ಮಂಗಳೂರು: ‘ಕೋಮುವಾದಕ್ಕೆ ಪ್ರಚೋದನೆ ನೀಡುವ ಬಿಜೆಪಿ ನಾಯಕರು ಮೂಲಭೂತವಾದಿಗಳು. ಯಾವುದಾದರೂ ಕೋಮು ಹತ್ಯೆಗಳಲ್ಲಿ ಬಿಜೆಪಿ ನಾಯಕರ ಮಕ್ಕಳು ಸತ್ತ ಉದಾಹರಣೆ ಇದೆಯೇ. ಅವರ ಮಕ್ಕಳು ಜೈಲಿಗೆ ಹೋಗಿದ್ದಾರೆಯೇ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಪ್ರಶ್ನಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕು ಎಂದು ಬಯಸುವವರು ನಾವು. ಆದರೂ ಧರ್ಮಾಧಾರಿತ ಹತ್ಯೆಗಳು ಮರುಕಳಿಸುತ್ತಲೇ ಇವೆ. 30 ವರ್ಷಗಳಿಂದ ಈಚೆಗೆ 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಂಡರೆ ಕೋಮುಗಲಭೆ ಶಾಶ್ವತವಾಗಿ ನಿಲ್ಲಲಿದೆ. ಪ್ರಚೋದನಾಕಾರಿ ಭಾಷಣ ಮಾಡುವ ಶಾಸಕರನ್ನೂ ಅಮಾನತುಮಾಡಬೇಕು’ ಎಂದರು.
‘ಕೋಮು ಹಿಂಸೆ ನಿಗ್ರಹ ಪಡೆ ರಚನೆಗೆ ಸರ್ಕಾರ ಆದೇಶ ಹೊರಡಿಸಿದೆ. ಕೋಮುಹಿಂಸೆಗಳ ಸೂತ್ರಧಾರರನ್ನು ಈ ಪಡೆ ಮಟ್ಟ ಹಾಕಲಿದೆ ಎಂಬ ವಿಶ್ವಾಸವಿದೆ. ಸಮರ್ಥ ಅಧಿಕಾರಿಯನ್ನು ಅದಕ್ಕೆ ನೇಮಿಸಬೇಕು. ಜಿಲ್ಲೆಯಲ್ಲಿ ಶಾಂತಿ ನೆಲೆಸುವುದನ್ನು ಬಯಸದ ಕೆಲವರು ಇದಕ್ಕೂ ಅಪಸ್ವರ ಎತ್ತಿದ್ದಾರೆ’ ಎಂದರು.
‘ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿಸುವುದು ಪೊಲೀಸರ ಕ್ರಮದ ಬಳಿಕ ಕಡಿಮೆಯಾಗಿದೆ. ಇಂತಹ ವಿಚಾರದಲ್ಲಿ ಪೊಲೀಸರನ್ನು ಬೆಂಬಲಿಸಬೇಕು. ಆದರೆ ಬಿಜೆಪಿಯವರು ಪೊಲೀಸರ ಧೈರ್ಯ ಕುಗ್ಗಿಸುವ ಹೇಳಿಕೆ ನೀಡುತ್ತಿದ್ದಾರೆ’ ಎಂದರು.
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರ ವಿರುದ್ಧ ನೋಟಿಸ್ ಜಾರಿ ಮಾಡಿದ ಕುರಿತು ಪ್ರತಿಕ್ರಿಯಿಸಿದ ರೈ, ‘ಮನಸ್ಸಿನ ನೋವನ್ನು ಅವರು ತೋಡಿಕೊಂಡಿದ್ದಾರೆ. ಅವರನ್ನು ಕರೆದು ಮಾತನಾಡಿಸಿ ಲೋಪವನ್ನು ಸರಿಪಡಿಸಿ ಪಕ್ಷ ಬಲವರ್ಧನೆ ಮಾಡಬೇಕು. ಜಿಲ್ಲೆಯಲ್ಲಿ ಜಾತ್ಯತೀತ ಶಕ್ತಿ ಬಲಗೊಳಿಸಬೇಕು’ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಶಿಧರ್ ಹೆಗ್ಡೆ, ಆರ್.ಕೆ.ಪೃಥ್ವಿರಾಜ್, ವಿಶ್ವಾಸ್ ಕುಮಾರ್ ದಾಸ್, ನವೀನ್ ಡಿಸೋಜ, ಅಪ್ಪಿಲತಾ, ಪ್ರಕಾಶ್ ಸಾಲಿಯಾನ್, ದಿನೇಶ್ ರೈ ಉಳ್ಳಾಲ್, ಲಾನ್ಸಿ ಲಾಟ್ ಪಿಂಟೊ, ಆರಿಫ್ ಬಾವ, ಶುಭೋದಯ ಆಳ್ವ, ಕೇಶವ ಮರೋಳಿ, ಶಂಸುದ್ದೀನ್ ಬಂದರ್, ಶಬ್ಬೀರ್ ಎಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.