ADVERTISEMENT

ಬಜೆಟ್‌ ನಿರೀಕ್ಷೆ | ದಕ್ಷಿಣ ಕನ್ನಡ: ಕೈಗಾರಿಕೆಗಳ ಸಮಗ್ರ ಅಭಿವೃದ್ಧಿ ಕನಸು

ಸಣ್ಣ, ಮಧ್ಯಮ, ಅತಿಸಣ್ಣ ಕೈಗಾರಿಕೆಗಳ ಬೆಳವಣಿಗೆ, ಜೆಸ್ಕೊ ಕಂಪನಿ ಆರಂಭಕ್ಕೆ ಒತ್ತಾಯ; ಫಿಲ್ಮ್‌ ಸಿಟಿ ಯೋಜನೆ ಮುನ್ನೆಲೆಗೆ

ವಿಕ್ರಂ ಕಾಂತಿಕೆರೆ
Published 8 ಜನವರಿ 2026, 2:46 IST
Last Updated 8 ಜನವರಿ 2026, 2:46 IST
<div class="paragraphs"><p>ಮಂಗಳೂರಿನ ಗಂಜಿಮಠ ಕೈಗಾರಿಕಾ ಪ್ರದೇಶ&nbsp; </p></div>

ಮಂಗಳೂರಿನ ಗಂಜಿಮಠ ಕೈಗಾರಿಕಾ ಪ್ರದೇಶ 

   

ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್

ಮಂಗಳೂರು: ಕೋಟಿ ಕೋಟಿ ಮೊತ್ತದ ಬಿಡುಗಡೆ ಭರವಸೆ, ಅನುದಾನ ಬಿಡುಗಡೆ ಆಗಿದ್ದರೂ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕೈಗಾರಿಕಾ ವಲಯ ಮೂಲಸೌಲಭ್ಯಗಳ ವಿಷಯದಲ್ಲಿ ಇನ್ನೂ ಕುಂಟುತ್ತ ಸಾಗುತ್ತಿದೆ ಎಂಬ ಆರೋಪ ಬಜೆಟ್ ಮಂಡನೆ ಹತ್ತಿರವಾಗುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದಿದೆ.  

ADVERTISEMENT

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಯತ್ತ ಕೈಗಾರಿಕಾ ಇಲಾಖೆ ದೃಷ್ಟಿ ನೆಟ್ಟಿದ್ದರೆ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಡಲು ಇದು ಸುಸಮಯ ಎಂದು ಕೈಗಾರಿಕೋದ್ಯಮಿಗಳು ಅಭಿಪ್ರಾಯಪಡುತ್ತಿದ್ದಾರೆ. 

ಕೈಗಾರಿಕಾ ವಲಯಗಳ ಅಭಿವೃದ್ಧಿಯ ಜೊತೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವುದು ಕೂಡ ಇಂದಿನ ತುರ್ತು ಎಂದು ಇಲಾಖೆ ಬೈಕಂಪಾಡಿ ಎರಡನೇ ಹಂತದಲ್ಲಿ ಜೆಸ್ಕೊ (ಜಯಪ್ರಕಾಶ್ ಎಂಜಿನಿಯರಿಂಗ್ ಮತ್ತು ಸ್ಟೀಲ್ ಕಂಪನಿ) ಅಭಿವೃದ್ಧಿಗೆ ಸಂಬಂಧಿಸಿ ಇರುವ ಕಾನೂನು ತೊಡಕು ನಿವಾರಿಸಲು ಮೊರೆ ಹೋಗಿದೆ. ಇದು ಸಾಧ್ಯವಾದರೆ 354 ಎಕರೆ ಪ್ರದೇಶದಲ್ಲಿ ಕಂಪನಿ ಸ್ಥಾಪನೆಯಾಗಿದೆ. 

ಬೋಂದೆಲ್‌ನಲ್ಲಿ ಫಿಲ್ಮ್‌ ಸಿಟಿ ಸ್ಥಾಪನೆಯ ಪ್ರಸ್ತಾಪವೂ ಮತ್ತೆ ಕೇಳಿಬಂದಿದೆ. ಬಳಸದೇ ಇರುವ 100 ಎಕರೆ ಜಾಗದಲ್ಲಿ ಈ ಯೋಜನೆಯನ್ನು ಆರಂಭಿಸುವುದು ಇಲಾಖೆಯ ಉದ್ದೇಶ. ಸಿಇಒಎಲ್‌ 2.0 ಅಡಿಯಲ್ಲಿ ಅತ್ಯಾದುನಿಕ ಕೌಶಲಾಭಿವೃದ್ದಿ ಕೇಂದ್ರ ಸ್ಥಾಪನೆಯೂ ಈ ಬಾರಿಯ ಪ್ರಮುಖ ಬೇಡಿಕೆಯಾಗಿದೆ. ಕೆನರಾ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ (ಕೆಸಿಸಿಐ) ಒತ್ತಾಸೆಯಾಗಿ ನಿಂತಿದೆ.

‘ಈ ವರ್ಷ ಹೊಸತನದಿಂದ ಕೂಡಿದ ಎಂಎಸ್‌ಎಂಇ ಅಭಿವೃದ್ಧಿ ಮತ್ತು  ಒಟ್ಟಾರೆ ಕೈಗಾರಿಕೆ ಅಭಿವೃದ್ಧಿಯ ಮೇಲೆ ಕೆಸಿಸಿಐ ದೃಷ್ಟಿ ನೆಟ್ಟಿದೆ. ಈ ಹಿಂದೆ ಐಟಿ ವಲಯದತ್ತ ಹೆಚ್ಚು ಗಮನ ನೀಡಲಾಗಿತ್ತು. ಈ ಬಾರಿ ಅದರಿಂದ ಈಚೆ ಬರಬೇಕಾಗಿದೆ. ಸರ್ಕಾರ ಇದಕ್ಕೆ ಯೋಜನೆ ರೂಪಿಸುವ ವಿಶ್ವಾಸವಿದೆ’ ಎಂದು ಕೆಸಿಸಿಐ ಅಧ್ಯಕ್ಷ ಪಿ.ಬಿ ಅಹ್ಮದ್ ಮುದಸ್ಸರ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಜೆಸ್ಕೊ ಯೋಜನೆಯಡಿ ಸಮಗ್ರ, ಬಹುವಿನ್ಯಾಸದ ಲಾಜಿಸ್ಟಿಕ್ ಪಾರ್ಕ್‌ ಅಭಿವೃದ್ಧಿಪಡಿಸಬೇಕಾಗಿದೆ. ಬಳ್ಕುಂಜ ಕೈಗಾರಿಕಾ ಪ್ರದೇಶದ 1 ಸಾವಿರ ಎಕರೆ ಜಾಗದಲ್ಲಿ ಅತ್ಯುನ್ನತ ಮಟ್ಟದ ಎಂಎಸ್‌ಎಂಇ ಆಧಾರಿತ ಕೈಗಾರಿಕೆಗಳು ಆರಂಭವಾಗಬೇಕಾಗಿವೆ. ಇದರ ಅಂತಿಮ ಅಧಿಸೂಚನೆಗೆ ಕಾಯುತ್ತಿದ್ದು ಫಾಸ್ಟ್‌ ಟ್ರ್ಯಾಕ್ ವ್ಯವಸ್ಥೆಯ ಮೂಲಕ ಇದನ್ನು ಮಾಡಲು ಬಜೆಟ್‌ನಲ್ಲಿ ಘೋಷಣೆ ಆಗಬಹುದೇ ಎಂಬ ಕಾತರ’ ನಮ್ಮದು ಎಂದು ಮುದಸ್ಸರ್ ಹೇಳಿದರು.  

ವೇತನ ಪ್ರಮಾಣವನ್ನು ಮರು ನಿಗದಿ

ಕೈಗಾರಿಕೆಗಳಲ್ಲಿ ಕೆಲಸ ಮಾಡುವವರ ಕನಿಷ್ಠ ವೇತನ ಪ್ರಮಾಣವನ್ನು ಸರ್ಕಾರ ಮರುನಿಗದಿ ಮಾಡಲಿದೆ. ಇದನ್ನು ಸಣ್ಣ ಕೈಗಾರಿಕೆಗಳಿಗೆ ಅನ್ವಯಿಸಬಾರದು ಎಂಬ ಬೇಡಿಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ್ದು (ಕಾಸಿಯಾ). ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಆಗುವ ನಿರೀಕ್ಷೆಯೂ ಗರಿಗೆದರಿದೆ. ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಿದ 12 ಹೊಸ ಕೈಗಾರಿಕಾ ವಸಾಹತುಗಳ ಪಟ್ಟಿಯಲ್ಲಿ ಮಂಗಳೂರನ್ನು ಕೈಬಿಡಲಾಗಿದೆ. ಇಲ್ಲಿಗೂ ಮಂಜೂರು ಮಾಡುವ ಬೇಡಿಕೆ ಇದೆ. 

ಮಂಗಳೂರಿನಿಂದ ವಾರ್ಷಿಕ ಒಟ್ಟು ₹ 47 ಸಾವಿರ ಕೋಟಿ ಮೊತ್ತದ ಉತ್ಪನ್ನಗಳು ರಫ್ತಾಗುತ್ತಿದ್ದು ಅದರ ಪೈಕಿ ಎಂಆರ್‌ಪಿಎಲ್ ಪಾಲು ₹ 44 ಕೋಟಿ. ಇದನ್ನು ಪರಿಗಣಿಸಿ ಸೌಲಭ್ಯಗಳನ್ನು ಒದಗಿಸಬೇಕೆಂಬ ಒತ್ತಾಯವಿದೆ. 

ಕೈಗಾರಿಕಾ ಸಂಶೋಧನೆಗೆ ಆದ್ಯತೆ ಸಿಗಲಿ

  ಕೈಗಾರಿಕಾ ವಲಯದಲ್ಲಿ ಈಗ ತುರ್ತಾಗಿ ಆಗಬೇಕಾಗಿರುವುದು ಸಂಶೋಧನೆ. ಯುರೋಪಿಯನ್ ರಾಷ್ಟ್ರಗಳು ಮತ್ತು ಅಮೆರಿಕದಲ್ಲಿ ಈ ಕೆಲಸ ಆಗುತ್ತಿದೆ. ದೇಶದ ಉನ್ನತ ಸಂಸ್ಥೆಗಳು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಯುವ ಜನತೆಗೆ ಪ್ರೋತ್ಸಾಹ ನೀಡಬೇಕು. ಹೀಗೆ ಮಾಡಿದರೆ ಬರೀ ಉದ್ಯೋಗ ಅರಸುತ್ತ ಹೋಗುವವರು ಕೈಗಾರಿಕೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತದೆ ಎಂದು ಮಂಗಳೂರಿನ ಉದ್ಯಮಿ ಗಣೇಶ್ ಹೆಬ್ಬಾರ್ ತಿಳಿಸಿದರು.

ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೂಡಿಕೆಗೆ ಆದ್ಯತೆ ನೀಡಬೇಕು. ಈಗ ಬಹುತೇಕ ಎಲ್ಲರೂ ಬೆಂಗಳೂರಿನಲ್ಲಿ ಹೂಡಿಕೆಯಲ್ಲಿ ತೊಡಗುವುದರಿಂದ ಅಲ್ಲಿ ಒತ್ತಡ ಹೆಚ್ಚುತ್ತಿದೆ. ಅದನ್ನು ತಗ್ಗಿಸುವುದಕ್ಕೂ ಇತರ ನಗರಗಳಲ್ಲಿ ಹೂಡಿಕೆಯಿಂದ ಸಾಧ್ಯವಾಗಲಿದೆ ಎಂದು ಅವರು ಹೇಳಿದರು. 

ರಾಜ್ಯದಲ್ಲಿ ತೆರಿಗೆ ಸಂಗ್ರಹಕ್ಕೆ ವಿಶೇಷ ಕಾಳಜಿ ವಹಿಸಲಾಗಿದೆ. ಆದರೆ ಹೆಚ್ಚು ತೆರಿಗೆ ನೀಡುವವರು ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದಾರೆ ಎಂಬ ಮಾತು ಜನರಲ್ಲಿ ಇದೆ. ಇದನ್ನು ಹೋಗಲಾಡಿಸಲು ವಿಶೇಷ ಸವಲತ್ತು ನೀಡಬೇಕು.
ಗಣೇಶ್ ಹೆಬ್ಬಾರ್, ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.