ಮಂಗಳೂರು: ಬೆಂಗಳೂರು– ಕಣ್ಣೂರು ಎಕ್ಸ್‌ಪ್ರೆಸ್ ರೈಲು (16511) ಕೆಲವು ದಿನಗಳಿಂದ ತೀರಾ ವಿಳಂಬವಾಗಿ ಬರುತ್ತಿದ್ದು, ಇದರಿಂದ ನಿತ್ಯ ಪ್ರಯಾಣಿಸುವವರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ನಿಗದಿತ ಸಮಯಕ್ಕೆ ರೈಲು ಸಂಚರಿಸಲು ಕ್ರಮ ವಹಿಸಬೇಕು ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿಯು ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗದ ವಿಭಾಗೀಯ ವ್ಯವಸ್ಥಾಪಕರಿಗೆ ಪತ್ರ ಬರೆದಿದೆ.
ಹಾಸನ– ಕುಣಿಗಲ್ ಮಾರ್ಗವಾಗಿ ಕಡಿಮೆ ಅವಧಿಯಲ್ಲಿ ಪ್ರಯಾಣಿಸಿ ಬೆಂಗಳೂರು ತಲುಪಬಹುದಾದ ಈ ರೈಲನ್ನು ಕರಾವಳಿಯ ಅನೇಕ ಪ್ರಯಾಣಿಕರು ಅವಲಂಬಿಸಿದ್ದಾರೆ. ಅಲ್ಲದೆ, ಈ ರೈಲಿನ ಸಮಯವು ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸ್ಥಳೀಯ ಪ್ರಯಾಣಕ್ಕೆ ಅನುಕೂಲಕರ ವಾಗಿದೆ. ಆದರೆ, ಕೆಲವು ದಿನಗಳಿಂದ ಈ ರೈಲು ಮಂಗಳೂರಿಗೆ ತಡವಾಗಿ ಬರುತ್ತಿದೆ ಎಂದು ಸಮಿತಿಯು ಪತ್ರದಲ್ಲಿ ತಿಳಿಸಿದೆ.
ಎಡಕುಮೇರಿ ಬಳಿ ಭೂ ಕುಸಿತದ ಕಾರಣಕ್ಕೆ ಕೆಲವು ದಿನ ಸಮಸ್ಯೆ ಆಗಿದ್ದರೂ, ಈಗ ಆ ಸಮಸ್ಯೆ ಪರಿಹಾರವಾಗಿದೆ. ಹಳಿ ವಿದ್ಯುದೀಕರಣದ ಕಾರಣಕ್ಕೆ ಯಶವಂತಪುರ– ಮಂಗಳೂರು ಎಕ್ಸ್‌ಪ್ರೆಸ್ ರೈಲು ರದ್ದಾಗಿರುವುದರಿಂದ ಪ್ರಯಾಣಿಕರು ಬೆಂಗಳೂರು– ಕಣ್ಣೂರು ಎಕ್ಸ್‌ಪ್ರೆಸ್ ರೈಲನ್ನು ಅವಲಂಬಿಸಿದ್ದಾರೆ. ನಿಗದಿತ ಸಮಯಕ್ಕೆ ರೈಲು ಮಂಗಳೂರು ತಲುಪಲು ಕ್ರಮವಹಿಸಬೇಕು ಎಂದು ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ಪತ್ರದಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.