ADVERTISEMENT

‘ಶೀಘ್ರ ಆನ್‌ಲೈನ್‌ ವಹಿವಾಟು ಆರಂಭ'

‘ಸ್ಪೈಸ್‌ ಟೋಫಿ’ ಕ್ಯಾಂಪ್ಕೊದಿಂದ ಹೊಸ ಚಾಕಲೇಟ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 12:25 IST
Last Updated 20 ನವೆಂಬರ್ 2019, 12:25 IST
‘ಸ್ಪೈಸ್‌ ಟೋಫಿ’ ಚಾಕಲೇಟ್‌ ಅನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
‘ಸ್ಪೈಸ್‌ ಟೋಫಿ’ ಚಾಕಲೇಟ್‌ ಅನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.   

ಮಂಗಳೂರು: ಚಾಕಲೇಟ್‌ ತಯಾರಿಕೆ ಮಾಡುತ್ತಿರುವ ಕ್ಯಾಂಪ್ಕೊ, ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಶೀಘ್ರದಲ್ಲಿಯೇ ಕ್ಯಾಂಪ್ಕೊ ಆನ್‌ಲೈನ್‌ ವಹಿವಾಟು ಆರಂಭಿಸಲಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ತಿಳಿಸಿದರು.

ನಗರದ ಕ್ಯಾಂಪ್ಕೊ ಕಚೇರಿಯಲ್ಲಿ ಬುಧವಾರ ಕ್ಯಾಂಪ್ಕೊ ಹೊರತಂದಿರುವ ‘ಸ್ಪೈಸ್‌ ಟೋಫಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕ್ಯಾಂಪ್ಕೊದಿಂದ ‘ಸ್ಪೈಸ್ ಟೋಫಿ’ ನೂತನ ಚಾಕಲೇಟ್‌ ಅನ್ನು ಮಾರುಕಟ್ಟೆ ಬಿಡುಗಡೆ ಮಾಡಲಾಗಿದೆ. ಮನೆಯಲ್ಲಿ ಪಾರಂಪರಿಕವಾಗಿ ತಯಾರಿಸುವ ರೀತಿಯಲ್ಲಿಯೇ ಶುಂಠಿ, ಕರಿಮೆಣಸಿನ ಪುಡಿಯನ್ನು ಬಳಸಿ ಈ ಚಾಕಲೇಟ್‌ ತಯಾರಿಸಲಾಗಿದೆ ಎಂದರು ತಿಳಿಸಿದರು.

ADVERTISEMENT

ಈಗಾಗಲೇ ಕ್ಯಾಂಪ್ಕೊದಿಂದ ಹಲವಾರು ಬಗೆಯ ಚಾಕಲೇಟ್‌ಗಳು ಹಾಗೂ ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಹೊಸದಾಗಿ ಬಿಡುಗಡೆ ಮಾಡಿರುವ ಚಾಕಲೇಟ್‌ಗಳು, ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿವೆ ಎಂದರು.

ಸಹಕಾರ ಸಂಸ್ಥೆಯಾಗಿರುವ ಕ್ಯಾಂಪ್ಕೊ ರೈತಾಪಿ ವರ್ಗದ ಬೆಂಬಲಕ್ಕೆ ನಿಂತಿದೆ. ರೈತರ ಉತ್ಪಾದಿಸುವ ಸಕ್ಕರೆ, ಶುಂಠಿ, ಕರಿಮೆಣಸನ್ನು ಬಳಸಿ, ಮೌಲ್ಯವರ್ಧಿತ ಚಾಕಲೇಟ್‌ ತಯಾರಿಸಲಾಗಿದೆ. ಇದರ ಜತೆಗೆ ಹಾಲು, ಕೊಕ್ಕೊ, ಸಕ್ಕರೆಯನ್ನು ಬಳಸಿ ಚಾಕಲೇಟ್‌ಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.

ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಎಂ. ಸುರೇಶ್‌ ಭಂಡಾರಿ ಮಾತನಾಡಿ, ಸ್ಪೈಸ್‌ ಟೋಫಿ ಚಾಕಲೇಟ್‌ ಅನ್ನು ಸಕ್ಕರೆ ಆಧಾರಿತ ಸಿರಪ್‌ಗಳು ಮತ್ತು ನೈಸರ್ಗಿಕ ಕರಿಮೆಣಸಿನ ಪುಡಿ, ಶುಂಠಿ ಸಾರಗಳಿಂದ ತಯಾರಿಸಲಾಗಿದೆ. ಇದರಲ್ಲಿ ಗ್ಲೂಕೋಸ್‌ ಅನ್ನು ಬಳಸಲಾಗಿದೆ. ನಮ್ಮ ದೇಹದ ಸಮತೋಲನ ಕಾಪಾಡುವಲ್ಲಿ, ದೇಹವನ್ನು ತಂಪಾಗಿ ಇರಿಸುವಲ್ಲಿ ಹಾಗೂ ದಣಿವನ್ನು ನೀಗಿಸುವಲ್ಲಿ ಈ ಚಾಕಲೇಟ್‌ ಸಹಕಾರಿಯಾಗಿದೆ. ಅಲ್ಲದೇ ಇದು ಉತ್ತಮ ಮೌತ್ ಫ್ರೆಶ್ನರ್‌ ಕೂಡ ಆಗಿದೆ ಎಂದು ವಿವರಿಸಿದರು.

ಸ್ಪೈಸ್ ಟೋಫಿ ಕ್ಯಾಂಪ್ಕೊದಿಂದ ತಯಾರಿಸಿದ ಮೊದಲ ಉತ್ಪನ್ನವಾಗಿದೆ. ಆರಂಭಿಕವಾಗಿ ಸುಮಾರು 12 ಟನ್‌ನಷ್ಟು ಸ್ಪೈಸ್‌ ಟೋಫಿಯನ್ನು ತಯಾರಿಸಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಬರುವ ದಿನಗಳಲ್ಲಿ ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.

ಸ್ಪೈಸ್ ಟೋಫಿಯ ಒಂದು ಜಾರ್‌ನಲ್ಲಿ 250 ಚಾಕಲೇಟ್‌ಗಳಿದ್ದು, ವ್ಯಾಪಾರಿಗಳಿಗೆ ₹180 ರ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಪ್ರತಿ ಚಾಕಲೇಟ್‌ಗೆ ₹1 ರ ದರದಲ್ಲಿ ಲಭ್ಯವಾಗಲಿವೆ ಎಂದರು.

ಉಪಾಧ್ಯಕ್ಷ ಖಂಡಿಗೆ ಶಂಕರನಾರಾಯಣ ಭಟ್, ನಿರ್ದೇಶಕ ಕಿದೂರು ಶಂಕರನಾರಾಯಣ ಭಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.