ದಿವಾಕರ್ ಮತ್ತು ನಂದೀಶ್
ಮಂಗಳೂರು: ಏಕ ನಿವೇಶನ ನಕ್ಷೆ ಮತ್ತು ಆಸ್ತಿ ಪತ್ರ (ಪ್ರಾಪರ್ಟಿ ಕಾರ್ಡ್) ಮಾಡಿಸಲು ಅರ್ಜಿದಾರರಿಂದ ಲಂಚ ಪಡೆದ ಆರೋಪದ ಮೇಲೆ ಸರ್ವೆಯರ್ ನಂದೀಶ್ ಮತ್ತು ಮಧ್ಯವರ್ತಿ ದಿವಾಕರ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
‘ನಗರದ ಕಂಕನಾಡಿ ಮತ್ತು ಬಜಾಲ್ ಗ್ರಾಮಗಳಲ್ಲಿ ತಮ್ಮ ತಾಯಿಯ ಹೆಸರಿನಲ್ಲಿರುವ ಜಮೀನಿನ ಏಕ ನಿವೇಶನ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ವ್ಯಕ್ತಿಯೊಬ್ಬರು ನಗರದ ಆಸ್ತಿ ಮಾಲೀಕತ್ವ ದಾಖಲೆ ( ಯು.ಪಿ.ಒ.ಆರ್ ) ನಿರ್ವಹಿಸುವ ಕಚೇರಿಗೆ 2025ರ ಫೆಬ್ರುವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಕಚೇರಿಗೆ ಹೋಗಿ ಏಪ್ರಿಲ್‌ನಲ್ಲಿ ವಿಚಾರಿಸಿದ ಬಳಿಕ ಅಲ್ಲಿನ ಸರ್ವೆಯರ್ ನಂದೀಶ್ ಸರ್ವೆ ನಡೆಸಿ, ಅದಕ್ಕೆ ₹6,500 ಲಂಚ ಪಡೆದಿದ್ದರು. ಮತ್ತೆ ₹20 ಸಾವಿರ ಲಂಚವನ್ನು ಮಧ್ಯವರ್ತಿಯಾಗಿರುವ ಬಿಜೈನ ದಿವಾಕರ್ ಮೂಲಕ ಪಡೆದುಕೊಂಡಿದ್ದರು.
ನಂತರ ಬಜಾಲ್ ಮತ್ತು ಕಂಕನಾಡಿ ಗ್ರಾಮಗಳ ಎರಡೂ ಸ್ಥಳಗಳಲ್ಲಿನ ಏಕ ನಿವೇಶನ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ ₹18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಜಿದಾರರು ಪಿರ್ಯಾದಿದಾರರು ಪುರಾವೆಗಳೊಂದಿಗೆ ನಗರದ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂದೀಶ್ ಮತ್ತು ದಿವಾಕರ್ ವಿರುದ್ಧ ಪ್ರಕರಣ ದಾಖಲಾಗಿತ್ತು.
‘ನಂದೀಶ್ ಅರ್ಜಿದಾರರಿಂದ ₹15 ಸಾವಿರ ಲಂಚದ ಹಣವನ್ನು ಮಧ್ಯವರ್ತಿ ದಿವಾಕರ್ ಮೂಲಕ ಪಡೆದುಕೊಂಡಿದ್ದರು. ಇದುವರೆಗೆ ಒಟ್ಟು ₹41,500 ಲಂಚ ಪಡೆದಿದ್ದ ಸರ್ವೇಯರ್ ಆ ಬಳಿಕವೂ ಏಕ ನಿವೇಶನ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಮತ್ತೆ ₹2 ಸಾವಿರ ಲಂಚ ಕೇಳಿದ್ದರು. ಬುಧವಾರ ಲಂಚದ ಹಣ ಪಡೆಯುವಾಗ ಅವರನ್ನು ಬಂಧಿಸಲಾಗಿದೆ. ಅವರು ಇದುವರೆಗೆ ಸಂತ್ರಸ್ತ ವ್ಯಕ್ತಿಯಿಂದ ಒಟ್ಟು ₹43,500 ಲಂಚ ಪಡೆದಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ನಗರದ ಲೋಕಾಯುಕ್ತ ಡಿವೈಎಸ್‌ಪಿ ಡಾ. ಗಾನ ಪಿ.ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಸುರೇಶ್ ಕುಮಾರ್.ಪಿ, ಭಾರತಿ ಜಿ., ಚಂದ್ರಶೇಖರ್ ಕೆ.ಎನ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.