ADVERTISEMENT

ಸುಳ್ಯ: ವಿವಾಹ ದಿಬ್ಬಣದ ಬಸ್ ಮಗುಚಿ ಬಿದ್ದು 7 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 23:10 IST
Last Updated 3 ಜನವರಿ 2021, 23:10 IST
ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಉರುಳಿ ಬಿದ್ದಿರುವುದು
ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಉರುಳಿ ಬಿದ್ದಿರುವುದು   

ಸುಳ್ಯ: ಗಡಿಭಾಗದ ಕಾಸರಗೋಡು ಜಿಲ್ಲೆಯ ಪಾಣತ್ತೂರು ಬಳಿ ಭಾನುವಾರ ಮಧ್ಯಾಹ್ನ ಮದುವೆ ದಿಬ್ಬಣದ ಬಸ್‌ ಮನೆಯೊಂದರ ಮೇಲೆ ಮಗುಚಿ ಬಿದ್ದಿದ್ದು, ಬಸ್‌ನಲ್ಲಿದ್ದ 7 ಮಂದಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪುತ್ತೂರು ತಾಲ್ಲೂಕಿನ ಬಲ್ನಾಡ್‌ನ ರಾಜೇಶ್(38), ಅವರ ಪುತ್ರ ಆದರ್ಶ (14), ಕುಂಜೂರುಪಂಜ ದೇವಸ್ಯದ ಸುಮತಿ (26), ಆರ್ಲಪದವು ಅರ್ಧಮೂಲೆಯ ಶ್ರೇಯಸ್ (13), ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಕಳೆಂಜಿಲದ ಸೇಸಮ್ಮ ಯಾನೆ ಜಯಲಕ್ಷ್ಮೀ (50), ಸುಳ್ಯ ತಾಲ್ಲೂಕಿನ ಸೋಣಂಗೇರಿ ಕುಕ್ಕಂದೂರಿನ ರವಿಚಂದ್ರ (40), ಬಸ್‌ ನಿರ್ವಾಹಕ ಬಂಟ್ವಾಳದ ನರಿಕೊಂಬು ಶಶಿಧರ ಪೂಜಾರಿ (24) ಮೃತಪಟ್ಟವರು.

ಪುತ್ತೂರು ತಾಲ್ಲೂಕಿನ ಬಲ್ನಾಡು ಗ್ರಾಮದ ಚನಿಲದ ಕೊಗ್ಗು ನಾಯ್ಕ ಅವರ ಪುತ್ರಿಯ ವಿವಾಹವು ಕೊಡಗು ಜಿಲ್ಲೆಯ ಚೆತ್ತುಕಯ ಬಳಿಯ ಕರಿಕೆಯಲ್ಲಿ ಭಾನುವಾರ ನಿಗದಿಯಾಗಿತ್ತು.

ADVERTISEMENT

ವಧು ಮತ್ತು ಮನೆಯವರು ಬೇರೊಂದು ವಾಹನದಲ್ಲಿ ಹೋಗಿದ್ದರು.

ಬಸ್‌ನಲ್ಲಿ ಸುಮಾರು 60 ಮಂದಿ ಇದ್ದರು. ಗಾಯಗೊಂಡ 20 ಮಂದಿಯನ್ನು ಕಾಞಂಗಾಡ್ ಆಸ್ಪತ್ರೆಗೆ ಹಾಗೂ ಗಂಭೀರ ಗಾಯಗೊಂಡ 11 ಮಂದಿಯನ್ನು ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಸಾರಿಗೆ ಸಚಿವ ಎ.ಕೆ. ಶಶೀಂದ್ರನ್ ತನಿಖೆಗೆ ಆದೇಶಿಸಿದ್ದಾರೆ.

ಕಾಞಂಗಾಡ್ ಸಹಾಯಕ ಕಮಿಷನರ್‌ ನೇತೃತ್ವದಲ್ಲಿ ತನಿಖೆ ನಡೆಸ ಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು
ತಿಳಿಸಿದ್ದಾರೆ.

ಅಪಘಾತದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.