ADVERTISEMENT

ಪುತ್ತೂರು | ದರಿದ್ರ ಸರ್ಕಾರವನ್ನು ಕಿತ್ತುಹಾಕುವ ತನಕ ವಿರಮಿಸಲ್ಲ: ವಿಜಯೇಂದ್ರ

ಅಟಲ್ ವಿರಾಸತ್' ಕಾರ್ಯಕ್ರಮದಲ್ಲಿ ಹೇಳಿಕೆ  

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 3:12 IST
Last Updated 20 ನವೆಂಬರ್ 2025, 3:12 IST
ಪುತ್ತೂರಿನ ಲಕ್ಷ್ಮಿವೆಂಕಟರಮಣ ದೇವಳದ ಬಳಿಯ ಮೈದಾನದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿದರು
ಪುತ್ತೂರಿನ ಲಕ್ಷ್ಮಿವೆಂಕಟರಮಣ ದೇವಳದ ಬಳಿಯ ಮೈದಾನದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿದರು   

ಪುತ್ತೂರು: ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನ, ರೈತ ಹಾಗೂ ಹಿಂದೂ ವಿರೋಧಿ ನೀತಿಯೊಂದಿಗೆ ಮೆರೆಯುತ್ತಿದ್ದು, ಅಟಲ್ ಜನ್ಮಶತಾಬ್ಧಿಯ ಈ ಸಂದರ್ಭದಲ್ಲಿ ಈ ಭ್ರಷ್ಟ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕುವ ಸಂಕಲ್ಪ ಮಾಡಬೇಕು. ಈ ದರಿದ್ರ ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕುವ ತನಕ ವಿರಮಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ನಗರದ ಲಕ್ಷ್ಮಿ ವೆಂಕಟರಮಣ ದೇವಳದ ಬಳಿಯ ಮೈದಾನದಲ್ಲಿ ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ಅಂಗವಾಗಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಗೂಬೆಕೂರಿಸುವ ಕೆಲಸ ಮಾಡುತ್ತಿದೆ. ಅಹಿಂದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ಕಳೆದ ಎರಡೂವರೆ ವರ್ಷದಲ್ಲಿ ಅನುದಾನವೇ ಬಿಡುಗಡೆ ಮಾಡಿಲ್ಲ. ಅದರ ಬದಲು ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ರಾಜ್ಯದ ಜನರ ಪಾಲಿಗೆ ಸರ್ಕಾರ ಬದುಕಿದ್ದರೂ ಸತ್ತಂತಾಗಿದೆ. ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಲು ಪಣತೊಡಲಾಗಿದೆ ಎಂದು ತಿಳಿಸಿದರು.

ADVERTISEMENT

ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕು. ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು. ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ನಮ್ಮೊಳಗಿನ ವೈಮನಸ್ಸು ಬದಿಗಿಟ್ಟು ಮುಂದಿನ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಜಾತ ಶತ್ರು, ದೇಶಭಕ್ತ ವಾಜಪೇಯಿ ಅವರ ಜನ್ಮಶತಾಬ್ಧಿಯ ಇದೊಂದು ಭಾವನಾತ್ಮಕ ಕಾರ್ಯಕ್ರಮ. ಅಟಲ್‌ಜಿ ನಮಗೆಲ್ಲರಿಗೂ ಪ್ರೇರಣೆ. ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುವುದನ್ನು ಅಟಲ್ ಅವರಿಂದ ಕಲಿಯಬೇಕು. ಇಡೀ ರಾಜ್ಯಕ್ಕೆ ಸಂಘಟನಾ ಶಕ್ತಿಯ ಪ್ರೇರಣೆ ನೀಡಿರುವ ದಕ್ಷಿಣ ಕನ್ನಡ ಮತ್ತು ಕರಾವಳಿಯ ಕಾರ್ಯಕರ್ತರು ಇಡೀ ರಾಜ್ಯಕ್ಕೆ ಮಾದರಿ ಎಂದು ಬಣ್ಣಿಸಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ಸ್ವಾಭಿಮಾನಿ, ಸಶಕ್ತ, ಸಮೃದ್ಧ ಭಾರತದ ನಿರ್ಮಾಣ ಅಟಲ್ ಅವರ ಪರಿಕಲ್ಪನೆಯಾಗಿತ್ತು. ಅಟಲ್‌ಜಿ ಅವರ ಒಂದಾಂಶ ಕೆಲಸವನ್ನು ಮಾಡಿದರೆ ಬಿಜೆಪಿ ಶಕ್ತಿಶಾಲಿಯಾಗಬಹುದು, ಕಳೆದುಕೊಂಡಿರುವುದನ್ನು ಮರಳಿ  ಪಡೆಯಬಹುದು ಎಂದರು.

ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು, ಸಂಸದರಾದ ಕ್ಯಾ.ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಬಿಜೆಪಿ ಸಂಘಟನೆಗಾಗಿ ಕೆಲಸ ಮಾಡಿದ್ದ ಹಿರಿಯರಾದ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಮತ್ತು ಡಾ.ಗೌರಿ ಪೈ ಅವರನ್ನು ಸನ್ಮಾನಿಸಲಾಯಿತು. ವಾಜಪೇಯಿ ಅವರ ಕಾರು ಚಾಲಕರಾಗಿ 2 ವರ್ಷ ಕೆಲಸ ಮಾಡಿದ್ದ ಬಿ.ಸಿ.ಕುಶಾಲಪ್ಪ ಗೌಡ ಅವರನ್ನು ಗೌರವಿಸಲಾಯಿತು.

ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯಕ್, ಹರೀಶ್ ಪೂಂಜ‌, ಭಾಗೀರಥಿ ಮುರಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಡಾ.ಧನಂಜಯ ಸರ್ಜಿ, ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ಎಸ್.ಅಂಗಾರ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಪಕ್ಷದ ಮುಖಂಡರಾದ ಮೋನಪ್ಪ ಭಂಡಾರಿ,ಉದಯಕುಮಾರ್ ಶೆಟ್ಟಿ, ಕ್ಯಾ.ಗಣೇಶ್ ಕಾರ್ಣಿಕ್, ಪ್ರೇಮಾನಂದ ಶೆಟ್ಟಿ, ಪ್ರಸನ್ನಕುಮಾರ್ ಮಾರ್ತ, ಆರ್.ಸಿ.ನಾರಾಯಣ, ವಿದ್ಯಾ ಆರ್.ಗೌರಿ, ಗೋಪಾಲಕೃಷ್ಣ ಹೇರಳೆ, ಜಗದೀಶ್ ಆಳ್ವ, ಶಿವಕುಮಾರ್ ಕಲ್ಲಿಮಾರು ಹಾಗೂ ಜಿಲ್ಲೆಯ ವಿವಿಧ ಕಡೆಯ ಬಿಜೆಪಿ ಮಂಡಲಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಸದಸ್ಯ ಕಿಶೋಕ್‌ಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ವಂದಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ ಮತ್ತು ಪುತ್ತೂರು ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರಿನ ಲಕ್ಷ್ಮೀ ವೆಂಕಟರಮಣ ದೇವಳದ ಬಳಿಯ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯರಾದ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಮತ್ತು ಡಾ.ಗೌರಿ ಪೈ ಅವರನ್ನು ಸನ್ಮಾನಿಸಲಾಯಿತು     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.