ADVERTISEMENT

ಬಿಎಸ್‌ಎನ್‌ಎಲ್‌ನಿಂದ ಭಾರತ್‌ ಫೈಬರ್‌ ಸೇವೆಗೆ ಆದ್ಯತೆ: ಜಿ.ಆರ್. ರವಿ

ಬಿಎಸ್ಎನ್‌ಎಲ್‌ ಮುಖ್ಯ ಮಹಾಪ್ರಬಂಧಕ ಜಿ.ಆರ್‌. ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 11:27 IST
Last Updated 15 ಅಕ್ಟೋಬರ್ 2022, 11:27 IST
ಜಿ.ಆರ್‌. ರವಿ
ಜಿ.ಆರ್‌. ರವಿ   

ಮಂಗಳೂರು: ಭಾರತ್‌ ಸಂಚಾರ ನಿಗಮ (ಬಿಎಸ್‌ಎನ್‌ಎಲ್‌)ದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ‘ಭಾರತ್‌ ಫೈಬರ್‌ ಟು ಹೋಂ‘ ಜಾಲ ವಿಸ್ತರಿಸಿ, ಆ ಮೂಲಕ ಗುಣಮಟ್ಟದ ಇಂಟರ್ನೆಟ್‌ ಸೇವೆಗೆ ಆದ್ಯತೆ ನೀಡಲಾಗಿದೆ ಎಂದು ನಿಗಮದ ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆಯ ಮುಖ್ಯ ಮಹಾಪ್ರಬಂಧಕ ಜಿ.ಆರ್‌. ರವಿ ಹೇಳಿದರು.

ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್‌ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಲಿಮಿಟೆಡ್‌ (ಬಿಬಿಎನ್‌ಎಲ್‌) ಎಲ್ಲೆಡೆಯೂ ಫೈಬರ್‌ ಜಾಲ ಹೊಂದಿದೆ. ಅದನ್ನು ಬಳಸಿಕೊಂಡು ಇಂಟರ್‌ನೆಟ್‌ ಸೇವೆ ಬಲಪಡಿಸಲು ಮುಂದಾಗಿದ್ದೇವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 401 ಗ್ರಾಮ ಪಂಚಾಯಿತಿಗಳಿದ್ದು, ಅವುಗಳಿಗೆಲ್ಲವೂ ಫೈಬರ್‌ ಸಂಪರ್ಕ ಕಲ್ಪಿಸಲಾಗಿದೆ. ಮನೆ ಮನೆಗೂ ಭಾರತ್‌ ಫೈಬರ್‌ ಸೇವೆ ಕಲ್ಪಿಸುವ ಕೆಲಸ ನಡೆದಿದೆ ಎಂದರು.

ರಾಜ್ಯದಲ್ಲಿ 2ಲಕ್ಷಕ್ಕೂ ಹೆಚ್ಚು ಭಾರತ್‌ ಫೈಬರ್‌ ಗ್ರಾಹಕರು ಇದ್ದಾರೆ. ದಕ್ಷಿಣ ಕನ್ನಡ ಟೆಲಿಕಾಂ ಜಿಲ್ಲೆಯಲ್ಲಿ 18 ಸಾವಿರ ಗ್ರಾಹಕರು ಇದ್ದು, ಬೇಡಿಕೆ ಹೆಚ್ಚಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವೇಗದ ಇಂಟರ್‌ನೆಟ್‌ ಪಡೆಯಲು ಭಾರತ್‌ ಏರ್‌ ಫೈಬರ್‌ ಸೇವೆಯೂ ಲಭ್ಯವಿದೆ. ಪ್ರತಿ ತಿಂಗಳಿಗೆ ₹449ರಿಂದ ಈ ಸೇವೆ ಆರಂಭವಾಗಲಿದ್ದು, ಹಬ್ಬದ ಅಂಗವಾಗಿ ಆಕರ್ಷಕ ಕೊಡುಗೆಗಳನ್ನೂ ನೀಡಲಾಗಿದೆ. ಸ್ಥಿರ ದೂರವಾಣಿ ಹೊಂದಿರುವ ಗ್ರಾಹಕರು ಈ ಸೇವೆಗೆ ಬದಲಾದರೆ ರಿಯಾಯಿತಿ ಇದೆ ಎಂದು ಹೇಳಿದರು.

ADVERTISEMENT

ಗ್ರಾಹಕರಿಗೆ ಭಾರತ್‌ ಫೈಬರ್‌ ಮೂಲಕ ಗುಣಮಟ್ಟದ ಇಂಟರ್‌ನೆಟ್‌ ಸೇವೆ ಒದಗಿಸಲು, ಉತ್ತಮ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಫ್ರಾಂಚೈಸಿ ಪಾಲುದಾರರನ್ನಾಗಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.ಕೇಂದ್ರ ಸರ್ಕಾರದ ಸೂಚನೆಯಂತೆ ಭಾರತ್‌ ನೆಟ್‌ ಉದ್ಯಮಿ ಯೋಜನೆ ಪರಿಚಯಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಉದ್ದಿಮೆದಾರರಾಗಲು ಅವಕಾಶ ಇದೆ. ಆಸಕ್ತರು ಮಾಹಿತಿಗಾಗಿ ಮಾರುಕಟ್ಟೆ ವಿಭಾಗದ ಎಜಿಎಂ ಲೋಕೇಶ್‌ ಯು(9448189011), ಸುಧೀರ್‌ಕುಮಾರ್‌ ಕೆ. (9448555433) ಅವರನ್ನು ಸಂಪರ್ಕಿಸಬಹುದು ಎಂದರು.

ಸಂಪನ್ಮೂಲ ಕ್ರೋಡೀಕರಣಕ್ಕಾಗಿ ನಿಗಮದ ಕಟ್ಟಡಗಳ ಬಾಡಿಗೆ, ಮಾರಾಟದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಂಗಳೂರಿನ ಕದ್ರಿ ಪಾರ್ಕ್‌ ಬಳಿಯ ಒಂದು ಎಕರೆ ಜಾಗವನ್ನು ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರು.

ಡಿಜಿಎಂ ಮುರುಗೇಶನ್‌, ಎಜಿಎಂ (ಯೋಜನೆ) ದೇವಾಡಿಗ, ಲೋಕೇಶ್‌, ಸುಧೀಕರ್‌ ಕುಮಾರ್‌ ಕೆ., ಸುರೇಶ ಕುಮಾರ್‌ ಇದ್ದರು.

ಮೊಬೈಲ್‌ ಸೇವೆ ಸುಧಾರಣೆಗೆ ಯತ್ನ

ಮಂಗಳೂರು ನಗರದಲ್ಲಿ ಮಾತ್ರ 4ಜಿ ಸೇವೆ ಲಭ್ಯವಿದೆ. ಉಳಿದ ಕಡೆ 2ಜಿ, 3ಜಿ ಇದೆ. ಮುಂದಿನ ದಿನಗಳಲ್ಲಿ 4ಜಿ ಸೇವೆಯನ್ನು ಜಿಲ್ಲೆಯ ಎಲ್ಲ ಭಾಗಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು.

‘ನಮ್ಮ ಜಿಲ್ಲೆಯಲ್ಲಿ ಮೊದಲು 7.5 ಲಕ್ಷ ಬಿಎಸ್‌ಎನ್‌ಎಲ್‌ ಮೊಬೈಲ್‌ ಗ್ರಾಹಕರು ಇದ್ದರು. ಈಗ 7 ಲಕ್ಷ ಗ್ರಾಹಕರು ಇದ್ದಾರೆ. ಕೇಂದ್ರ ಸರ್ಕಾರ ನಮ್ಮ ನಿಗಮಕ್ಕೆ ಉತ್ತೇಜನಾ ಪ್ಯಾಕೇಜ್‌ ಜಾರಿಗೊಳಿಸಿದ ನಂತರ ನಮ್ಮ ಸೇವೆಯೂ ಸುಧಾರಣೆಯಾಗುತ್ತಿದೆ‘ ಎಂದರು.

ಸಿಮ್‌ ಬದಲಿಸಿಕೊಳ್ಳಿ

ಮಂಗಳೂರು ಮಹಾನಗರದಲ್ಲಿ ಇರುವವರು ಇನ್ನೂ 2ಜಿ, 3ಜಿ ಸಿಮ್‌ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಅವರು ಬಿಎಸ್‌ಎನ್‌ಎಲ್‌ ಕಚೇರಿ ಅಥವಾ ಬಿಎಸ್‌ಎನ್‌ಎಲ್‌ ಶಾಫಿಗಳಿಗೆ ತೆರಳಿ 4ಜಿ ಸಿಮ್‌ಕಾರ್ಡ್‌ಗಳನ್ನು ಪಡೆದುಕೊಳ್ಳಬೇಕು. ಇದರಿಂದ ಸೇವೆಯ ಗುಣಮಟ್ಟ ಸುಧಾರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.