
ಮಂಗಳೂರು: ಪ್ರತಿ ವರ್ಷ ಬೇಸಿಗೆಯಲ್ಲಿ ಬತ್ತಿ ಪ್ರವಾಸಿಗರು ಮತ್ತು ಭಕ್ತರನ್ನು ನಿರಾಸೆಗೊಳಿಸುವ ಪುತ್ತೂರು ತಾಲ್ಲೂಕಿನ ಬಿಸಿನೀರ ಬುಗ್ಗೆ ‘ಬೆಂದ್ರ್ ತೀರ್ಥ’ದಲ್ಲಿ ಊರಿನ ಯುವಕರು ಈ ಬಾರಿ ನೀರು ಉಕ್ಕಿಸಿದ್ದಾರೆ. ಬೆಂದ್ರ್ ತೀರ್ಥ ಅಭಿವೃದ್ಧಿಗೆಂದೇ ಆರಂಭಗೊಂಡ ಸ್ಥಳೀಯ ಶಿವಾಜಿ ಯುವಸೇನೆ ಮೂರು ದಿನಗಳಿಂದ ಹಾಕಿದ ಶ್ರಮಕ್ಕೆ ಸೋಮವಾರ ಫಲ ಸಿಕ್ಕಿದೆ.
ಈ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಆಧೀನದಲ್ಲಿದೆ. ಆದರೆ ಇಲ್ಲಿ ಮೂಲಸೌಲಭ್ಯಗಳು ಮರೀಚಿಕೆ ಎಂಬ ದೂರು ಸ್ಥಳೀಯರಿಂದ ಕೇಳಿಬರುತ್ತಲೇ ಇದೆ. ಆರು ವರ್ಷಗಳ ಹಿಂದೆ ವಸತಿಗೃಹ ನಿರ್ಮಾಣವಾಗಿದೆಯಾದರೂ ಅದರೊಳಗೆ ಸೌಲಭ್ಯ ಇಲ್ಲ ಎಂದು ಕೂಡ ದೂರಲಾಗುತ್ತಿದೆ. ಇಲ್ಲಿ ಬಿಸಿನೀರಿನ ತೀರ್ಥ ಸಿಗುವ ಹೊಂಡವನ್ನು ಮತ್ತು ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಗೊಳಿಸುವುದಕ್ಕೆಂದೇ ಶಿವಾಜಿ ಯುವಸೇನೆ ಸ್ಥಾಪನೆಯಾಗಿತ್ತು. ಅದಕ್ಕೀಗ ದಶಕದ ಸಂಭ್ರಮ. ಹಾಗಾಗಿ ಸುಮಾರು ₹ 1 ಲಕ್ಷ ವೆಚ್ಚದ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಇಲ್ಲಿನ ಮಹತ್ವ ತಿಳಿದು ಬರುವ ಪ್ರವಾಸಿಗರು ಬೇಸಿಗೆಯಲ್ಲಿ ಬತ್ತಿದ ಹೊಂಡವನ್ನು ನೋಡಿ ವಾಪಸಾಗಬೇಕಾದ ಸ್ಥಿತಿ. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಹೊಂಡದ ಆಳವನ್ನು ಹೆಚ್ಚಿಸಲು ಯುವಕರು ನಿರ್ಧರಿಸಿದರು. ಬೆಂದ್ರ್‌ತೀರ್ಥದ ಜೊತೆ ಸಂಬಂಧವಿರುವ, ಸಮೀಪದ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಊರವರ ಜೊತೆ ಮಾತನಾಡಿ ಅಭಿವೃದ್ಧಿ ಕಾರ್ಯಕ್ಕೆ ಇಳಿದರು. ಸುಮಾರು 15 ಯುವಕರು ವಿವಿಧ ಯಂತ್ರೋಪಕರಗಳ ಜೊತೆ ಮೂರು ದಿನಗಳ ಹಿಂದೆ ಆರಂಭಿಸಿದ ಕೆಲಸ ಮಂಗಳವಾರ ಮಧ್ಯಾಹ್ನ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
‘ಇದು ಸಾಮಾನ್ಯ ಹೊಂಡವಲ್ಲ. ಕೆರೆಯಲ್ಲಿ ಇರುವಂತೆ ಕೆಸರು ಮತ್ತು ಮಣ್ಣು ಇಲ್ಲ. ಇಲ್ಲಿರುವುದು ಬಂಡೆಕಲ್ಲುಗಳು. ಹೀಗಾಗಿ ಹಿಟಾಚಿ ಮತ್ತು ಕಂಪ್ರೆಸರ್ ಬಳಸಿ ಕೆಲಸ ಮಾಡಲಾಗಿದೆ. ಸುಮಾರು 7 ಅಡಿ ಆಳ ಅಗೆಯಲಾಗಿದ್ದು ನೀರು ಧಾರಾಳವಾಗಿ ಕಂಡುಬಂದಿದೆ. ಕೆಲಸ ಮುಗಿದ ನಂತರ ನೀರು ತುಂಬುವ ವಿಶ್ವಾಸವಿದೆ. ಅದು ಶಾಶ್ವತವಾಗಿ ನೆಲೆ ನಿಂತರೆ ನೆಮ್ಮದಿ’ ಎಂದು ಶಿವಾಜಿ ಯುವಸೇನೆಯ ಅಧ್ಯಕ್ಷ ಧನ್ಯರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಮೀಪದಲ್ಲಿ ಹರಿಯುವ ಸೀರೆಹೊಳೆಯಲ್ಲಿ ನೀರು ಇದೆ. ಆದರೆ ಅದಕ್ಕೂ ಈ ಹೊಂಡಕ್ಕೂ ಸಂಪರ್ಕ ಇಲ್ಲದ ಕಾರಣ ಬೆಂದ್ರ್‌ತೀರ್ಥ ಬತ್ತುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಆಳ ಹೆಚ್ಚಿಸುವುದೊಂದೇ ಪರಿಹಾರವಾಗಿತ್ತು. ಇಷ್ಟು ಬೇಗ ನೀರು ಕಂಡುಬಂದಿರುವುದರಿಂದ ಪ್ರವಾಸೋದ್ಯಮ ಇಲಾಖೆ ಇಲ್ಲಿ ಶಾಶ್ವತ ಯೋಜನೆಗಳನ್ನು ಹಮ್ಮಿಕೊಳ್ಳಲು ಪ್ರೇರಣೆಯಾಗಲಿದೆ’ ಎಂದು ಧನ್ಯರಾಜ್ ಅಭಿಪ್ರಾಯಪಟ್ಟರು.
‘ಹೊಂಡದ ಒಳಾಂಗಣ ಕೆಲಸವನ್ನಷ್ಟೇ ಈಗ ಕೈಗೆತ್ತಿಕೊಳ್ಳಲಾಗಿದೆ. ಮುಂದೆ ಹೊರಾಂಗಣದಲ್ಲಿ ಸೌಲಭ್ಯಗಳನ್ನು ಒದಗಿಸುವ ಚಿಂತನೆಯೂ ಇದೆ. ಇದಕ್ಕಾಗಿ ಸದ್ಯದಲ್ಲೇ ಶಾಸಕರ ಬಳಿಗೆ ಹೋಗುವೆವು. ಸೌಲಭ್ಯಗಳನ್ನು ಒದಗಿಸಿದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ’ ಎಂದರು.
ಪ್ರವಾಸೋದ್ಯಮ ಇಲಾಖೆಯವರು ಇಲ್ಲಿಗೆ ಆಗಾಗ ಬಂದು ಹೋಗುತ್ತಾರೆ. ಆದರೆ ಕೆಲಸಗಳು ಯಾವುದೂ ಆಗುತ್ತಿಲ್ಲ. ರಾಜಕೀಯ ಪಕ್ಷಗಳಿಗೂ ಈ ಪುಣ್ಯದ ಹೊಂಡದ ಮೇಲೆ ಕಾಳಜಿ ಇಲ್ಲ. ಹೀಗಾಗಿ ನಾವೇ ಕೆಲಸಕ್ಕೆ ಮುಂದಾಗಿದ್ದೇವೆ.–ಧನ್ಯರಾಜ್ ಶಿವಾಜಿ, ಯುವಸೇನೆ ಅಧ್ಯಕ್ಷ
ನಮ್ಮೂರಿನ ಪ್ರವಾಸಿ ಕೇಂದ್ರಕ್ಕೆ ಬರುವವರು ಹೊಂಡದಲ್ಲಿ ನೀರಿಲ್ಲ ಎಂದು ಬೇಸರದಿಂದ ವಾಪಸ್ ಹೋಗುವಾಗ ನೋವಾಗುತ್ತಿತ್ತು. ಈಗ ನಮ್ಮ ಶ್ರಮಕ್ಕೆ ಫಲ ಸಿಕ್ಕಿರುವುದು ಖುಷಿ ತಂದಿದೆ. ಇನ್ನಿಲ್ಲಿ ನೀರು ಬತ್ತಬಾರದು.–ಸತೀಶ್ ಪೈಂತಿಮೊಗೇರ್, ಇರ್ದೆ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.