ಮುಳುಗಿದ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಕರಾವಳಿ ಕಾವಲು ಪಡೆಯವರು ರಕ್ಷಿಸಿದರು
ಮಂಗಳೂರು: ಇಲ್ಲಿನ ಬಂದರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ಹಡಗೊಂದು ಮುಳುಗಿದ್ದು ಅದರಲ್ಲಿದ್ದ ಸಿಬ್ಬಂದಿಯನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ ಎಂದು ತಿಳಿದುಬಂದಿದೆ. ಈ ಹಡಗು ಮೇ 18ರಂದು ಕಡಮತ್ ದ್ವೀಪ ಸೇರುವ ನಿರೀಕ್ಷೆ ಇತ್ತು.
ಮೇ 12ರಂದು ಹೊರಟ ಎಂಎಸ್‌ವಿ ಸಲಾಮತ್ ಎಂಬ ಹಡಗು ಮಂಗಳೂರಿನಿಂದ 60 ನಾಟಿಕಲ್ ಮೈಲಿ ದೂರ, ನೈರುತ್ಯಕ್ಕೆ ಮೇ 14ರಂದು ಮಧ್ಯಾಹ್ನ 12 ಗಂಟೆಗೆ ಮುಳುಗಿದೆ. ಈ ಹಡಗು ಮುಂಜಾನೆ 5.30ರ ವೇಳೆ ಬೃಹತ್ ಅಲೆಗೆ ಅಪ್ಪಳಿಸಿ ಅಪಘಾತಕ್ಕೆ ಈಡಾಗಿರುವುದಾಗಿ ಅಂದಾಜಿಸಲಾಗಿದೆ ಎಂದು ತಿಳಿಸಲಾಗಿದೆ.
ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಹೊತ್ತು ಹೊರಟಿದ್ದ ಹಡಗು ಮುಳುಗುತ್ತಿದ್ದಂತೆ ಎಲ್ಲ ಆರು ಮಂದಿ ಸಿಬ್ಬಂದಿ ಸಣ್ಣ ದೋಣಿಯನ್ನು ಆಶ್ರಯಿಸಿದ್ದಾರೆ. ಇದನ್ನು ಗಮನಿಸಿದ ಬೇರೊಂದು ಹಡಗಿನಲ್ಲಿದ್ದವರು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ. ಗಸ್ತಿನಲ್ಲಿದ್ದ ಕಾವಲು ಪಡೆಯವರು ಅತ್ತ ಧಾವಿಸಿ ಸಿಬ್ಬಂದಿಯನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಇದನ್ನು ದೃಢಪಡಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.