ADVERTISEMENT

ಗಡಿ ತೆರೆದರೂ ಶುರುವಾಗದ ಬಸ್‌ ಸಂಚಾರ, ಕಾಸರಗೋಡು–ಮಂಗಳೂರು ಪ್ರಯಾಣಿಕರ ಪರದಾಟ

ಸಿಗದ ಅನುಮತಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:43 IST
Last Updated 24 ಸೆಪ್ಟೆಂಬರ್ 2020, 3:43 IST

ಮಂಗಳೂರು: ಕೋವಿಡ್‌–19 ನಿಂದಾಗಿ ಕೇರಳ ಸರ್ಕಾರ ಈ ಹಿಂದೆ ಮುಚ್ಚಿದ್ದ ಕರ್ನಾಟಕ– ಕೇರಳ ಗಡಿ ರಸ್ತೆಗಳನ್ನು ಈಗ ತೆರೆದಿದ್ದರೂ, ಕಾಸರಗೋಡು–ಮಂಗಳೂರು ಮಧ್ಯೆ ಬಸ್‌ ಸಂಚಾರ ಇನ್ನೂ ಆರಂಭವಾಗಿಲ್ಲ. ಖಾಸಗಿ ವಾಹನಗಳು ಕೇರಳ– ಕರ್ನಾಟಕ ಗಡಿಯಲ್ಲಿ ಸಂಚರಿಸುತ್ತಿದ್ದು, ಕಾಸರಗೋಡು ಜಿಲ್ಲಾಡಳಿತದಿಂದ ಅನುಮತಿ ಸಿಗದಿದ್ದರಿಂದ ಬಸ್‌ ಸಂಚಾರ ಆರಂಭವಾಗಿಲ್ಲ.

ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಅಂತರ ರಾಜ್ಯ ಸಂಚಾರದ ಅಡೆತಡೆಗಳನ್ನು ತೆಗೆದು ಹಾಕಿತ್ತು. ಆದರೆ, ಕೇರಳ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ರಸ್ತೆಗಳನ್ನು ತೆರೆದಿರಲಿಲ್ಲ. ಈ ಪ್ರಕರಣವು ಕೋರ್ಟ್‌ನಲ್ಲಿ ಇರುವುದರಿಂದ ಅಂತರ ರಾಜ್ಯ ಬಸ್ ಸಂಚಾರಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿಸಿತ್ತು.

ಬಿಜೆಪಿ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್, ಕೇರಳ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಗಡಿ ರಸ್ತೆಗಳನ್ನು ತೆರೆಯುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಈ ಆದೇಶವನ್ನು ಪಾಲಿಸಿದ ಕೇರಳ ಸರ್ಕಾರ ಎಲ್ಲಾ ರಸ್ತೆಗಳನ್ನು ಈಗ ಮುಕ್ತಗೊಳಿಸಿದೆ.

ADVERTISEMENT

ಈ ಹಿಂದೆ ಕೇರಳ ಸರ್ಕಾರ ಇದೇ 21 ರಿಂದ ಬಸ್ ಸೇವೆ ಆರಂಭವಾಗಲಿದೆ ಎಂದು ಹೇಳಿತ್ತು. ಆದರೆ ಅಂತರ ರಾಜ್ಯ ಬಸ್‌ ಸಂಚಾರ ಆರಂಭವಾಗಿಲ್ಲ.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ 21 ಅಂತರ ರಾಜ್ಯ ರಸ್ತೆಗಳಿದ್ದು, ಆ ಪೈಕಿ 12 ರಸ್ತೆಗಳಲ್ಲಿ ಬಸ್‌ ಸಂಚಾರ ಇದೆ. ಆರು ತಿಂಗಳಿನಿಂದ ಕಾಸರಗೋಡು ಮತ್ತು ಮಂಗಳೂರು ನಡುವಿನ ಬಸ್ ಸೇವೆ ಸ್ಥಗಿತಗೊಂಡಿದ್ದು, ಇದರಿಂದಾಗಿ ದೈನಂದಿನ ಪ್ರಯಾಣಿ
ಕರಿಗೆ ಸಮಸ್ಯೆ ಉಂಟಾಗಿದೆ. ಲಾಕ್‌ಡೌನ್‌ಗೂ ಮುನ್ನ ಮಂಗಳೂರು ಹಾಗೂ ಕಾಸರಗೋಡು ನಡುವೆ ನಿತ್ಯ 5ಸಾವಿರ ಜನರು ಪ್ರಯಾಣಿ
ಸುತ್ತಿದ್ದು, ಎರಡು ನಗರಗಳ ನಡುವೆ 150ಕ್ಕೂ ಅಧಿಕ ಬಾರಿ ಬಸ್‌ ಸಂಚಾರ ಮಾಡುತ್ತಿದ್ದವು.

‘ಕೆಎಸ್‌ಆರ್‌ಟಿಸಿ ಸಿದ್ಧ’

ಪ್ರಯಾಣಿಕರ ಟ್ವೀಟ್‌ಗೆ ಸ್ಪಂದಿಸಿರುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಮಂಗಳೂರಿನಿಂದ ಕಾಸರಗೋಡಿಗೆ ಬಸ್‌ ಸಂಚಾರ ಆರಂಭಿಸಲು ಕೆಎಸ್‌ಆರ್‌ಟಿಸಿ ಸಿದ್ಧವಿದೆ. ಅನುಮತಿ ನೀಡುವಂತೆ ಕಾಸರಗೋಡು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಇದುವರೆಗೆ ಅನುಮತಿ ಸಿಕ್ಕಿಲ್ಲ ಎಂದು ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಹಯಾತ್ರಿ ತಂಡದ ಚೇತನ್‌ಕುಮಾರ್, ‘ಕಾಸರಗೋಡು ಜಿಲ್ಲಾಧಿಕಾರಿ ಇನ್ನೂ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದು ಖಾಸಗಿ ಬಸ್‌ಗಳ ಲಾಬಿ ಇರಬಹುದು’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.