ADVERTISEMENT

‌ಕಲ್ಲು, ಮರಳು ಕೊರತೆ | ಆರ್ಥಿಕತೆಗೆ ಪೆಟ್ಟು: ಬಿಜೆಪಿ ಜಿಲ್ಲಾ ಘಟಕ ಆರೋಪ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:52 IST
Last Updated 3 ಆಗಸ್ಟ್ 2025, 5:52 IST
ಸುದ್ದಿಗೋಷ್ಠಿಯಲ್ಲಿ ಸತೀಶ್‌ ಕುಂಪಲ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಸತೀಶ್‌ ಕುಂಪಲ ಮಾತನಾಡಿದರು   

ಮಂಗಳೂರು: ‘ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಯಿಂದ ಲಕ್ಷಾಂತರ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದು,  ಜಿಲ್ಲೆಯ ಆರ್ಥಿಕತೆಗೂ ಪೆಟ್ಟುಬಿದ್ದಿದೆ. ನಾವು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೆ ಹೋರಾಟ ಅನಿವಾರ್ಯ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಹೇಳಿದರು.

ಶನಿವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಈ ಬಗ್ಗೆ ಕಾಳಜಿಯೇ ಇಲ್ಲ. ಜಿಲ್ಲೆಗೆ ಭೇಟಿ ನೀಡಿದರೂ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಕೆಲಸ ಮಾಡಿಲ್ಲ’ ಎಂದು ದೂರಿದರು.

‘ಯು.ಟಿ. ಖಾದರ್‌ ಅವರು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಾರೆ. ಸಮಸ್ಯೆ ಪರಿಹರಿಸುತ್ತೇವೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಿ, ವಿದೇಶಕ್ಕೆ ಹೋಗಿ ಕೂರುತ್ತಾರೆ. ಜಿಲ್ಲೆಯ ಕಾಂಗ್ರೆಸ್‌ ನಾಯಕರೂ ಈ ಸಮಸ್ಯೆ ನಿವಾರಣೆಗೆ ಚಕಾರ ಎತ್ತುತ್ತಿಲ್ಲ’ ಎಂದರು.

ADVERTISEMENT

‘ಕೆಂಪು ಕಲ್ಲು, ಮರಳು ಸೇರಿ ಅಗತ್ಯ ವಸ್ತುಗಳು ಕಾನೂನು ರೀತಿಯಲ್ಲಿ ಎಲ್ಲರಿಗೂ ಲಭಿಸುವಂತೆ ಮಾಡುವುದು  ರಾಜ್ಯ ಸರ್ಕಾರದ ಜವಾಬ್ದಾರಿ. ಸಿಆರ್‌ಝಡ್‌ನಲ್ಲಿ ಕರಾವಳಿಯ ಮೂರು ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸುವ ವಿಷಯವಾಗಿ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದರೆ ತಾನು ನಿಯಮಾವಳಿ ಸರಳೀಕರಣಕ್ಕೆ ಸಿದ್ಧ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರವನ್ನೇ ಬರೆದಿಲ್ಲ’ ಎಂದು ಆಪಾದಿಸಿದರು.

ಬಳಕೆಗೆ ಯೊಗ್ಯವಲ್ಲ: ನಾನ್‌ ಸಿಆರ್‌ಝಡ್‌ ಪ್ರದೇಶದ ಮರಳು ದಾಸ್ತಾನಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ವಾಸ್ತವವಾಗಿ ಅಲ್ಲಿ ಗುಣಮಟ್ಟದ ಮರಳು ಇಲ್ಲ. ಕಳ್ಳಸಾಗಾಣಿಕೆಯಾಗಿದೆ. ಈಗಿರುವುದು ನಿರ್ಮಾಣ ಚಟುವಟಿಕೆಗೆ ಬಳಸಲು ಯೋಗ್ಯವಲ್ಲದ ದಪ್ಪ, ಹರಳಿನಂತಹ ಮರಳು ಎಂದು ಶಾಸಕ ಡಾ.ವೈ. ಭರತ್‌ ಶೆಟ್ಟಿ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಸಣ್ಣ ತೊರೆಗಳಿವೆ. ಅಲ್ಲಿ ರೈತರೇ ಮರಳು ತೆಗೆದುಕೊಳ್ಳುವಂತೆ ಮರಳು ಮೂಲಗಳನ್ನು ವಲಯವಾರು ವರ್ಗೀಕರಣ ಮಾಡಬೇಕು. ಕರಾವಳಿಗೆ ಪ್ರತ್ಯೇಕ ಮರಳು ನೀತಿ, ಕೆಂಪು ಕಲ್ಲು ತೆಗೆಯುವ ನಿಯಮಾವಳಿ ಸರಳೀಕರಣ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಕೆ.ನರಸಿಂಹ ನಾಯಕ ಆಗ್ರಹಿಸಿದರು.

ಸತ್ಯಾಸತ್ಯತೆ ಹೊರಬರಲಿ: ‘ಧರ್ಮಸ್ಥಳ ಒಂದು ಗ್ರಾಮ. ಅಲ್ಲಿ ನಡೆದಿದೆ ಎನ್ನಲಾದ ದೂರುಗಳ ಬಗ್ಗೆ ತನಿಖೆ ನಡೆದಿದ್ದು, ಸತ್ಯಾಸತ್ಯತೆ ಹೊರಬರಲಿ. ಕಾನೂನಿಗಿಂತ ಯಾರೂ ಮೇಲಲ್ಲ. ಆದರೆ, ಅಲ್ಲಿರುವ ದೇವಸ್ಥಾನದ ಭಕ್ತರ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂಬುದು ನಮ್ಮ ನಿಲುವು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಪ್ರತಿಕ್ರಿಯಿಸಿದರು.

ಪಾಲಿಕೆ: ಅನುದಾನ ಬಳಕೆಗೆ ಅಡ್ಡಿ

ಮಂಗಳೂರು ಮಹಾನಗರ ಪಾಲಿಕೆಗೆ ಚುನಾಯಿತ ಆಡಳಿತ ಮಂಡಳಿ ಇಲ್ಲದ ಕಾರಣ 15ನೇ ಹಣಕಾಸಿನ ಅನುದಾನ ಬಳಕೆಗೆ ಅಡ್ಡಿಯಾಗಿದೆ. ನಾವು ರಾಜ್ಯ ಚುನಾವಣಾಧಿಕಾರಿಯನ್ನು ಭೇಟಿಯಾಗಿದ್ದೇವೆ. ರಾಜ್ಯ ಸರ್ಕಾರ ವಾರ್ಡ್‌ವಾರು ಮೀಸಲಾತಿ ಪಟ್ಟಿ ಕಳಿಸಿದರೆ ಚುನಾವಣೆ ಘೋಷಿಸುವುದಾಗಿ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರದ ಈ ವಿಳಂಬ ನೀತಿ ವಿರುದ್ಧ ನಾವು ಹೋರಾಟ ರೂಪಿಸುತ್ತಿದ್ದೇವೆ ಎಂದು ಶಾಸಕ ಡಾ.ಭರತ್‌ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.