ADVERTISEMENT

ಗಡಿ ವಹಿವಾಟು: ಅಡಿಕೆ, ಕಾಳುಮೆಣಸು ಹೊರಗಿಡಿ

ಕೇಂದ್ರ ಸಚಿವರಿಗೆ ಕ್ಯಾಂಪ್ಕೊ ಪತ್ರ

​ಪ್ರಜಾವಾಣಿ ವಾರ್ತೆ
Published 30 ಮೇ 2022, 16:30 IST
Last Updated 30 ಮೇ 2022, 16:30 IST
ಕಿಶೋರ್‌ಕುಮಾರ್
ಕಿಶೋರ್‌ಕುಮಾರ್   

ಮಂಗಳೂರು: ಭಾರತ ಮ್ಯಾನ್ಮಾರ್ ಗಡಿಯಲ್ಲಿ ಮಣಿಪುರದ ಮೂಲಕ ಭಾರತಕ್ಕೆ ಅಕ್ರಮವಾಗಿ ಬರುವ ಅಡಿಕೆ ಮತ್ತು ಕಾಳುಮೆಣಸು ನಿಯಂತ್ರಿಸಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ಕುಮಾರ್ ಕೊಡ್ಗಿ ಅವರು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಡಾ. ಸುಬ್ರಹ್ಮಣ್ಯಂ ಜೈಶಂಕರ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ಬರ್ಮಾದಿಂದ ಕಳಪೆ ಗುಣಮಟ್ಟದ ಅಡಿಕೆಯು ಶೇ 108ರಷ್ಟು ಆಮದು ಶುಲ್ಕದೊಂದಿಗೆ ಕೆ.ಜಿ.ಯೊಂದಕ್ಕೆ ₹ 251ರಂತೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಇದು ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರೈಲ್ವೆ, ರಸ್ತೆ ಮಾರ್ಗದಲ್ಲಿ ಸಾಗಣೆಯಾಗುತ್ತದೆ. ಇದು ಭಾರತದ ಮಾರುಕಟ್ಟೆಯಲ್ಲಿ ಕೆ.ಜಿ.ಯೊಂದಕ್ಕೆ ₹ 250ರಿಂದ ₹ 260ರ ದರದಲ್ಲಿ ಮಾರಾಟವಾಗುತ್ತದೆ. ಇದು ದೇಸೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಈ ನಡುವೆ, 2020ರಿಂದ ಬಂದಾಗಿದ್ದ ಮ್ಯಾನ್ಮಾರ್ ಗಡಿಯಲ್ಲಿ 1 ಮತ್ತು 2ನೇ ಗೇಟ್ ತೆರೆಯಲು ಅನುಮತಿ ನೀಡಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ಆದೇಶ ಹೊರಡಿಸಿದೆ. ವ್ಯಾಪಾರ ವಹಿವಾಟಿನ ದೃಷ್ಟಿಯಿಂದ ಗಡಿಯ ಗೇಟ್ ತೆರೆದಿರುವ ಕ್ರಮ ಸ್ವಾಗತಾರ್ಹವಾಗಿದೆ. ಆದರೆ, ಈ ಗಡಿಯಲ್ಲಿನ ವಹಿವಾಟಿನಲ್ಲಿ ಅಡಿಕೆ ಮತ್ತು ಕಾಳುಮೆಣಸು ಉತ್ಪನ್ನಗಳನ್ನು ಹೊರತುಪಡಿಸಬೇಕು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT