ADVERTISEMENT

ಬಲ್ನಾಡಿನ ಮನೆ ಕಳವು ಪ್ರಕರಣ: ₹ 6.5 ಲಕ್ಷದ ಚಿನ್ನಾಭರಣ, ಸ್ವತ್ತು ವಶ

ಅಂತರರಾಜ್ಯ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 12:42 IST
Last Updated 25 ಮಾರ್ಚ್ 2022, 12:42 IST
ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸ್ ತಂಡ
ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸ್ ತಂಡ   

ಪುತ್ತೂರು: ತಾಲ್ಲೂಕಿನ ಬಲ್ನಾಡು ಗ್ರಾಮದ ಉಜಿರುಪಾದೆ ಸಮೀಪದ ಬಬ್ಬಲಿ ನಿವಾಸಿ, ಬೆಂಗಳೂರಿನಲ್ಲಿ ಲೆಕ್ಕ ಪರಿಶೋಧಕರಾಗಿರುವ ಶಿವಪ್ರಸಾದ್ ಭಟ್ ಅವರ ಮನೆ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಕುಖ್ಯಾತ ಅಂತರರಾಜ್ಯ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ.

ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಮಹಮ್ಮದ್ ಅಶ್ರಫ್ ಯಾನೆ ತಾರಿಗುಡ್ಡೆ ಅಶ್ರಫ್ ಮತ್ತು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಸಮೀಪದ ಗುಂಪಕಲ್ಲು ಸೈಯದ್ ಮಲೆಯಲ್ಲಿ ವಾಸ್ತವ್ಯವಿರುವ ಕೆ.ಮೊಹಮ್ಮದ್ ಸಲಾಂ ಬಂಧಿತ ಆರೋಪಿಗಳು.

ಶಿವಪ್ರಸಾದ್ ಭಟ್ ಫೆ.22ರಂದು ಚಿನ್ನಾಭರಣಗಳನ್ನು ಮನೆಯ ಕೋಣೆಯೊಂದರಲ್ಲಿರುವ ಕಾಪಾಟಿನೊಳಗಿನ ಲಾಕರ್‌ನಲ್ಲಿ ಇರಿಸಿ, ಮನೆಗೆ ಬೀಗ ಹಾಕಿ ತನ್ನ ತಾಯಿಯೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಮನೆಯ ಬೀಗವನ್ನು ಮುರಿದು ಒಳನುಗ್ಗಿ, ಲಾಕರ್ ಬೀಗ ಮುರಿದು ಅದರಲ್ಲಿದ್ದ ಸುಮಾರು 160 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದರು.

ADVERTISEMENT

ಶಿವಪ್ರಸಾದ್ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಫೆ.26ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಎಸ್ಪಿ ಋಷೀಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣದ ಪತ್ತೆಗಾಗಿ ಪುತ್ತೂರಿನ ಡಿವೈಎಸ್ಪಿ ಡಾ.ಗಾನ ಪಿ. ಕುಮಾರ್ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಉಮೇಶ್ ಉಪ್ಪಳಿಗೆ, ಸಂಪ್ಯ ಠಾಣಾ ಎಸ್ಐಗಳಾದ ಉದಯರವಿ ಎಂ.ವೈ. ಮತ್ತು ಅಮೀನ್ ಸಾಬ್ ಅತ್ತಾರ್ ಅವರನ್ನು ಒಳಗೊಂಡು ರಚಿಸಲಾಗಿದ್ದ ವಿಶೇಷ ತಂಡವು ಆರೋಪಿಗಳನ್ನು ಗುರುವಾರ ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಆರೋಪಿಗಳು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಅಜ್ಜನಡ್ಕ ಎಂಬಲ್ಲಿನ ಮಹಮ್ಮದ್ ಅಲಿ ಅವರ ಮನೆ ಕಳ್ಳತನ, ಬಲ್ನಾಡು ಗ್ರಾಮದ ವಿಷ್ಣು ಮೂರ್ತಿ ದೈವಸ್ಥಾನದಲ್ಲಿ ದೈವಗಳ ಬೆಳ್ಳಿಯ ಆಯುಧ, ಆಭರಣಗಳ ಕಳ್ಳತನ, ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಳವು, ಮಾಡ್ನೂರು ಗ್ರಾಮದ ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿಯಿಂದ ಕಳ್ಳತನ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳವು ಹಾಗೂ ಕಾಸರಗೋಡಿನ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳ ವ್ಯಾಪ್ತಿಯಲ್ಲಿ ಎರಡು ಮನೆ ಕಳವು ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ₹ 5 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಲ್ಯಾಪ್ ಟಾಪ್, ಸಿಸಿಟಿವಿ ಕ್ಯಾಮೆರಾ, ಡಿವಿಆರ್ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ ₹ 6.5 ಲಕ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆರೋಪಿಗಳು ಈ ಹಿಂದೆ ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಹಲವು ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರ ವಿರುದ್ಧ ಉಪ್ಪಿನಂಗಡಿ, ಸುಳ್ಯ, ಪುತ್ತೂರು ನಗರ, ಬೆಳ್ಳಾರೆ, ಬಂಟ್ವಾಳ, ಧರ್ಮಸ್ಥಳ, ವಿಟ್ಲ, ಕೇರಳದ ಮಲಪ್ಪುರಂ ಕೊಂಡೆಟ್ಟಿ, ಆದೂರು, ಕೊಡಗಿನ ಸೋಮವಾರಪೇಟೆ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ಮೇಲೆ ವಾರಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಿಶೇಷ ಪೊಲೀಸ್ ತಂಡದಲ್ಲಿ ಎಎಸ್ಐ ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ವರ್ಗಿಸ್, ಕೃಷ್ಣಪ್ಪ ಗೌಡ, ದೇವರಾಜ್, ಧರ್ಮಪಾಲ್, ಅದ್ರಾಮ್, ಪ್ರವೀಣ್ ರೈ ಪಾಲ್ತಾಡಿ, ಜಗದೀಶ್ ಅತ್ತಾಜೆ, ಹರ್ಷಿತ್, ಗಿರೀಶ್, ಗುಡದಪ್ಪ ತೋಟದ್, ವಿನೋದ್ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ಗಾಯತ್ರಿ ಮತ್ತು ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ ಅವರು ಪಾಲ್ಗೊಂಡಿದ್ದರು. ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಅವರು ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.