ಪ್ರಾತಿನಿಧಿಕ ಚಿತ್ರ
ಮಂಗಳೂರು: ಕನಿಷ್ಠ ಕೂಲಿ ಜಾರಿಗೆ ಆಗ್ರಹಿಸಿ ಬೀಡಿ ಕಾರ್ಮಿಕರು ನಗರದ ಮಿನಿ ವಿಧಾನಸೌಧದ ಎದುರು ಇದೇ 24 ರಿಂದ ಹಗಲು ರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಸೌತ್ ಕೆನರಾ ಬೀಡಿ ವರ್ಕರ್ಸ್ ಫೆಡರೇಷನ್‌ನ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಜೆ.ಬಾಲಕೃಷ್ಣ ಶೆಟ್ಟಿ, ‘ಇದೇ 24 ರಿಂದ 27ರವರೆಗಿನ ಧರಣಿ ಸತ್ಯಾಗ್ರಹದ ಬಳಿಕವೂ ಸಮಸ್ಯೆ ಇತ್ಯರ್ಥವಾಗದಿದ್ದರೆ ಇದೇ 28ರಂದು ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಚಲೊ ನಡೆಸಲಿದ್ದೇವೆ’ ಎಂದರು.
‘ಬೀಡಿ ಕಾರ್ಮಿಕರಿಗೆ ಪ್ರತಿ ಸಾವಿರ ಬೀಡಿಗೆ ₹210 ಕನಿಷ್ಠ ಕೂಲಿಯನ್ನು ರಾಜ್ಯ ಸರ್ಕಾರ 2018ರ ಏ.1ರಂದು ನಿಗದಿಪಡಿಸಿತ್ತು. ಬೆಲೆ ಏರಿಕೆ ಸೂಚ್ಯಂಕದ ಆಧಾರದಲ್ಲಿ ಪ್ರತಿ ಪಾಯಿಂಟ್‌ಗೆ 0.04 ಪೈಸೆಯಂತೆ ತುಟ್ಟಿಭತ್ತೆ ಸೇರಿಸಿ ಕನಿಷ್ಠ ಕೂಲಿ ನೀಡಬೇಕಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಬೀಡಿ ಕಂಪನಿಗಳ ಮಾಲೀಕರು ಬೀಡಿ ಕಾರ್ಮಿಕರಿಗೆ 6 ವರ್ಷ ಕಾನೂನುಬದ್ಧ ಕೂಲಿ ನೀಡಿಲ್ಲ’ ಎಂದರು.
‘ಸರ್ಕಾರ 2024ರ ಏ 1ರಿಂದ ಜಾರಿಯಾಗುವಂತೆ 2025ರ ಫೆಬ್ರುವರಿ ತಿಂಗಳಲ್ಲಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿಯನ್ನು ಪರಿಷ್ಕರಿಸಿ ಆದೇಶ ಮಾಡಿದೆ. ಅದರ ಪ್ರಕಾರ ಮಾಲೀಕರು ಕಾರ್ಮಿಕರಿಗೆ ಸಾವಿರ ಬೀಡಿಗೆ ₹270 ಕನಿಷ್ಠ ಕೂಲಿ ಮತ್ತು ಬೆಲೆ ಏರಿಕೆ ಸೂಚ್ಯಂಕದ ಆಧಾರದಲ್ಲಿ ಪ್ರತಿ ಪಾಯಿಂಟ್‌ಗೆ 0.03 ಪೈಸೆಯಂತೆ ಸೇರಿಸಿ ಒಟ್ಟು ₹301.92 ನೀಡಬೇಕಿದೆ. ಆದರೆ ಈಗಲೂ ಬೀಡಿ ಕಂಪನಿಗಳ ಮಾಲೀಕರು ಸಾವಿರ ಬೀಡಿಗೆ ಕೇವಲ ₹ 284.88 ನೀಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
‘2018ರಿಂದ ನಿಗದಿತ ಕೂಲಿಗಿಂತ ಕಡಿಮೆ ಮೊತ್ತವನ್ನು ನೀಡಿದ್ದನ್ನು ಸರಿದೂಗಿಸಲು ಏಕಗಂಟಿನಲ್ಲಿ ಪ್ರತಿ ಸಾವಿರ ಬೀಡಿಗೆ ₹ 39.92 ಪೈಸೆ ಸೇರಿಸಿ ನೀಡಬೇಕಿದೆ. ಇದನ್ನು ಕೊಡಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಂ.ಭಟ್ ಒತ್ತಾಯಿಸಿದರು.
‘ಕೇಂದ್ರ ಸರ್ಕಾರ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಬೀಡಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ, ಅವರ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ಕಾರ್ಮಿಕರ ಕಲ್ಯಾಣ ಮಂಡಳಿಗೆ ಸೆಸ್ ರೂಪದಲ್ಲಿ ಆರ್ಥಿಕ ನೆರವು ಸಿಗುತ್ತಿಲ್ಲ. ಸರ್ಕಾರವೂ ವಿದ್ಯಾರ್ಥಿ ವೇತನವನ್ನು ಸರಿಯಾಗಿ ನೀಡುತ್ತಿಲ್ಲ’ ಎಂದು ಆರೋಪಿಸಿದರು.
ಫೆಡರೇಷನ್ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ಉಪಾಧ್ಯಕ್ಷರಾದ ಪದ್ಮಾವತಿ ಶೆಟ್ಟಿ, ವಸಂತ ಆಚಾರಿ, ಖಜಾಂಚಿ ಸದಾಶಿವದಾಸ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.