ಮಂಗಳೂರು: ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಡ್ಯಾರ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯ ವೇಳೆ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಂಕನಾಡಿ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ನಿಯೋಜಿಸಿದ್ದ ಪೊಲೀಸ್ ಅಧಿಕಾರಿ ನೀಡಿದ ದೂರು ಆಧರಿಸಿ ಕೃಷ್ಣಾಪುರ ನಿವಾಸಿ ಜಲೀಲ್, ವಳಚ್ಚಿಲ್ ನಿವಾಸಿ ಫಾಝಲ್, ಮೊಹಮ್ಮದ್ ಹನೀಫ್ ನೌಫಾಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 189(2)(ಕಾನೂನುಬಾಹಿರ ಗುಂಪು ಚಟುವಟಿಕೆ), 126(2) (ತಪ್ಪು ಸಂಯಮ ಶಿಕ್ಷೆ), 270, 324(4) (ಕಿಡಿಗೇಡಿತನ), 132 (ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿ), 285 (ಸಾರ್ವಜನಿಕ ಮಾರ್ಗದಲ್ಲಿ ಸಂಚಾರಕ್ಕೆ ಅಡ್ಡಿ), 190 ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ವಿಡಿಯೊ ದೃಶ್ಯ ಆಧರಿಸಿ ಇನ್ನಿತರ ಆರೋಪಿಗಳ ಗುರುತು ಪತ್ತೆ ಕಾರ್ಯ ನಡೆದಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಕರ್ನಾಟಕ ಉಲಮಾ ಒಕ್ಕೂಟವು ಕಣ್ಣೂರು ಅಡ್ಯಾರ್‌ನ ಷಾ ಗಾರ್ಡನ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಪ್ರತಿಭಟನಾ ಸ್ಥಳದ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆಯ ಸಂಘಟಕರು ನೇಮಿಸಿದ್ದ ಸ್ವಯಂ ಸೇವಕರು ಪೊಲೀಸ್ ಸಿಬ್ಬಂದಿಗೆ ನೆರವು ನೀಡುತ್ತಿದ್ದರು. ಈ ವೇಳೆ ಸಂಜೆ 4.30ರ ಸುಮಾರಿಗೆ ಬಂದ ಗುಂಪೊಂದು ಹೆದ್ದಾರಿ ಮಧ್ಯದಲ್ಲಿ ಜಮಾಯಿಸಿ, ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುವ ಜೊತೆಗೆ ಕಾನೂನುಬಾಹಿರ ಪ್ರತಿಭಟನೆ ನಡೆಸಿತು. ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪೊಲೀಸರು ಮಾಡಿದ ಮನವಿಗೂ ಕಿವಿಗೊಡಲಿಲ್ಲ. ಈ ಗುಂಪಿನಲ್ಲಿದ್ದವರು ತುರ್ತು ಸೇವೆಗಳಿಗೆ ಅಡ್ಡಿಪಡಿಸಿದ್ದಲ್ಲದೆ, ಸರ್ಕಾರಿ ನೌಕರರ ಕರ್ತವ್ಯಕ್ಕೂ ಅಡ್ಡಿ ಮಾಡಿದ್ದಾರೆ ಎಂದು ಅಗ್ರವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.