ADVERTISEMENT

ಬೈಬಲ್ ಮಹಾ ಸಮ್ಮೇಳನಕ್ಕೆ ಚಾಲನೆ

ಸಾಮಾಜಿಕ ಸೌಹಾರ್ದಕ್ಕೆ ದೇವರ ವಾಕ್ಯ ನೆರವಾಗಲಿ: ಅಲೋಶಿಯಸ್ ಪಾವ್ಲ್ ಡಿಸೋಜ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 16:31 IST
Last Updated 20 ಮಾರ್ಚ್ 2025, 16:31 IST
ನಗರದ ಕುಲಶೇಖರದ ಪವಿತ್ರ ಶಿಲುಬೆ ಚರ್ಚ್‌ನಲ್ಲಿ ಗುರುವಾರ ಆರಂಭವಾದ ಬೈಬಲ್ ಮಹಾ ಸಮ್ಮೇಳನದ ವಿಶೇಷ ಪ್ರಾರ್ಥನೆಯಲ್ಲಿ ಭಕ್ತರು ಶ್ರದ್ಧೆ ಭಕ್ತಿಯಿಂದ ಭಾಗವಹಿಸಿದರು: ಪ್ರಜಾವಾಣಿ ಚಿತ್ರ
ನಗರದ ಕುಲಶೇಖರದ ಪವಿತ್ರ ಶಿಲುಬೆ ಚರ್ಚ್‌ನಲ್ಲಿ ಗುರುವಾರ ಆರಂಭವಾದ ಬೈಬಲ್ ಮಹಾ ಸಮ್ಮೇಳನದ ವಿಶೇಷ ಪ್ರಾರ್ಥನೆಯಲ್ಲಿ ಭಕ್ತರು ಶ್ರದ್ಧೆ ಭಕ್ತಿಯಿಂದ ಭಾಗವಹಿಸಿದರು: ಪ್ರಜಾವಾಣಿ ಚಿತ್ರ   

ಮಂಗಳೂರು: ಇಲ್ಲಿನ ಕುಲಶೇಖರದ ಕೋರ್ಡೆಲ್ ಪವಿತ್ರ ಶಿಲುಬೆ ಚರ್ಚ್ ಆವರಣದಲ್ಲಿ ಮಂಗಳೂರು ಕಥೋಲಿಕ್ ಧರ್ಮಕ್ಷೇತ್ರದ ಬೈಬಲ್ ಆಯೋಗ ಮತ್ತು ಕಥೋಲಿಕ್ ಖರಿಷ್ಮ್ಯಾಟಿಕ್ ಸೇವಾ ಸಂಚಲನ ವತಿಯಿಂದ ಏರ್ಪಡಿಸಿರುವ ಬೈಬಲ್ ಮಹಾ ಸಮ್ಮೇಳನ ಗುರುವಾರ ಆರಂಭವಾಯಿತು. 

ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜ  ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು. 

ಚರ್ಚ್‌ನಿಂದ ಸಮ್ಮೇಳನದ ವೇದಿಕೆಗೆ ಬೈಬಲ್ ಮೆರವಣಿಗೆ ನಡೆಯಿತು. ಬೈಬಲ್‌ನ ಆಯ್ದ ವಿಷಯಗಳ ಬೋಧನೆ ನಡೆಯಿತು.

ADVERTISEMENT

ಸಮ್ಮೇಳನದ ಪ್ರಯುಕ್ತ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದ ಅಲೋಶಿಯಸ್ ಪಾವ್ಲ್ ಡಿಸೋಜ, ‘ಬೈಬಲ್‌ನಲ್ಲಿರುವ ದೇವರ ವಾಕ್ಯಗಳು ಬದುಕಿಗೆ ದಾರಿದೀಪ. ತಪಸ್ಸಿನ ಈ ಕಾಲವು ಪಾಪಯುಕ್ತ ಬದುಕಿನ ಬದಲು ದೇವರು ಬಯಸುವ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ನವ ಚೈತನ್ಯ ಮೂಡಿಸುವ ದೇವರ ವಾಕ್ಯಗಳು ಸ್ವಾರ್ಥವಿಲ್ಲದ, ಪಾಪವಿಲ್ಲದ ಪ್ರಾಮಾಣಿಕ ಬದುಕು ನಡೆಸಲು ಪ್ರೇರಣೆಯಾಗಲಿ. ಸಮಾಜದಲ್ಲಿ ಸೌಹಾರ್ದದಿಂದ ಬದುಕಲು ದೇವರ ವಾಕ್ಯಗಳು ನಮಗೆ ನೆರವಾಗಲಿ’ ಎಂದು ಹಾರೈಸಿದರು.

‘ಬೈಬಲ್ ಓದುವುದರಿಂದ ಸತ್ಕಾರ್ಯ ಮಾಡಲು ಪ್ರೇರಣೆ ಸಿಗುತ್ತದೆ. ದೇವರ ಬಯಕೆಯನ್ನು ಅರಿತು ಅವರು ಮೆಚ್ಚುವಂತೆ ಜೀವನ ಸಾಗಿಸೋಣ’ ಎಂದರು. 

ಬಲಿಪೂಜೆಯಲ್ಲಿ ಸಂದೇಶ ನೀಡಿದ ಖರಿಷ್ಮ್ಯಾಟಿಕ್ ಸಂಚಲನದ ಸಂಚಾಲಕ  ಕ್ಲಿಫರ್ಡ್ ಫರ್ನಾಂಡಿಸ್, ‘ಪ್ರಾರ್ಥನೆ ಹಾಗೂ ಧ್ಯಾನಕೂಟಗಳಿಂದ ಕೇಲವ ನಮ್ಮ ಏಳಿಗೆಯ ಜೊತೆಗೆ  ಸಹೋದರರರಿಗೂ ಒಳಿತಾಗುತ್ತದೆ.  ದೇವರ ಮೇಲೆ ಭರವಸೆ ಇಟ್ಟಿದ್ದೇ ಆದರೆ ಬದುಕಿನಲ್ಲಿ ಯಾವತ್ತೂ ನಿರಾಸೆ ಎದುರಾಗದು‘ ಎಂದರು.

ಕರ್ನಾಟಕ ಪ್ರಾಂತೀಯ ಖರಿಷ್ಮ್ಯಾಟಿಕ್ ಸಂಚಲನದ ನಿರ್ದೇಶಕ ವಂ. ಫ್ರ್ಯಾಂಕ್ಲಿನ್ ಡಿಸೋಜ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಜೆ.ಬಿ.ಸಲ್ಡಾನ್ಹ, ರಾಯ್ ಕ್ಯಾಸ್ಟಲಿನೊ,  ಅಧ್ಯಕ್ಷ ಕೆವಿನ್ ಡಿಸೋಜ, ಕಾರ್ಯದರ್ಶಿ ಮೊಸ್ಸಂ ರೇಗೊ, ಚರ್ಚ್‌ನ ಉಪಾಧ್ಯಕ್ಷೆ ರೂತ್ ಕ್ಯಾಸ್ಟಲಿನೊ, ಕಾರ್ಯದರ್ಶಿ ಅನಿಲ್ ಡೆಸಾ, ಬೈಬಲ್ ಆಯೋಗದ ಸಹ ಕಾರ್ಯದರ್ಶಿ ಲೆನನ್ ಜೋನ್ ಮಸ್ಕರೇನ್ಹಸ್, ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಿಜಯ್ ಮೊಂತೆರೊ, ಪಾವ್ಲ್ ಸೆಬಾಸ್ಟಿಯನ್, ನಿಶಿತ್ ಲೋಬೊ, ವಿವಿಧ ಚರ್ಚ್‌ಗಳ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಸಮಾಜ ಬಾಂಧವರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದರು.
 

‘ನಿರಾಸೆಗೊಂಡವರ ಹೊಸ ಭರವಸೆ’

‘ಯೇಸುಕ್ರಿಸ್ತರು ಜೀವನದಲ್ಲಿ ನಿರಾಸೆಯಾದವರಿಗೆ ಹೊಸ ಭರವಸೆ ಮೂಡಿಸಬಲ್ಲವ ದೇವರು. ಅವರು ನಮ್ಮ ಕಣ್ಣಿರು ಒರೆಸುವವರು. ಜಗತ್ತು ಇರುವವರೆೆಗೆ ಅವರೂ ನಮ್ಮೊಂದಿಗಿರುತ್ತಾರೆ’ ಎಂದು ಕೇರಳದ ಅನಾಕ್ಕರ ಮೇರಿಯನ್ ರಿಟ್ರೀಟ್ ಸೆಂಟರ್‌ನ ನಿರ್ದೇಶಕ  ಡೊಮಿನಿಕ್ ವಲಮನಲ್ ಹೇಳಿದರು. ‘ಬೈಬಲ್ ಕೇವಲ ಪುಸ್ತಕವಲ್ಲ. ಹೊಸ ಬದುಕಿನ ಭರವಸೆ ಮೂಡಿಸುವ ಅವಕಾಶಗಳನ್ನು ಕಲ್ಪಿಸುವ ಶಕ್ತಿ. ಬೈಬಲ್ ಓದುವಾಗ ಇದರ ಅನುಭವವಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.