ADVERTISEMENT

ವಂಚಕ ಉದ್ಯೋಗ ಏಜೆನ್ಸಿಗಳ ಕಡಿವಾಣಕ್ಕೆ ಚೌಟ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:41 IST
Last Updated 14 ಫೆಬ್ರುವರಿ 2026, 7:41 IST
ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಜೊತೆ ಸಂಸದ ಚೌಟ ಚರ್ಚಿಸಿದರು 
ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಜೊತೆ ಸಂಸದ ಚೌಟ ಚರ್ಚಿಸಿದರು    

ಮಂಗಳೂರು: ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವಕರು ನಕಲಿ ಉದ್ಯೋಗ ನೇಮಕ ಏಜೆನ್ಸಿಗಳ ಮೂಲಕ ಗಲ್ಫ್‌ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳಿ ಅಲ್ಲಿ ಮೋಸ ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿರುವುದು ಗಂಭೀರ ವಿಚಾರವಾಗಿದ್ದು, ಇಂತಹ ಪ್ರಕರಣ ದೇಶದೆಲ್ಲೆಡೆ ಹೆಚ್ಚುತ್ತಿದೆ. ವಂಚನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ವಿನಂತಿಸಿದರು.

ಶುಕ್ರವಾರ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಅವರು, ವಂಚಕ ಜಾಲಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮವಹಿಸಬೇಕು. ನಕಲಿ ಏಜೆನ್ಸಿಗಳ ಬಗ್ಗೆ ಜನರಲ್ಲಿ ಪೂರ್ವ- ಪ್ರಯಾಣ ಸಮಾಲೋಚನೆ (ಪ್ರಿ-ಡಿಪಾರ್ಚರ್ ಕೌನ್ಸೆಲಿಂಗ್), ನಕಲಿ ಏಜೆನ್ಸಿಗಳ ಬಗ್ಗೆ ಜಾಗೃತಿ ಅಭಿಯಾನಗಳು ಹಾಗೂ ನೇಮಕಾತಿ ಸಂಸ್ಥೆಗಳೊಂದಿಗೆ ಸಮನ್ವಯ ಬಲಪಡಿಸುವ ಬಗ್ಗೆ ಗಮನಹರಿಸಬೇಕು. ಅಪಾಯ ಹೆಚ್ಚಿರುವ ದೇಶಗಳಲ್ಲಿ ಹೆಚ್ಚುವರಿ ಮೇಲ್ವಿಚಾರಣಾ ವ್ಯವಸ್ಥೆ ಬಲಪಡಿಸಬೇಕೆಂದು ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಯುವಕರು ಕಾಂಬೋಡಿಯಾ ದೇಶಕ್ಕೆ ತೆರಳಿ ಅಲ್ಲಿ ಸೈಬರ್‌ ವಂಚಕರ ಜಾಲದಲ್ಲಿ ಸಿಲುಕಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಕೊನೆಗೆ ವಿದೇಶಾಂಗ ಸಚಿವಾಲಯದ ಮಧ್ಯಸ್ಥಿಕೆ ಹಾಗೂ ನಿರಂತರ ಫಾಲೋಅಪ್‌ನಿಂದಾಗಿ ಮಂಗಳೂರಿನ ಐವರು ಯುವಕರನ್ನು ಕಾಂಬೋಡಿಯಾದ ನರಕಯಾತನೆ ರಕ್ಷಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸ್‌ ಕರೆತರುವುದಕ್ಕೆ ಸಾಧ್ಯವಾಗಿದೆ ಎಂದು ಅವರು ಗಮನಕ್ಕೆ ತಂದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.