ADVERTISEMENT

ಮಂಗಳೂರು | ಎನ್‌ಎಸ್‌ಯುಐ– ಕ್ಯಾಂಪಸ್ ಗೇಟ್ ಮೀಟ್ ಅಭಿಯಾನ: ಕೀರ್ತಿ ಗಣೇಶ್‌

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 5:55 IST
Last Updated 11 ಸೆಪ್ಟೆಂಬರ್ 2024, 5:55 IST
ಸುದ್ದಿಗೋಷ್ಠಿಯಲ್ಲಿ ಕೀರ್ತಿ ಗಣೇಶ್‌ ಅವರು ಮಂಗಳವಾರ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಕೀರ್ತಿ ಗಣೇಶ್‌ ಅವರು ಮಂಗಳವಾರ ಮಾತನಾಡಿದರು   

ಮಂಗಳೂರು:‘ಕಾಲೇಜು ವಿದ್ಯಾರ್ಥಿಗಳ ಅಹವಾಲು ಆಲಿಸಿ ಪರಿಹಾರ ಕಂಡುಕೊಳ್ಳಲು ನೆರವಾಗುವ ಸಲುವಾಗಿ ಎನ್‌ಎಸ್‌ಯುಐ ವತಿಯಿಂದ ಕ್ಯಾಂಪಸ್ ಗೇಟ್ ಮೀಟ್‌ ಅಭಿಯಾನವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಿದ್ದೇವೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಈ ಅಭಿಯಾನಕ್ಕೆಂದೇ ಪ್ರತ್ಯೇಕ ಘಟಕವನ್ನು ಹಾಗೂ ಸಹಾಯವಾಣಿಯನ್ನು ಆರಂಭಿಸಿದ್ದೇವೆ. ಕಾಲೇಜು ಪ್ರಾಂಗಣಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಹವಾಲು ಸಲ್ಲಿಸಲು ಬಯಸುವ ಆಸಕ್ತ ವಿದ್ಯಾರ್ಥಿಗಳ ಜೊತೆ ಗೂಗಲ್ ಶೀಟ್ ಹಂಚಿಕೊಳ್ಳಲಿದ್ದೇವೆ. ಗುರುತಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿದ್ದೇವೆ’ ಎಂದರು. 

‘ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಾಲೇಜು ಪ್ರಾಂಗಣಗಳಿಗೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದೇವೆ. ಗ್ರಾಮಾಂತರ ಪ್ರದೇಶಕ್ಕೆ ಸರ್ಕಾರಿ ಬಸ್ ಸೌಕರ್ಯ ಇಲ್ಲದ ಬಗ್ಗೆ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಅಂಕ ಪಟ್ಟಿಯನ್ನು ಡೌನ್ಲೋಡ್ ಮಾಡುವಾಗ ಎದುರಾಗುತ್ತಿರುವ ಸಮಸ್ಯೆ, ವಿಶ್ವವಿದ್ಯಾನಿಲಯದಲ್ಲಿ ನುರಿತ ಸಿಬ್ಬಂದಿ ಕೊರತೆ ಬಗ್ಗೆ ಅನೇಕರು ಗಮನ ಸೆಳೆದಿದ್ದಾರೆ’ ಎಂದರು.

ADVERTISEMENT

‘ನಮ್ಮ ಹೋರಾಟದ ಫಲವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈಗ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆಯಾದರೂ, ಇದರಲ್ಲೂ ಕೆಲವೊಂದು ಲೋಪಗಳಿವೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಸಮುದಾಯದ ಪ್ರತಿಕ್ರಿಯೆ ಸಂಗ್ರಹಿಸುತ್ತಿದ್ದೇವೆ’ ಎಂದರು.

‘ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ₹ 100 ಕೋಟಿ ಅನುದಾನ ಹಂಚಿಕೆ ಮಾಡಿದೆ. ಹಳೆಯ ಯೋಜನೆಗಳನ್ನು ಮುಂದುವರಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಹೊಸ ಯೋಜನೆಯನ್ನು ಆರಂಭಿಸಲು ಸಿದ್ಧತೆ ನಡೆದಿದೆ’ ಎಂದು ನಿಗಮದ ಅಧ್ಯಕ್ಷರೂ ಆಗಿರುವ ಕೀರ್ತಿ ಗಣೇಶ್‌ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಫಹಾದ್‌, ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಸವಾದ್ ಸುಳ್ಯ,   ಎನ್‌ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸುಹಾನ್ ಆಳ್ವ, ಉಪಾಧ್ಯಕ್ಷ ರಫಿಕ್‌ ಮತ್ತು ಫಾರುಕ್‌ ಬಿ., ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್‌, ಝಾಕೀರ್ ಹುಸೇನ್‌ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.