ಗಿರೀಶ ಮಟ್ಟೆಣ್ಣನವರ
ದಕ್ಷಿಣ ಕನ್ನಡ: ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧಿಸುವ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ, ಮಾನಹಾನಿಕರ ಸಂದೇಶಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿದ ಆರೋಪದಡಿ ಗಿರೀಶ ಮಟ್ಟೆಣ್ಣ ನವರ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬ್ರಹ್ಮಾವರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಮತ್ತು ಅಧಿಕಾರಿಗಳು ತಿಮರೋಡಿ ಅವರನ್ನು ಬಂಧಿಸಲು ಆ.21ರಂದು ಬೆಳಿಗ್ಗೆ ಬೆಳ್ತಂಗಡಿ ತಾಲ್ಲೂಕು ಉಜಿರೆ ಗ್ರಾಮದ ತಿಮರೋಡಿ ಹೌಸ್‌ಗೆ ತೆರಳಿದ್ದರು.
ಆಗ ಗಿರೀಶ, ಜಯಂತ್ ಹಾಗೂ ಇತರ 10 ಮಂದಿ ಬಂಧನಕ್ಕೆ ತಡೆಯೊಡ್ಡಿದ್ದರು. ಅಧಿಕಾರಿಗಳ ಮೇಲೆ ಬಲಪ್ರಯೋಗ ಮಾಡಿದ್ದು, ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶ ಪ್ರಸಾರ ಮಾಡುವುದಾಗಿ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಬ್ರಹ್ಮಾವರ ಸಬ್ ಇನ್‌ಸ್ಪೆಕ್ಟರ್ ದೂರು ನೀಡಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಅರುಣ್ ಕೆ. ತಿಳಿಸಿದ್ದಾರೆ.
ಬಂಧಿಸಿದ ನಂತರ ಪೊಲೀಸ್ ವಾಹನದಲ್ಲಿ ಬರಲು ತಿಮರೋಡಿ ನಿರಾಕರಿಸಿದರು. ಸ್ವಂತ ಕಾರಿನಲ್ಲಿ ಬರುತ್ತಿದ್ದ ವೇಳೆ 10 ರಿಂದ 15 ಕಾರುಗಳಲ್ಲಿ ಜನರು ಪೊಲೀಸರ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದು ತೊಂದರೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಭಾರತೀಯ ನ್ಯಾಯಸಂಹಿತೆ 2023ರ ಕಲಂ 132, 189(2), 351(2), 263(a), 190, 262ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಠಾಣೆ ಮುಂದೆ ಹಾಜರಾದ ಗಿರೀಶ: ಗಿರೀಶ ಮಟ್ಟೆಣ್ಣನವರ ಶನಿವಾರ ಬೆಳ್ತಂಗಡಿ ಠಾಣೆ ಮುಂದೆ ಹಾಜರಾದರು. ಈ ವೇಳೆ ಮಾತನಾಡಿದ ಅವರು ‘ತಿಮರೋಡಿ ಬಂಧಿಸಲು 100ರಷ್ಟು ಪೊಲೀಸರು ಗುರುವಾರ ಬಂದಿದ್ದರು. ಮನೆಯವರು ಆತಂಕಕ್ಕೆ ಒಳಗಾಗಿದ್ದರು. ನಾವೇ ತಿಮರೋಡಿ ಅವರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದೆವು. ಈಗ ಎಫ್‌ಐಆರ್ ದಾಖಲಾಗಿದೆ. ಬಂಧಿಸುವುದಾದರೆ ಬಂಧಿಸಲಿ ಎಂದು ಠಾಣೆಗೆ ಹಾಜರಾಗಿದ್ದೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.