ADVERTISEMENT

ಬ್ಯಾಂಕ್‌ ವಿಲೀನದಿಂದ ಆರ್ಥಿಕ ನಾಶ: ದಿನೇಶ್ ಹೆಗ್ಡೆ ಉಳೆಪಾಡಿ

ಕರಾವಳಿ ಬ್ಯಾಂಕ್‌ ಉಳಿಸುವ ಹಕ್ಕೊತ್ತಾಯ ಸಭೆ 21 ರಂದು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 12:08 IST
Last Updated 14 ಫೆಬ್ರುವರಿ 2020, 12:08 IST

ಮಂಗಳೂರು: ಕರಾವಳಿಯ ಬ್ಯಾಂಕ್‌ಗಳನ್ನು ಉಳಿಸಲು ಇದೇ 21 ರಂದು ಹಕ್ಕೊತ್ತಾಯ ಸಭೆಯನ್ನು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಸಿಬಿಒ ಸಭಾಂಗಣದಲ್ಲಿ ನಡೆಯಲಿದೆ. ಬ್ಯಾಂಕ್‌ಗಳ ವಿಲೀನದಿಂದ ಕರಾವಳಿ ಭಾಗದಲ್ಲಿ ಆರ್ಥಿಕ ನಾಶಕ್ಕೆ ಆಗುವುದು ಖಚಿತ ಎಂದು ಕರಾವಳಿಯ ಬ್ಯಾಂಕ್‌ಗಳನ್ನು ಉಳಿಸಿ-ಹೋರಾಟ ಸಮಿತಿ ಸಂಚಾಲಕ ದಿನೇಶ್ ಹೆಗ್ಡೆ ಉಳೆಪಾಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕರಾವಳಿಯ ಬ್ಯಾಂಕ್‌ಗಳನ್ನು ಉಳಿಸುವುದಕ್ಕಾಗಿ ಸಮಿತಿಯು ಈಗಾಗಲೇ ವಿವಿಧ ರೀತಿ ಪ್ರಯತ್ನ, ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಈ ಎರಡು ಬ್ಯಾಂಕ್‌ಗಳ ವಿಲೀನಗೊಳಿಸುವ ಬಗ್ಗೆ ಇದುವರೆಗೂ ಸಂಸತ್‌ ಅಧಿವೇಶನದಲ್ಲಿ ಅಂತಿಮ ತೀರ್ಮಾನವಾಗಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜನರಿಂದ ಯಾವುದೇ ಪ್ರತಿರೋಧ ಅಥವಾ ಪ್ರತಿಭಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ ಜನರನ್ನು ಹಾದಿ ತಪ್ಪಿಸುವ ರೀತಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಭಾವನೆ ಸೃಷ್ಟಿ ಮಾಡಿದ್ದಾರೆ. ಸಮಿತಿ ವತಿಯಿಂದ ಈಗಾಗಲೇ ಕೇಂದ್ರ ಹಣಕಾಸು ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಹೋರಾಟದ ಮುಂದುವರಿದ ಭಾಗವಾಗಿ ಸಮಾನ ಮನಸ್ಕ ಸಂಘ ಸಂಸ್ಥೆಗಳು ಹಕ್ಕೊತ್ತಾಯ ಸಭೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಹಕ್ಕೊತ್ತಾಯ ಸಭೆಯಲ್ಲಿ ಕರಾವಳಿ ಬ್ಯಾಂಕ್‌ಗಳ ವಿಲೀನಕ್ಕೆ ಆರಂಭಿಸಿರುವ ಪ್ರಕ್ರಿಯೆ ರದ್ದುಗೊಳಿಸಲು ಒತ್ತಾಯ ಮಾಡಲಾಗುವುದು. ಬ್ಯಾಂಕ್‌ಗಳ ವಿಲೀನದಿಂದಾಗಿ ಕರಾವಳಿಯಲ್ಲಿರುವ ಅವುಗಳ ಆಡಳಿತ ಕಚೇರಿಯೂ ಮುಚ್ಚುತ್ತಿವೆ. ಇದರಿಂದಾಗಿ ಕರಾವಳಿ ಭಾಗದ ಆರ್ಥಿಕ ಬೆಳವಣಿಗೆಯೂ ಕುಂಠಿತಗೊಳ್ಳಲಿದೆ. ಬ್ಯಾಂಕ್‌ಗೆ ಪೂರಕವಾಗಿರುವ ಉದ್ಯಮಗಳು ಮುಚ್ಚಲಿವೆ. ಇತರ ಉದ್ಯಮಗಳು ಕೂಡ ಆರ್ಥಿಕ ನಷ್ಟ ಹೊಂದಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುವ ಆತಂಕವಿದೆ ಎಂದು ಅವರು ತಿಳಿಸಿದರು.

ಸಮಿತಿಯ ಸಹಸಂಚಾಲಕ ಟಿ.ಆರ್.ಭಟ್, ರೆನ್ನಿ ಡಿಸೋಜ ಮತ್ತು ಕೊಲ್ಲಾಡಿ ಬಾಲಕೃಷ್ಣ ರೈ ಇದ್ದರು.

---

‘ಬೈಕ್ ರ್‍ಯಾಲಿ ಮೂಲಕ ಆಹ್ವಾನ’
ಕರಾವಳಿಯ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ವಿರುದ್ಧ ಆಡಳಿತ ಪಕ್ಷಗಳು ಮಾತ್ರವಲ್ಲದೆ ವಿರೋಧ ಪಕ್ಷಗಳು ಕೂಡ ಮೌನವಾಗಿವೆ. ಜನರು ವಿರೋಧಿಸುತ್ತಿದ್ದರೂ ಜನಪ್ರತಿನಿಧಿಗಳು ಜನರ ಪರವಾಗಿ ನಿಂತಿಲ್ಲ. ಹಾಗಾಗಿ ಈ ಬಾರಿಯ ಹಕ್ಕೊತ್ತಾಯ ಸಭೆಗೆ ಕರಾವಳಿ ಮೂರು ಜಿಲ್ಲೆಗಳ ಸಂಸದರ ಬಳಿಗೆ ಬೈಕ್ ರ್‍ಯಾಲಿ ಮೂಲಕ ತೆರಳಿ ಹಕ್ಕೊತ್ತಾಯ ಸಭೆಗೆ ಆಹ್ವಾನಿಸಲಾಗುವುದು ಎಂದು ದಿನೇಶ್ ಹೆಗ್ಡೆ ಉಳೆಪಾಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.