ADVERTISEMENT

ಮಂಗಳೂರು| ಜಾನುವಾರು ಕಳ್ಳಸಾಗಣೆ: ಪರಾರಿಯಾಗಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 5:30 IST
Last Updated 22 ಅಕ್ಟೋಬರ್ 2025, 5:30 IST
<div class="paragraphs"><p>ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದ ವಾಹನವನ್ನು ಪೊಲೀಸರು ಪುತ್ತೂರು ತಾಲ್ಲೂಕಿನ ಈಶ್ವರಮಂಗಲದಲ್ಲಿ ಬುಧವಾರ ವಶಕ್ಕೆ ಪಡೆದರು</p></div>

ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದ ವಾಹನವನ್ನು ಪೊಲೀಸರು ಪುತ್ತೂರು ತಾಲ್ಲೂಕಿನ ಈಶ್ವರಮಂಗಲದಲ್ಲಿ ಬುಧವಾರ ವಶಕ್ಕೆ ಪಡೆದರು

   

ಮಂಗಳೂರು: ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದ ಮಿನಿ ಲಾರಿಯನ್ನು ಬೆನ್ನಟ್ಟಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು, ತಮ್ಮ ವಾಹನಕ್ಕೆ ಲಾರಿಯನ್ನು ಡಿಕ್ಕಿ ಹೊಡೆಸಿದ ಆರೋಪಿ ಕಾಲಿಗೆ ಈಶ್ವರಮಂಗಲ ಎಂಬಲ್ಲಿ ಬುಧವಾರ ಬೆಳಿಗ್ಗೆ ಗುಂಡು ಹಾರಿಸಿದ್ದಾರೆ. ವಾಹನದಲ್ಲಿದ್ದ ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ. 

‘ಕಾಸರಗೋಡು ಜಿಲ್ಲೆಯ ಅಬ್ದುಲ್ಲಾ (40) ಬಂಧಿತ ಆರೋಪಿ. ವಾಹನ ನಿಲ್ಲಿಸಲು ಪೊಲೀಸರು ಸೂಚಿಸಿದರೂ ಮುಂದಕ್ಕೆ ಸಾಗಿದ್ದ. ಸುಮಾರು 10 ಕಿ.ಮೀ ದೂರದವರೆಗೆ ಲಾರಿಯನ್ನು ಪೊಲೀಸರು ಬೆನ್ನಟ್ಟಿದ್ದರು. ಈ ವೇಳೆಗೆ ಆರೋಪಿಯು ತಾನು ಚಲಾಯಿಸುತ್ತಿದ್ದ ವಾಹನವನ್ನು ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ. ಆಗ ಆ ವಾಹನದತ್ತ ಪಿಎಸ್ಐ ಗುಂಡು ಹಾರಿಸಿದ್ದರು. ವಾಹನ ನಿಲ್ಲಿಸಿದ ಆರೋಪಿಯು ಚಾಕು ತಂದು ಪೊಲೀಸರ ಮೇಲೆ ದಾಳಿ ನಡೆಸಲು ಯತ್ನಿಸಿದ್ದ. ಆಗ ಪಿಎಸ್‌ಐ ಮತ್ತೊಂದು ಗುಂಡು ಹಾರಿಸಿದ್ದು, ಅದು ಆರೋಪಿಯ ಕಾಲಿಗೆ ತಗುಲಿದೆ. ಗಾಯಗೊಂಡ ಆರೋಪಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿದ್ದ ಇನ್ನೊಬ್ಬ ಆರೋಪಿ  ಪರಾರಿಯಾಗಿದ್ದಾನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ಮಾಹಿತಿ ನೀಡಿದ್ದಾರೆ.

ADVERTISEMENT

‘ವಾಹನದಲ್ಲಿ ಏಳು ಎಮ್ಮೆ, ಎರಡು ಕೋಣ, ಎರಡು ಹಸು, ಒಂದು ಕುರಿ ಸೇರಿದಂತೆ 12 ಜಾನುವಾರುಗಳಿದ್ದವು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಅದನ್ನು ಹಾಸನ ಕಡೆಯಿಂದ ತರಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

‘ಜಾನುವಾರು ಹತ್ಯೆ ತಡೆ ಕಾಯ್ದೆಯಡಿ ಬೆಳ್ಳಾರೆ ಠಾಣೆಯಲ್ಲಿ ಜುಲೈನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತನಾಗಿದ್ದ ಈ ಆರೋಪಿ  ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಮತ್ತೆ ಅದೇ ಕೃತ್ಯದಲ್ಲಿ ತೊಡಗಿದ್ದ’ ಎಂದು ತಿಳಿಸಿದ್ದಾರೆ.

ಹಗ್ಗ ಕತ್ತರಿಸಿದ್ದ ಪುತ್ತಿಲ: 

ಜಾನುವಾರು ಕಳ್ಳಸಾಗಣೆ ವಾಹನವನ್ನು ಪೊಲೀಸರು ವಶಪಡಿಸಿಕೊಂಡ ಸ್ಥಳಕ್ಕೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದರು. ಲಾರಿಗೆ ಕಟ್ಟಿದ್ದ ಹಗ್ಗವನ್ನು ಪುತ್ತಿಲ ಕತ್ತಿಯಿಂದ ಕಡಿದು, ಗೋವುಗಳನ್ನು ಬಿಡುಗಡೆ ಮಾಡುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ‘ವಾಹನದಲ್ಲಿದ್ದ ಒಂದು ಜಾನುವಾರು ಸತ್ತಿತ್ತು. ವಾಹನದಲ್ಲಿದ್ದ ಜಾನುವಾರುಗಳನ್ನು ಇಳಿಸಲು ಸ್ಥಳಕ್ಕೆ ಬಂದಿದ್ದ ಅರುಣ್ ಪುತ್ತಿಲ ಅನುಮತಿ ಕೋರಿದ್ದರು. ಜಾನುವಾರುಗಳ ಸಾವು ತಪ್ಪಿಸಲು ಪೊಲೀಸರು ಅದಕ್ಕೆ ಒಪ್ಪಿದ್ದರು. ಲಾರಿಗೆ ಕಟ್ಟಿದ್ದ ಹಗ್ಗಗಳನ್ನು ಪುತ್ತಿಲ ಆ ಬಳಿಕ ಕತ್ತರಿಸಿದ್ದರು. ಪೊಲೀಸರು ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಸ್ಥಳೀಯರ ಮತ್ತು ಇತರರ ಸಹಾಯವನ್ನು ಪಡೆಯುತ್ತಾರೆ. ಜಾನುವಾರುಗಳ ರಕ್ಷಣೆಗಾಗಿ ಸ್ಥಳೀಯ ಮುಸ್ಲಿಂ ಕುಟುಂಬದವರೇ ಹಗ್ಗ ಕತ್ತರಿಸಲು ಕತ್ತಿಯನ್ನು ನೀಡಿದ್ದರು’ ಎಂದು ಸ್ಪಷ್ಟಪಡಿಸಿದ್ದಾರೆ.

‘ಈ ಸಂಬಂಧ ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಎಸ್‌ಪಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.