರು 50 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಬಳಂಬ ಶಿಕ್ಷಣ ಟ್ರಸ್ಟ್ ಸಹಕಾರವಿದೆ’ ಎಂದು ಅವರು ಹೇಳಿದರು.

ADVERTISEMENT

‘ಡಿ.13 ರಂದು ಅಮೃತ ಮಹೋತ್ಸವ ಕಾರ್ಯಕ್ರಮ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ದೇವದಾಸ್ ಕಾಪಿಕಾಡ್ ತಂಡದಿಂದ ನಾಟಕ ಪುದರ್ ದೀತಿಜಿ ಪ್ರದರ್ಶನಗೊಳ್ಳಲಿದೆ. 14ರಂದು ಬೆಳಿಗ್ಗೆ ಗುರುವಂದನೆಯಲ್ಲಿ ನಾ. ಸೋಮೇಶ್ವರ ಅವರು ‘ಥಟ್ಟಂತ ಹೇಳಿ’ ನಡೆಸಿಕೊಡಲಿದ್ದಾರೆ. ಹಳೆ ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು. ಸಂಜೆ ದೀಪಕ್ ರೈ ಪಾಣಿಜಿ ಅವರ ತಲಿಕೆದ ಪರ್ಬಇರುತ್ತದೆ, ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ಸಾಂಸ್ಕೃತಿಕ ವೈಭವ ಮತ್ತು ಸರಿಗಮ ಸಂಗೀತ ಸುದ್ದಿ ನಡೆಯಲಿದೆ.  

ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ, ಮುಖ್ಯೋಪಾಧ್ಯಾಯ ರಂಗಸ್ವಾಮಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸುಲೋಚನಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ವೈ.ಬಳಂಜ, ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.