ADVERTISEMENT

ಶೈಕ್ಷಣಿಕೇತರ ಉದ್ದೇಶಕ್ಕೆ ಶಾಲೆಗಳ ಬಳಕೆಗೆ ನಿಷೇಧ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 10:59 IST
Last Updated 23 ಜುಲೈ 2024, 10:59 IST
ಶಾಲೆಗಳನ್ನು ಶೈಕ್ಷಣಿಕೇತರ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸುವ ಆದೇಶವನ್ನು ಪ್ರತಿಭಟಿಸಲು ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ  ಏರ್ಪಡಿಸಿದ್ದ ಭಜನೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪಾಲಿಕೆ ಸದಸ್ಯರು ಭಾಗವಹಿಸಿದರು– ಪ್ರಜಾವಾಣಿ ಚಿತ್ರ
ಶಾಲೆಗಳನ್ನು ಶೈಕ್ಷಣಿಕೇತರ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸುವ ಆದೇಶವನ್ನು ಪ್ರತಿಭಟಿಸಲು ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ  ಏರ್ಪಡಿಸಿದ್ದ ಭಜನೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಪಾಲಿಕೆ ಸದಸ್ಯರು ಭಾಗವಹಿಸಿದರು– ಪ್ರಜಾವಾಣಿ ಚಿತ್ರ   

ಮಂಗಳೂರು: 'ಸರ್ಕಾರಿ ಶಾಲೆಗಳು ಕಾಂಗ್ರೆಸ್‌ನವರ ಅಪ್ಪನ ಆಸ್ತಿ ಅಲ್ಲ.‌ ಶಾಲೆಗಳಲ್ಲಿ ಹಾಗೂ ಅವುಗಳ ಮೈದಾನಗಳಲ್ಲಿ ನೂರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಗಣೇಶೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ತಡೆದರೆ ಹಳ್ಳಿ ಹಳ್ಳಿಗಳಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ’ ಎಂದು ಬಿಜೆಪಿ ದಕ್ಷಿಣ ಕನ್ನಡ‌ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

‘ಶಾಲೆಗಳ ಮೈದಾನಗಳಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ಸಾರ್ವಜನಿಕವಾಗಿ ನಡೆಯುತ್ತ ಬಂದಿರುವ -ಗಣೇಶೋತ್ಸವ, ಶಾರದೋತ್ಸವ, ಮೊಸರು ಕುಡಿಕೆ ಸಹಿತ ಹಿಂದೂ ಹಬ್ಬಗಳ ಆಚರಣೆಯನ್ನು ನಿರ್ಬಂಧಿಸಿ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ’ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಮಂಗಳೂರು ದಕ್ಷಿಣ ಘಟಕದ ನೇತೃತ್ವದಲ್ಲಿ ಇಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಇಲಾಖೆ ಈ ಆದೇಶ ಹಿಂಪಡೆಯದಿದ್ದರೆ, ಯಾವೆಲ್ಲ ಶಾಲೆಗಳಲ್ಲಿ ಈ ಹಿಂದೆ ಧಾರ್ಮಿಕ ಆಚರಣೆಗಳು ನಡೆಯುತ್ತಿದ್ದವೋ, ಅವುಗಳನ್ನು ಅಲ್ಲೇ ಮುಂದುವರಿಸುತ್ತೇವೆ ’ ಎಂದರು. 

ADVERTISEMENT

ಮೇಯರ್‌ ಸುಧೀರ್ ಶೆಟ್ಟಿ ಕಣ್ಣೂರು, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ  ಮೊದಲಿನಿಂದಲೂ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಹಿಂದುತ್ವವಾದಿ ಕಾರ್ಯಕರ್ತರ ಸ್ಥೈರ್ಯ ಕುಗ್ಗಿಸಲಾಗುತ್ತಿದೆ’ ಎಂದರು.

ನಾದ ಸಂಕೀರ್ತನಾ ಮತ್ತು ಪರಂಜ್ಯೋತಿ ಭಜನಾ ತಂಡದವರು ಪ್ರತಿಭಟನಾರ್ಥವಾಗಿ ಭಜನೆ ಮಾಡಿದರು.   

ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು,  ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಂದನ ಮಲ್ಯ, ಮಹಿಳಾ‌ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ರಾವ್, ಪಕ್ಷದ ಮುಖಂಡರಾದ ರವಿಶಂಕರ ಮಿಜಾರು, ಪ್ರೇಮಾನಂದ ಶೆಟ್ಟಿ, ಕಿಶೋರ್‌ ಕುಮಾರ್‌ ಬೊಟ್ಯಾಡಿ, ನಿತಿನ್ ಕುಮಾರ್, ಮೌನೇಶ್ ಚೌಟ ಪಾಲಿಕೆ ಸದಸ್ಯರು ಭಾಗವಹಿಸಿದರು.

ಶಾಲೆಗಳನ್ನು ಹಾಗೂ ಅವುಗಳ ಮೈದಾನಗಳನ್ನು ಶೈಕ್ಷಣಿಕೇತರ ಉದ್ದೇಶಕ್ಕೆ ಬಳಸಬಾರದು ಎಂದು 2013ರ ಫೆಬ್ರುವರಿಯಲ್ಲಿ ಹೊರಡಿಸಿದ್ದ ಆದೇಶ ಪಾಲನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಹಾಗೂ ಅವರ ಮೂಲಕ ಶಾಲಾ ಮುಖ್ಯೋಪಾಧ್ಯಾಯರಿಗೆ ಜುಲೈ 16ರಂದು ಜ್ಞಾಪನಾ ಪತ್ರ ಹೊರಡಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.