ADVERTISEMENT

ಮಂಗಳೂರು ಪೊಲೀಸರಿಗೆ ಸಿಬಿಐ ಪ್ರಶಂಸೆ

ಘೋಷಿತ ಅಪರಾಧಿ ಸ್ಯಾಮ್‌ ಪೀಟರ್‌ ಬಂಧನಕ್ಕೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 15:41 IST
Last Updated 31 ಡಿಸೆಂಬರ್ 2019, 15:41 IST
   

ಮಂಗಳೂರು: 1998ರಲ್ಲಿ ಗಾಝಿಯಾಬಾದ್‌ನಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಅಂದಿನಿಂದಲೂ ತಲೆಮರೆಸಿಕೊಂಡಿದ್ದ ರಾಹುಲ್‌ ರಾಬಿನ್‌ಸನ್‌ ಅಲಿಯಾಸ್‌ ಸ್ಯಾಮ್‌ ಪೀಟರ್‌ನನ್ನು ಬಂಧಿಸಿ, ಹಸ್ತಾಂತರಿಸಿರುವುದಕ್ಕೆ ಸಿಬಿಐ ಮಂಗಳೂರು ನಗರ ಪೊಲೀಸರನ್ನು ಶ್ಲಾಘಿಸಿದೆ.

ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೊ (ಎನ್‌ಸಿಐಬಿ) ಎಂಬ ಕೇಂದ್ರ ಸರ್ಕಾರಿ ತನಿಖಾ ಸಂಸ್ಥೆಯ ನಿರ್ದೇಶಕನೆಂದು ಪರಿಚಯಿಸಿಕೊಂಡು ಹಣ ಸುಲಿಗೆಗೆ ಬಂದಿದ್ದ ಸ್ಯಾಮ್‌ ಪೀಟರ್‌ನನ್ನು ಮಂಗಳೂರು ಪೂರ್ವ (ಕದ್ರಿ) ಠಾಣೆ ಪೊಲೀಸರು ಆಗಸ್ಟ್‌ನಲ್ಲಿ ಬಂಧಿಸಿದ್ದರು. ಈತನ ವಿರುದ್ಧ ಸಿಬಿಐ ಹಾಗೂ ವಿವಿಧ ರಾಜ್ಯಗಳ ಪೊಲೀಸರು ದಾಖಲಿಸಿರುವ ಪ್ರಕರಣಗಳು ಬಾಕಿ ಇರುವುದನ್ನು ಪತ್ತೆಹಚ್ಚಿದ್ದರು. ಬಳಿಕ ಬಂಧನದ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.

‘ಒಬ್ಬ ಆರೋಪಿಯ ಬಂಧನದ ಬಳಿಕ ಆತನ ವಿರುದ್ಧದ ಇತರೆ ಪ್ರಕರಣಗಳ ಬಗ್ಗೆಯೂ ಮಾಹಿತಿ ಕಲೆಹಾಕುವುದು ತನಿಖಾಧಿಕಾರಿಯೊಬ್ಬರ ಬದ್ಧತೆಗೆ ಸಾಕ್ಷಿ. ಸಿಬಿಐ ಪ್ರಕರಣದಲ್ಲಿ ಸ್ಯಾಮ್‌ ಪೀಟರ್‌ ಭಾಗಿ ಆಗಿರುವುದನ್ನು ಪತ್ತೆಹಚ್ಚಿ ಮಾಹಿತಿ ಹಂಚಿಕೊಳ್ಳುವ ಮೂಲಕ ನೀವು ಅಂತಹ ಬದ್ಧತೆ ಪ್ರದರ್ಶಿಸಿದ್ದೀರಿ. ನಿಮ್ಮ ಬದ್ಧತೆ ಮತ್ತು ಕೆಲಸದಲ್ಲಿನ ಉತ್ಸಾಹ ಇತರರಿಗೆ ಮಾದರಿ ಮತ್ತು ಹೆಚ್ಚು ಪ್ರಶಂಸನೀಯವೂ ಆಗಿದೆ’ ಎಂದು ಸಿಬಿಐ ಭ್ರಷ್ಟಾಚಾರ ನಿಗ್ರಹ ವಿಭಾಗದ ಗಾಝಿಯಾಬಾದ್‌ ಶಾಖೆಯ ಮುಖ್ಯಸ್ಥರಾಗಿರುವ ಎಸ್‌ಪಿ ರಘುರಾಮ್‌ ರಾಜನ್‌ ಅವರು ಕದ್ರಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಮಾರುತಿ ಎಸ್‌.ವಿ.ಅವರಿಗೆ ಬರೆದಿರುವ ಪತ್ರದಲ್ಲಿ ಶ್ಲಾಘಿಸಿದ್ದಾರೆ.

ADVERTISEMENT

ಸಿಬಿಐ ಎಸ್‌ಪಿಯವರ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ‘ಸ್ಯಾಮ್‌ ಪೀಟರ್‌ ಬಂಧನಕ್ಕಾಗಿ ಸಿಬಿಐ ಮಂಗಳೂರು ಪೊಲೀಸರನ್ನು ಶ್ಲಾಘಿಸಿದೆ. ನನ್ನ ತಂಡಕ್ಕೆ ಅಭಿನಂದನೆಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.