ಮುಡಿಪು: ಇಲ್ಲಿಗೆ ಸಮೀಪದ ನರಿಂಗಾನ ಗ್ರಾಮದ ಮುಖ್ಯ ಜಂಕ್ಷನ್ ಬಳಿಯ ಮೊಬೈಲ್ ಟವರ್ ಬಳಿ ಐದು ಕಾಗೆ, ಎರಡು ಗಿಡುಗ ಹಾಗೂ ಒಂದು ಕೆಂಬೂತ ಪಕ್ಷಿ ಸಾವಿಗೀಡಾಗಿದೆ.
ಸಾವಿಗೀಡಾಗಿರುವ ಸ್ಥಳದಲ್ಲಿ ಮೊಬೈಲ್ ಟವರ್ ಇದ್ದು, ಅದನ್ನು ಇತ್ತೀಚೆಗೆ ನಿರ್ಮಿಸಲಾಗಿತ್ತು. ಟವರ್ ನಿರ್ಮಾಣಕ್ಕೆ ಗ್ರಾಮದ ಕೆಲವು ಮಂದಿಯ ವಿರೋಧವಿದ್ದರೂ ಅಧಿಕಾರಿಗಳು, ಹಕ್ಕಿಗಳು ಹಾಗೂ ತೆಂಗಿನಮರಕ್ಕೆ ಟವರ್‌ನಿಂದ ಹಾನಿಯಾಗದು ಎಂದು ತಿಳಿಸಿದ್ದರಿಂದ ನಿರ್ಮಿಸಲು ಪಂಚಾಯಿತಿ ಅವಕಾಶ ನೀಡಿತ್ತು.
ತೌಡುಗೋಳಿಯಲ್ಲಿ ಇತ್ತೀಚೆಗೆ ಬಾಲಕನೊಬ್ಬನ ಮೇಲೆ ಬೀದಿ ನಾಯಿಗಳು ದಾಳಿ ಮಾಡಲು ಮುಂದಾಗಿತ್ತು. ನಾಯಿಗಳನ್ನು ಕೊಲ್ಲಲು ಯಾರಾದರೂ ವಿಷ ಪದಾರ್ಥ ಬಳಸಿದ್ದು, ಅದನ್ನು ಹಕ್ಕಿಗಳು ಸೇವಿಸಿ ಸಾವಿಗೀಡಾಗಿರಬಹುದೇ ಎಂಬ ಸಂದೇಹವೂ ವ್ಯಕ್ರವಾಗಿದೆ.
ಟವರ್ ಬಳಿಯ ಟ್ರಾನ್ಸ್‌ಫಾರ್ಮರ್‌ನ ಬಳಿಯಲ್ಲೂ ಕಾಗೆ ಸತ್ತು ಬಿದ್ದಿದೆ. ಸುಮಾರು 20 ಮೀಟರ್ ವ್ಯಾಪ್ತಿಯಲ್ಲಿ ಪಕ್ಷಿಗಳು ಸತ್ತು ಬಿದ್ದಿವೆ.
ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ, ಪಿಡಿಒ, ಸ್ಥಳೀಯ ಮುಖಂಡರು ಭೇಟಿ ನೀಡಿ ಪಂಚಾಯಿತಿ ಅಧ್ಯಕ್ಷರಿಗೆ ಈ ಬಗ್ಗೆ ಮೌಖಿಕ ದೂರ ನೀಡಿದ್ದಾರೆ.
ಹಕ್ಕಿಯ ಕಳೇಬರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದ್ದು, ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷ ನವಾಜ್ ನರಿಂಗಾನ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.