ಉಳ್ಳಾಲ: ಸಮುದಾಯ ಭವನಗಳಿಗೆ ಅಂಬೇಡ್ಕರ್ ಅವರ ಹೆಸರಿಡುವುದು ಮಾತ್ರವಲ್ಲ; ಅವರ ತತ್ವ, ಆದರ್ಶಗಳನ್ನು ಯುವ ಪೀಳಿಗೆಗೂ ವರ್ಗಾಯಿಸಬೇಕು. ಅವರ ಅರ್ಧದಷ್ಟು ವ್ಯಕ್ತಿತ್ವವನ್ನಾದರೂ ನಾವು ಮೈಗೂಡಿಸಿಕೊಳ್ಳಬೇಕು ಎಂದರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯಿತಿ, ಉಳ್ಳಾಲ ತಾಲ್ಲೂಕು ಪಂಚಾಯಿತಿ, ಮುನ್ನೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕುತ್ತಾರು ಸಮೀಪದ ದೇವಿಪುರದಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ‘ಭೀಮ ಸೌಧ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಮುಖರಾದ ಮಾಯಿಲ, ಫಾ.ಜಯಪ್ರಕಾಶ್ ಡಿಸೋಜ, ಮಮತಾ ಡಿ.ಎಸ್.ಗಟ್ಟಿ, ಸದಾಶಿವ ಉಳ್ಳಾಲ, ರೆಹನಾ ಬಾನು, ಮಹಾಬಲ ಟಿ.ದೆಪ್ಪೆಲಿಮಾರ್, ನರ್ವಡೆ ವಿನಾಯಕ ಕಾರ್ಬಾರಿ, ಜಯರಾಮ್, ಗುರುದತ್, ಮಾದಪ್ಪ, ಬಾಬು ಶೆಟ್ಟಿ, ಲೀಲಾವತಿ, ಸುರೇಖಾ, ವಿಲ್ಮಾ ಡಿಸೋಜ, ದಿನೇಶ್ ಮೂಳೂರು, ರಮೇಶ್ ಶೆಟ್ಟಿ ಬೋಳಿಯಾರ್, ತಿಮ್ಮಕ್ಕ, ಧನಲಕ್ಷ್ಮೀ ಗಟ್ಟಿ, ವಿಲ್ಫ್ರೆಡ್ ಡಿಸೋಜ, ರಫೀಕ್ ಅಂಬ್ಲಮೊಗರು ಭಾಗವಹಿಸಿದ್ದರು.
ಮುನ್ನೂರು ಪಿಡಿಒ ಶ್ರೀಕಾಂತ್ ಸಿಂಪಿಗೇರ ಸ್ವಾಗತಿಸಿದರು. ಮುಸ್ತಾಫ ಪ್ರಸ್ತಾವಿಕವಾಗಿ ಮಾತನಾಡಿದರು.
ಸಮುದಾಯ ಭವನ ನಿರ್ವಹಣೆಯಲ್ಲಿ ಗೊಂದಲ: ದೇವಿಪುರದ ನಲಿಕೆ ಸಮುದಾಯಕ್ಕೆ ಸೇರಿರುವ ಜಾಗದಲ್ಲೇ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲಾಗಿದೆ. ಭವನದ ನಿರ್ವಹಣೆಯ ಜವಬ್ದಾರಿಯನ್ನು ನಲಿಕೆ ಸಮುದಾಯಕ್ಕೆ ನೀಡಬೇಕೆಂದು ಸ್ಥಳೀಯ ಮುಖಂಡರು ಬೇಡಿಕೆ ಇಟ್ಟಿದ್ದರು. ನಲಿಕೆ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳಲದೆ ಮುನ್ನೂರು ಪಂಚಾಯಿತಿ ಆಡಳಿತವು ಸಮುದಾಯ ಭವನದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದೆ ಎಂದು ಮುಖಂಡರು ಉದ್ಘಾಟನೆಗೆ ಬಂದಿದ್ದ ಸ್ಪೀಕರ್ ಖಾದರ್ ಅವರಲ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಯಾರಿಗೂ ಅನ್ಯಾಯವಾಗಲು ಬಿಡದೆ ಸಮುದಾಯ ಭವನದ ನಿರ್ವಹಣೆಯನ್ನು ಕಾನೂನು ರೀತಿಯಲ್ಲೇ ನಡೆಸಲಾಗುವುದು ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ. ಸಮುದಾಯ ಭವನ ಉದ್ಘಾಟನೆಗೆ ಸ್ಥಳೀಯರ ಅಸಮಾಧಾನ ಇದ್ದುದರಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪಿಡಿಒ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂಥ ಕಾರ್ಯಕ್ರಮ ಆಯೋಜಿಸಬೇಕು. ಸ್ಥಳೀಯಾಡಳಿತ, ಅಧಿಕಾರಿಗಳು ಮತ್ತು ಜನರು ಒಟ್ಟಾದಾಗ ಯೋಜನೆಗಳು ಯಶಸ್ವಿಯಾಗಲು ಸಾಧ್ಯ. ಕಟ್ಟಡವು ಪಂಚಾಯಿತಿ ಸುಪರ್ದಿಯಲ್ಲಿದ್ದರೆ ನಿರ್ವಹಣೆಯನ್ನು ಪಂಚಾಯಿತಿಯೇ ನೋಡಿಕೊಳ್ಳುತ್ತದೆ. ಸಮುದಾಯ ಭವನವನ್ನ ಕಾನೂನು ರೀತಿಯಲ್ಲೇ ನಿರ್ವಹಣೆ ಮಾಡಲಾಗುವುದು. ನಲಿಕೆ ಸಮುದಾಯದವರ ದೈವ ನರ್ತನ ಸಂಬಂಧಿ ಸಾಮಗ್ರಿ ಇಡಲು ಶೀಘ್ರವೇ ಕಟ್ಟಡದ ಮೇಲೆ ಸಿಲಿಕಾನ್ ಶೀಟ್ ಚಾವಣಿ ಅಳವಡಿಸಿಕೊಡಲಾಗುವುದು ಎಂದು ಖಾದರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.