ರಹೀಂ
ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣೆಯ ವ್ಯಾಪ್ತಿ ಇರಾಕೋಡಿ ಎಂಬಲ್ಲಿ ಹತ್ಯೆಯಾದ ಅಬ್ದುಲ್ ರಹೀಂ ಮೃತದೇಹವನ್ನು ದೇರಳಕಟ್ಟೆಯ ಯೇನೆಪೋಯ ಆಸ್ಪತ್ರೆಗೆ ತರಲಾಗಿದೆ. ಆಸ್ಪತ್ರೆಯ ಬಳಿ ಮುಸ್ಲಿಂ ಯುವಕರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬಿಗು ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಭೇಟಿ ನೀಡಿದ ವೇಳೆ ಸ್ಥಳದಲ್ಲಿ ಜಮಾಯಿಸಿದ್ದವರು ತರಾಟೆಗೆ ತೆಗೆದುಕೊಂಡರು. ಸುಹಾಸ್ ಹತ್ಯೆಯನ್ನು ಎನ್‌ಐಎ ತನಿಖೆಗೆ ಒಪ್ಪಿಸಲು ಆಗ್ರಹಿಸಿ ಬಜಪೆಯಲ್ಲಿ ಭಾನುವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದವರು ಅನುಮತಿ ಪಡೆಯದೆಯೇ ಪ್ರತಿಭಟನಾ ಸಭೆ ನಡೆಸಲು ಅವಕಾಶ ನೀಡಿದ್ದು ಏಕೆ ಎಂದು ಪ್ರಶ್ನಸಿದರು.
ಯೆನೆಪೋಯಾ ಆಸ್ಪತ್ರೆ ಬಳಿ ಸುದ್ದಿಗಾರರ ಜೊಇತೆ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಸಾದತ್, ‘ಸರ್ಕಾರ ಕೋಮು ಹಿಂಸೆ ನಿಗ್ರಹ ದಳ ಮಾಡುತ್ತೇವೆ ಎನ್ನುತ್ತಿದೆ. ಅದಕ್ಕೆ ಮತ್ತೊಂದು ಹೆಣ ಬೀಳಬೇಕಾ’ ಎಂದು ಪ್ರಶ್ನಿಸಿದರು.
‘15 ಮಂದಿ ಬಹಳ ವ್ಯವಸ್ಥಿತವಾಗಿ ಈ ಹತ್ಯೆ ಮಾಡಿದ್ದಾರೆ. ವಿಶೇಷ ತನಿಖಾ ತಂಡ ರಚಿಸಿ ಈ ಪ್ರಕರಣವನ್ನು ತಕ್ಷಣ ತನಿಖೆಗೆ ಒಳಪಡಿಸಬೇಕು. ಕೊಲೆಯ ಹಿಂದಿರುವ ಎಲ್ಲರನ್ನೂ ಹುಡುಕಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ರೌಡಿಶೀಟರ್ ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಕೆಲ ದಿನಗಳಿಂದ ಕೆಲ ಕಿಡಿಗೇಡಿಗಳು ಮುಸ್ಲಿಮರಿಗೆ ಬಹಿರಂಗ ಬೆದರಿಕೆ ಹಾಕುತ್ತಲೇ ಇದ್ದಾರೆ. ಮೊನ್ನೆ ನಡೆದ ಪ್ರತಿಭಟನೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಅಂತ ಎಂದು ಹೇಳಿದ್ದಾನೆ. ಇನ್ನೊಬ್ಬ ಗೂಂಡಾ ಪೋಸ್ಟ್ ಮಾರ್ಟಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡುತ್ತೇವೆ ಎಂದಿದ್ದಾನೆ. ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕಿದವರ ವಿರುದ್ದ 45 ಎಫ್ಐಆರ್ ಆಗಿದೆಯೇ ಹೊರತು, ಒಂದಿಬ್ಬರನ್ನು ಬಿಟ್ಟು ಬೇರೆ ಯಾರನ್ನೂ ಬಂಧಿಸಿಲ್ಲ’ ಎಂದರು.
‘ಬಜಪೆಯಲ್ಲಿ ಶ್ರೀಕಾಂತ್ ಶೆಟ್ಟಿ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಎಫ್‌ಐಆರ್ ಮಾಡಿದ್ದು ಬಿಟ್ಟರೆ ಕ್ರಮ ಆಗಿಲ್ಲ. ಸಂಘ ಪರಿವಾರದವರು ಬಹಿರಂಗಹೇಳಿಕೆ ಕೊಟ್ಟರೂ ಕ್ರಮ ಆಗುತ್ತಿಲ್ಲ. ಇಲ್ಲಿನ ಶಾಸಕರೂ ಬಹಿರಂಗ ಹೇಳಿಕೆ ಕೊಡುತ್ತಾ ಇದ್ದಾರೆ’ ಎಂದರು.
‘ಮೃತ ರಹೀಂ ಅಮಾಯಕ ಯುವಕ. ಆತ ಕ್ರಿಮಿನಲ್ ಅಲ್ಲ. ಮಸೀದಿಯೊಂದರಲ್ಲಿ ಕಾರ್ಯದರ್ಶಿ ಆಗಿದ್ದ ಆತ ಯಾವುದೇ ಸಂಘಟನೆಯಲ್ಲಿ ಇರಲಿಲ್ಲ. ಶ್ರಮಜೀವಿಯಾಗಿದ್ದ. ಆತನ ಮೇಲೆ ಯಾವುದೇ ಮೊಕದ್ದಮೆಗಳಿರಲಿಲ್ಲ. ಆದರೂ ಸಂಘಪರಿವಾರದ ಗೂಂಡಾಗಳು ಅಮಾಯಕನ ಕೊಂದಿದ್ದಾರೆ. ಇವರಿಗೆ ಒಬ್ಬ ಮುಸಲ್ಮಾನನ ರಕ್ತ ಬೇಕು. ಆತ ಯಾವುದೇ ಸಂಘಟನೆಯಲ್ಲಿ ಇರಬೇಕು ಅಂತ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.