
ಕಂಬಳದಲ್ಲಿ ಕೋಣ (ಪ್ರಾತಿನಿಧಿಕ ಚಿತ್ರ)
ಮಂಗಳೂರು: ಕೋಣಗಳನ್ನು ಸಾಕಿರುವ ಸಂಶುದ್ದೀನ್ ಅವರ ಮನೆಗೆ ನುಗ್ಗಿ, ತೊಂದರೆ ನೀಡಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ಶ್ಯಾಮಸುಂದರ್ ಶೆಟ್ಟಿ, ಅಕ್ಷಯ ಪೂಜಾರಿ, ಸುವಿನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಮೂಲ್ಕಿ ಠಾಣೆ ವ್ಯಾಪ್ತಿಯ ಅಂಗಾರ ಗುಡ್ಡೆಯ ಸಂಶುದ್ದೀನ್ ಮತ್ತು ಅವರ ಮಗ ಸಹಾಬುದ್ದೀನ್ ಬಳಿ ಮೂರು ಜೋಡಿ ಕೋಣ, ಹಾಲು ಕೊಡುವ ಐದು ಹಸುಗಳು, ಕೆಲವು ಎತ್ತುಗಳು ಇವೆ. ಅವರು ಸಾಕಿರುವ ಕೋಣಗಳು ಇತ್ತೀಚೆಗೆ ನಡೆದ ಕಂಬಳದಲ್ಲಿ ಬಹುಮಾನ ಪಡೆದಿವೆ.
‘ಇವರ ಬಳಿ ತೆರಳಿದ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣ ನೀಡದೇ ಇದ್ದಾಗ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಹಾಬುದ್ದೀನ್, ತಮ್ಮ ತಂದೆ ಸಂಶುದ್ದೀನ್ ಅವರನ್ನು ರಕ್ಷಿಸಿದ್ದಾರೆ. ಪಕ್ಕದ ಹಳ್ಳಿಯಿಂದ ಬಂದು ಆರೋಪಿಗಳು ಈ ಕೃತ್ಯವೆಸಗಿದ್ದಾರೆ. ಈ ಗ್ರಾಮದಲ್ಲಿ ಹಿಂದೂ, ಮುಸ್ಲಿಮರು ಸಹಬಾಳ್ವೆ ನಡೆಸುತ್ತಿದ್ದು, ಅಕ್ಕಪಕ್ಕದ ಹಿಂದೂ ಕುಟುಂಬದವರು ಬಂದು ಸಂಶುದ್ದೀನ್ ಅವರಿಗೆ ರಕ್ಷಣೆ ನೀಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಪರಾರಿಯಾಗಿದ್ದಾನೆ. ಆರೋಪಿಗಳಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿ ತಾನೂ ಸಂತ್ರಸ್ತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ’ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
‘ಈ ಘಟನೆಯನ್ನು ಕೆಲವರು ವಿಡಿಯೊ ಮಾಡಿದ್ದು, ಅದನ್ನು ನೋಡಿದಾಗ ವಾಸ್ತವ ಚಿತ್ರಣ ನಮಗೆ ತಿಳಿದಿದೆ. ಕೃತ್ಯದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳ ವಿರುದ್ಧ ಈಗಾಗಲೇ ಗಂಭೀರ ಪ್ರಕರಣಗಳು ದಾಖಲಾಗಿವೆ’ ಎಂದು ಅವರು ಹೇಳಿದ್ದಾರೆ.