
ಬೆಳ್ತಂಗಡಿ: ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಬೆಳ್ತಂಗಡಿ ಪೋಲಿಸ್ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆಗಳ ಸಭೆ ನಡೆಯಿತು.
‘ಬೆಳ್ತಂಗಡಿಗೆ ಮಂಜೂರಾಗಿ ಆರಂಭವಾಗಿರುವ ಪೊಲೀಸ್ ಉಪ ವಿಭಾಗವನ್ನು ರದ್ದುಪಡಿಸುವ ಪ್ರಯತ್ನ ನಡೆಯುತ್ತಿದೆ. ತಾಲ್ಲೂಕಿಗೆ ಇದು ಅತ್ಯಂತ ಅಗತ್ಯವಾಗಿದ್ದು ಯಾವುದೇ ಕಾರಣಕ್ಕೂ ಉಪವಿಭಾಗವನ್ನು ರದ್ದು ಪಡಿಸಬಾರದು’ ಎಂದು ಸಭೆಯಲ್ಲಿ ದಲಿತ ಮುಖಂಡ ಶೇಖರ ಲಾಯಿಲ ಹಾಗೂ ಇತರರು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವಿಭಾಗೀಯ ಸಂಚಾಲಕ ಬಿ.ಕೆ.ವಸಂತ್ ಮಾತನಾಡಿ, ‘ಜಮೀನು, ರಸ್ತೆ ವಿವಾದಗಳಲ್ಲಿ ಮೇಲ್ಜಾತಿಯವರು ಆಮಿಷ ಒಡ್ಡಿ ದಲಿತ ಸಮುದಾಯವನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು, ಸತ್ಯಕ್ಕೆ ದೂರವಾದ ದಲಿತ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಬೆಂಬಲ ಸೂಚಿಸಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶೇಖರ್ ಕುಕ್ಕೇಡಿ, ‘ನಿಜವಾಗಿ ದೌರ್ಜನ್ಯ, ಹಿಂಸೆ ಅನುಭವಿಸುವ ಸಂತ್ರಸ್ತರಿಗೆ ನ್ಯಾಯ ಒದಗಿಸಲು ದಲಿತ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ಬಂದಿದೆ. ಅದರ ದುರುಪಯೋಗ ಸರಿಯಲ್ಲ’ ಎಂದರು.
ಹಿರಿಯ ದಲಿತ ಮುಖಂಡ ವೆಂಕಣ್ಣ ಕೊಯ್ಯೂರು ಮಾತನಾಡಿ, ‘ಕೊಯ್ಯುರು ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ವಿವಾದದಲ್ಲಿ ದಲಿತ ಯುವಕರನ್ನು ದುರುಪಯೋಗ ಮಾಡಿಕೊಂಡು ಸುಳ್ಳು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ’ ಎಂದು ಆರೋಪಿಸಿದರು.
ಈ ಬಗ್ಗೆ ಮಾತನಾಡಿದ ಡಿವೈಎಸ್ಪಿ ರೋಹಿಣಿ, ‘ಯಾರೇ ದೂರು ಕೊಟ್ಟರೂ ಅದನ್ನು ಸ್ವೀಕರಿಸಿ ಪ್ರಕರಣ ದಾಖಲಿಸಲಾಗುತ್ತದೆ. ವಿಚಾರಣೆಯ ಹಂತದಲ್ಲಿ ಸುಳ್ಳು ಎಂದು ಸಾಬೀತು ಆದಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗುತ್ತದೆ’ ಎಂದರು.
ಸತೀಶ್ ಪಾರೆಂಕಿ ಮಾತನಾಡಿ, ‘ಕೆಲಸದ ಸ್ಥಳಗಳಲ್ಲಿ ಜಾತಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತದೆ. ಅದರ ವಿರುದ್ಧ ಮಾತನಾಡಿದರೆ, ನಮ್ಮ ಮೇಲೆ ವಿವಿಧ ರೀತಿಯ ದೌರ್ಜನ್ಯಗಳನ್ನು ನಡೆಯುತ್ತಿದೆ. 15 ವರ್ಷಗಳ ಹಿಂದೆ ಹಿರಿಯ ದಲಿತ ನಾಯಕ ಶಿವಪ್ಪ ಬಂಗೇರರ ಕೊಲೆ ನಡೆದಿದ್ದು, ಇಲ್ಲಿಯ ತನಕ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಹಳೆಯ ಪ್ರಕರಣವಾಗಿರುವ ಕಾರಣ ಕಡತಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಭಾಕರ್ ಕನ್ಯಾಡಿ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳನ್ನು ದಲಿತ ಗುತ್ತಿಗೆದಾರರ ಬದಲಾಗಿ ಇತರ ಗುತ್ತಿಗೆದಾರರಿಗೆ ನೀಡಿ ದಲಿತರಿಗೆ ಮೋಸ ಮಾಡಲಾಗುತ್ತದೆ. ಧರ್ಮಸ್ಥಳ ಅಶೋಕನಗರ ದಲಿತ ಕಾಲೊನಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ಧೀರಜ್ ಅವರು ತಿಳಿಸಿದರು.
ಶೇಖರ್ ಕುಕ್ಕೇಡಿ ಮಾತನಾಡಿ, ‘ಸಭೆಗೆ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು. ದಲಿತ ಸಮುದಾಯದ ಅತಿ ಹೆಚ್ಚು ಸಮಸ್ಯೆಗಳು ಈ ಇಲಾಖೆಗಳಿಗೆ ಸಂಬಂಧಿಸಿದ್ದು , ಅವರ ಗೈರು ಹಾಜರಿ ಸಮಸ್ಯೆಗಳು ಮತ್ತಷ್ಟು ಜಟಿಲಗೊಳ್ಳುತ್ತದೆ ಎಂದರು.
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡ ಸುಕುಮಾರ್ ದಿಡುಪೆ ಮಾತನಾಡಿ, ‘ ಮಲವಂತಿಗೆ ಗ್ರಾಮದ ಮಲೆಕುಡಿಯ ಸಮುದಾಯ ಭವನವು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಪೂರ್ಣ ನಾಶವಾಗಿ 6 ವರ್ಷಗಳಾದರೂ ಇನ್ನೂ ನಿರ್ಮಾಣವಾಗಿಲ್ಲ ಎಂದರು.
ಪರಿಶಿಷ್ಟ ಜಾತಿ/ ಪಂಗಡಗಳ ವಸತಿ ನಿಲಯ, ವಸತಿ ಶಾಲೆಗಳಲ್ಲಿ ರಾತ್ರಿ ವೇಳೆಯಲ್ಲಿ ವಾರ್ಡನ್‌ಗಳು ಇರುವುದಿಲ್ಲ. ಹಾಸ್ಟೆಲ್‌ಗಳಲ್ಲಿ ಐದಾರು ವರ್ಷ ವಯಸ್ಸಿನ ಮಕ್ಕಳಿದ್ದು, ಮಕ್ಕಳ ರಕ್ಷಣಾ ಜವಾಬ್ದಾರಿ ಯಾರು ಎಂದು ಮುಖಂಡರು ಪ್ರಶ್ನಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ತಾಲ್ಲೂಕಿನ ಐದಾರು ಗ್ರಾಮಗಳಿದ್ದು, ಅವುಗಳು ವಿದ್ಯುತ್, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳು ವಂಚಿತಗೊಂಡಿವೆ ಎಂದು ಶೇಖರ ಲಾಯಿಲ ಗಮನ ಸೆಳೆದರು.
ಕಳೆದ ಮಳೆಗಾಲದಲ್ಲಿ ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ನದಿಯಲ್ಲಿ ಯುವಕರಿಬ್ಬರೂ ಕೊಚ್ಚಿಕೊಂಡು ಹೋಗಿ ಬದುಕುಳಿದಿದ್ದು, ಅಲ್ಲಿ ಇಲ್ಲಿಯ ತನಕ ಸೇತುವೆ ನಿರ್ಮಾಣವಾಗಿಲ್ಲ. ಕುತ್ಲೂರು ಗ್ರಾಮದಲ್ಲಿಯೂ ಸೇತುವೆ ಮುರಿದು ನಾಲ್ಕೈದು ವರ್ಷಗಳಾದರೂ ಇನ್ನೂ ಸೇತುವೆ ನಿರ್ಮಾಣವಾಗಿಲ್ಲ ಎಂದರು. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಡಿವೈಎಸ್ಪಿ ರೋಹಿಣಿ ಸಿ.ಕೆ ತಿಳಿಸಿದರು.
ಬೆಳ್ತಂಗಡಿ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ ಸುಬ್ಬಾಪುರ್ ಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಬೆಳ್ತಂಗಡಿ, ವೇಣೂರು, ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪಾಲ್ಗೊಂಡಿದ್ದರು. ಹೆಡ್ ಕಾನ್ಸ್‌ಟೇಬಲ್ ಅಭಿಜಿತ್ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.