ADVERTISEMENT

‘ಹಣೆ ಬರಹವನ್ನು ತಿದ್ದುವ ಪುಸ್ತಕಗಳು’

‘ಹೆರಿಗೆ ಬಳಿಕದ ತೊಂದರೆಗಳು ಮತ್ತು ಚಿಕಿತ್ಸೆ’ ಕೈಬರಹದ ಪುಸ್ತಕಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 14:18 IST
Last Updated 22 ಜೂನ್ 2019, 14:18 IST
ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ  ಡಾ.ಆರ್.ರತಿದೇವಿ ಅವರ ‘ಹೆರಿಗೆ ಬಳಿಕದ ತೊಂದರೆಗಳು ಮತ್ತು ಚಿಕಿತ್ಸೆ’ ಎಂಬ ಕೈಬರಹದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ಪ್ರಜಾವಾಣಿ   ಚಿತ್ರ
ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ  ಡಾ.ಆರ್.ರತಿದೇವಿ ಅವರ ‘ಹೆರಿಗೆ ಬಳಿಕದ ತೊಂದರೆಗಳು ಮತ್ತು ಚಿಕಿತ್ಸೆ’ ಎಂಬ ಕೈಬರಹದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ಪ್ರಜಾವಾಣಿ   ಚಿತ್ರ   

ಮಂಗಳೂರು: ವೈದ್ಯೆ ಡಾ. ರತಿದೇವಿ ಅವರ ‘ಕೈ ಬರಹದ ಪುಸ್ತಕಗಳು ಹಣೆಬರಹವನ್ನು ತಿದ್ದುವ ಪುಸ್ತಕಗಳು’ ಇವುಗಳ ಸಾರ ಸಾಮಾನ್ಯ ಜನರಿಗೂ ತಿಳಿಯುವಂತಿದೆ. ಪುಸ್ತಕ ಓದುವ ಹವ್ಯಾಸ ಎಲ್ಲರಲ್ಲಿಯೂ ಬೆಳೆಯಬೇಕು ಎಂದು ಹಿರಿಯ ಸಾಹಿತಿ ಉದ್ಯಾವರ ಮಾಧವ ಆಚಾರ್ಯ ಹೇಳಿದರು.

ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಶನಿವಾರ ಡಾ.ಆರ್.ರತಿದೇವಿ ಅವರ ‘ಹೆರಿಗೆ ಬಳಿಕದ ತೊಂದರೆಗಳು ಮತ್ತು ಚಿಕಿತ್ಸೆ’ ಎಂಬ ಕೈಬರಹದ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಹೆರಿಗೆ ಯಾರನ್ನು ಯಾವುದಕ್ಕೂ ಕಾಯುವುದಿಲ್ಲ. ಯಾವುದೋ ನಿಗೂಢ ಸಂಕಲ್ಪವೊಂದು ಮೂರ್ತ ರೂಪ ಪಡೆಯುವ ಈ ದಾರಿಯಲ್ಲಿ, ಹೆರಿಗೆಯ ಬಳಿಕ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿದು ಅವುಗಳನ್ನು ಪಾಲನೆ ಮಾಡುವುದು ಅವಶ್ಯ. ಸಮಾಜದಲ್ಲಿ ವೈದ್ಯರ ಪಾತ್ರ ಸಾಕಷ್ಟು ಇದೆ. ಇದರ ನಡುವೆಯೂ ಡಾ. ರತಿದೇವಿ ಅವರು ತಮ್ಮ ಕೈಬರಹದ ಎರಡು ಅಮೂಲ್ಯ ಪುಸ್ತಕಗಳನ್ನು ಸಮಾಜಕ್ಕೆ ಕೊಡುಗೆ ಆಗಿ ನೀಡಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.

ADVERTISEMENT

ಜಗತ್ತಿಗೆ ಕಣ್ತೆರೆಸುವ ಮಾತೃ ಹೃದಯಕ್ಕೆ ಸಂದ ಕೊಡುಗೆ ರೂಪದಲ್ಲಿ ಈ ಪುಸ್ತಕಗಳು ತಾಯಿ ಜನ್ಮ ನೀಡುವ ಸಂದರ್ಭ ಪಡುವಂತಹ ವೇದನೆಗಳನ್ನು ಹಾಗೂ ವೈದ್ಯಕೀಯ ಘಟ್ಟಗಳನ್ನು ಎಳೆ ಎಳೆಯಾಗಿ ಅಕ್ಷರಗಳ ರೂಪದಲ್ಲಿ ಲೇಖಕಿ ಡಾ. ರತಿದೇವಿ ದಾಖಲಿಸಿದ್ದಾರೆ ಎಂದರು.

ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಹಾಬಲೇಶ್ವರ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯರ ವೃತ್ತಿ ಸಮಾಜದಲ್ಲಿ ನಾಜೂಕಿನಿಂದ ಕೂಡಿದ್ದು, ರೋಗಿ ಮತ್ತು ವೈದ್ಯರ ಸಂಬಂಧ ಸಮಾಜ ಬೆಸೆಯುವ ಗೋಡೆ ಇದ್ದಂತೆ. ವೃತ್ತಿಯ ನಡುವೆಯೂ ವೈದ್ಯೆ ರತಿದೇವಿ ಅವರು ಸಮಾಜಕ್ಕೆ ಎರಡು ಪುಸ್ತಕಗಳನ್ನು ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ವಿಧಾನಸಭಾ ಮಾಜಿ ಸ್ಪೀಕರ್‌ ಎನ್. ಯೋಗೀಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಕೆ.ಎ.ರೋಹಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಹರಿಕೃಷ್ಣ ಪುನರೂರು, ಚಕ್ರಪಾಣಿ ಉಡುಪ ಸೇರಿದಂತೆ ಹಲವರು ಇದ್ದರು.

ಕೃತಿಯ ಲೇಖಕರಾದ ಡಾ.ಆರ್. ರತಿದೇವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾದಾಯಿನಿ ಪ್ರೌಢಶಾಲೆ ಸಂಚಾಲಕ ಸುಧಾಕರ ರಾವ್ ಪೇಜಾವರ ನಿರೂಪಿಸಿದರು. ಶೋಭಾ ಪೇಜಾವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.