
ಶೋಭಾ ಕರಂದ್ಲಾಜೆ
ಮಂಗಳೂರು: ‘ದೇಶದಲ್ಲಿ ವರ್ಷದಲ್ಲಿ ಸುಮಾರು 4 ಲಕ್ಷ ಟನ್ ಗೇರು ಬೀಜ ಉತ್ಪಾದನೆ ಆಗುತ್ತಿದೆ. ಆಂತರಿಕ ಬೇಡಿಕೆ ಪೂರೈಸಲೂ ಇದು ಸಾಲದು. ಗೇರು ಬೆಳೆಯಲ್ಲೂ ನಾವು ಸ್ವಾವಲಂಬನೆ ಸಾಧಿಸಬೇಕಾದ ಅಗತ್ಯ ಇದೆ’ ಎಂದು ಕೇಂದ್ರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಇಲಾಖೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಡಂಬಿ ಸಂಸ್ಕರಣಾ ಉದ್ಯಮ ಆರಂಭವಾಗಿ ನೂರು ವರ್ಷಗಳು ತುಂಬಿರುವ ಸಲುವಾಗಿ ಕರ್ನಾಟಕ ಗೇರು ಉತ್ಪಾದಕರ ಸಂಘವು ಇಲ್ಲಿ ಏರ್ಪಡಸಿರುವ ಮೂರು ದಿನಗಳ ‘ಗೋಡಂಬಿ ಶತಮಾನೋತ್ಸವ ಶೃಂಗ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹವಾಮಾನ ವೈಪರೀತ್ಯ, ಬರಗಾಲದಂತಹ ಪ್ರತಿಕೂಲ ಸನ್ನಿವೇಶವನ್ನು ತಾಳಿಕೊಳ್ಳುವ ಗೇರು ತಳಿಗಳನ್ನು ಅಭಿವೃದ್ಧಿಪಡಿಸಬೇಕು. ನಮ್ಮಲ್ಲಿ ಹೆಕ್ಟೇರ್‌ಗೆ 664 ಕೆ.ಜಿ ಇಳುವರಿ ಬಂದರೆ ಹೆಚ್ಚು. ಗೇರು ಬೀಜದ ಗುಣಮಟ್ಟ ಹೆಚ್ಚಳದ ಜೊತೆಗೆ, ಈ ಬೆಳೆಯನ್ನು ಜಾರ್ಖಂಡ್, ಛತ್ತೀಸಗಡದಂತಹ ರಾಜ್ಯಗಳಿಗೂ ವಿಸ್ತರಿಸುವ ಅಗತ್ಯವಿದೆ. ಗೋಡಂಬಿ ಸಂಸ್ಕರಣೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವತ್ತ (ಅಟೋಮೇಷನ್) ಇನ್ನಷ್ಟು ಗಮನ ಹರಿಸಬೇಕು’ ಎಂದರು.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ‘ಹಿಂದೆ, ಅತಿಥಿಗಳನ್ನು ಗೌರವಿಸಲು ವೀಳ್ಯದೆಲೆ– ಅಡಿಕೆ ನೀಡಲಾಗುತ್ತಿತ್ತು. ಈಗ ಹುರಿದ ಗೋಡಂಬಿಯನ್ನು ನೀಡಲಾಗುತ್ತಿದೆ. ಇದು ಗೋಡಂಬಿ ಉದ್ಯಮಕ್ಕೆ ಸಲ್ಲುತ್ತಿರುವ ಗೌರವ’ ಎಂದರು.
ಕಾರ್ಯಕ್ರಮದ ಸಂಚಾಲಕ ಕಲ್ಬಾವಿ ಪ್ರಕಾಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಗೇರು ಉತ್ಪಾದಕರ ಸಂಘದ ಅಧ್ಯಕ್ಷ ಎಸ್. ಅನಂತಕೃಷ್ಣ ರಾವ್ ಸ್ವಾಗತಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಭಾಗಿರಥಿ ಮುರುಳ್ಯ, ಕಿರಣ್ ಕುಮಾರ್ ಕೊಡ್ಗಿ, ಇಟಿಜಿ ಕಾರ್ಯಕಾರಿ ನಿರ್ದೇಶಕ ವಾಸುದೇವ ಬಾರ್ಕೂರು, ಉದ್ಯಮಿಗಳಾದ ರೇನೆ ಗೌಡ್ರಿಯಾನ್, ರಾಹುಲ್ ಕಾಮತ್, ಕೆಸಿಎಂಎ ಕಾರ್ಯದರ್ಶಿ ಅಮಿತ ಪೈ ಮೊದಲಾದವರು ಭಾಗವಹಿಸಿದ್ದರು.
ಗೋಡಂಬಿಯ ವಿವಿಧ ಉತ್ಪನ್ನಗಳ ಹಾಗೂ ಗೋಡಂಬಿ ಸಂಸ್ಕರಣೆ ಯಂತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.