ADVERTISEMENT

ಬೆಳ್ತಂಗಡಿ| ಚೆಂಡಿನಂಥ ವಸ್ತು ಸ್ಪೋಟ: ಬಾಲಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 2:56 IST
Last Updated 20 ಫೆಬ್ರುವರಿ 2026, 2:56 IST
ಬಂದಾರುವಿನಲ್ಲಿ ಸ್ಫೋಟಗೊಂಡ ವಸ್ತುವಿನ ಅವಶೇಷ. ಸ್ಫೋಟದಿಂದ ಬಾಲಕನ ಕಾಲಿನಲ್ಲಿ ಗಾಯಗಳಾಗಿರುವುದು 
ಬಂದಾರುವಿನಲ್ಲಿ ಸ್ಫೋಟಗೊಂಡ ವಸ್ತುವಿನ ಅವಶೇಷ. ಸ್ಫೋಟದಿಂದ ಬಾಲಕನ ಕಾಲಿನಲ್ಲಿ ಗಾಯಗಳಾಗಿರುವುದು    

ಬೆಳ್ತಂಗಡಿ: ತಾಲ್ಲೂಕಿನ ಬಂದಾರು ಗ್ರಾಮದಲ್ಲಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡಿನಂತಹ ವಸ್ತುವೊಂದು ಬುಧವಾರ ಸಂಜೆ ಸ್ಫೋಟಗೊಂಡು ಬಾಲಕನೊಬ್ಬ ಗಾಯಗೊಂಡಿದ್ದಾನೆ.

ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ–ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಗಾಯಗೊಂಡಿರುವ ಬಾಲಕ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ದಂಪತಿಯ ಇಬ್ಬರು ಮಕ್ಕಳು ಅಂಗಳದಲ್ಲಿ  ಆಟವಾಡುತ್ತಿದ್ದರು. ಆಗ ಚೆಂಡಿನಕಾರದ ಪ್ಲಾಸ್ಟಿಕ್ ಕಟ್ಟೊಂದು  ಅವರಿಗೆ ಸಿಕ್ಕಿತ್ತು. ಬಾಲಕರಿಬ್ಬರು ಅದನ್ನು ಹೆಕ್ಕಿಕೊಂಡು ಬಂದಿದ್ದರು. ಅದನ್ನು ಬಳಸಿ ಕ್ರಿಕೆಟ್ ಆಟವಾಡಿದ್ದರು. ಒಬ್ಬ ಬಾಲಕ ಅದನ್ನು ಬಳಸಿ ಬೌಲಿಂಗ್ ಮಾಡಿದ್ದು, ಅಭೀಶ್ ಬ್ಯಾಟ್ ನಿಂದ ಬಾರಿಸಿದ್ದ. ಈ ವೇಳೆ ಅದು ಸ್ಫೋಟಗೊಂಡು ಸ್ಥಳದಲ್ಲಿ ಹೊಗೆಯಾವರಿಸಿತ್ತು. ಆ ಕಟ್ಟಿನಲ್ಲಿದ್ದ ಕಲ್ಲಿನ ಚೂರುಗಳು ಸಿಡಿದ ರಭಸಕ್ಕೆ ಬಾಲಕ ಅಭೀಶ್  ಕಾಲಿನಲ್ಲಿ ಅಲ್ಲಲ್ಲಿ ಗಾಯಗಳಾಗಿವೆ. ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ಜಯಶ್ರೀ ಅವರು ದೂರು ನೀಡಿದ್ದು ಧರ್ಮಸ್ಥಳ ಠಾಣೆಯಲ್ಲಿ1884ರ ಸ್ಪೋಟಕ ಕಾಯ್ದೆಯ ಸೆಕ್ಷನ್‌ 9 (ಬಿ) (1) ಹಾಗೂ ಮನುಷ್ಯನ ಪ್ರಾಣಕ್ಕೆ ಸಂಚಕಾರವನ್ನು ಉಂಟುಮಾಡುವಂತೆ ಅಸಡ್ಡೆವಹಿಸಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125 (ಎ) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. 

‘ ಸ್ಪೋಟಕ ವಸ್ತುವನ್ನು ಯಾರೋ ಕಿಡಿಗೇಡಿಗಳು  ಕಾಡುಪ್ರಾಣಿ ಬೇಟೆಗಾಗಿ ಇಟ್ಟಿದ್ದು,  ಅದನ್ನು ನಾಯಿಗಳು ಮನೆಯ ಅಂಗಳಕ್ಕೆ ತಂದು ಹಾಕಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.