ADVERTISEMENT

ಚಂಪಾಷಷ್ಠಿ ಮಹೋತ್ಸವ; ಬ್ರಹ್ಮರಥೋತ್ಸವ ಸಂಭ್ರಮ

ಸಹಸ್ರಾರು ಭಕ್ತರ ಭಾಗಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:25 IST
Last Updated 27 ನವೆಂಬರ್ 2025, 4:25 IST
ವೈಭವದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು
ವೈಭವದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು   

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವದ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ, ಭಕ್ತಿಯಿಂದ ವೈಭವದ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು.

ಬುಧವಾರ ರಾತ್ರಿ ಮಹಾಪೂಜೆ ಬಳಿಕ ಹೊರಾಂಗಣ ಉತ್ಸವ ಆರಂಭಗೊಂಡಿತು. ವಿಶೇಷ ಹೂವುಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ದೇವರ ಉತ್ಸವ ಮತ್ತು ಬಂಡಿ ಉತ್ಸವ ನೆರವೇರಿತು. ಹೊರಾಂಗಣ ಉತ್ಸವದ ಬಳಿಕ ರಥಬೀದಿಗೆ ಬಂದ ದೇವರು ಪಂಚಮಿ ರಥದಲ್ಲಿ ಉತ್ಸವ ಸ್ವೀಕರಿಸಿದರು. ರಥಬೀದಿಯಿಂದ ಕಾಶಿಕಟ್ಟೆವರೆಗೆ ಪಂಚಮಿ ರಥೋತ್ಸವ ನಡೆದು, ಬಳಿಕ ಸವಾರಿ ಮಂಟಪದ ಸವಾರಿ ಕಟ್ಟೆಯಲ್ಲಿ ಪೂಜೆ ನೆರವೇರಿಸಲಾಯಿತು. ಈ ವೇಳೆ ಕುಕ್ಕೆ ಬೆಡಿ ಸಿಡಿಮದ್ದು ಪ್ರದರ್ಶನ ನಡೆಯಿತು.

ಬುಧವಾರ ಬೆಳಿಗ್ಗೆ ಚಂಪಾಷಷ್ಠಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಚಿಕ್ಕ ರಥದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಹಾಗೂ ಬ್ರಹ್ಮರಥದಲ್ಲಿ ಸುಬ್ರಹ್ಮಣ್ಯ ದೇವರಿಗೆ ರಥೋತ್ಸವ ಜರುಗಿತು.

ADVERTISEMENT

ಚಂಪಾಷಷ್ಠಿ ಮಹೋತ್ಸವದ ವಿವಿಧ ಕೆಲಸ ಕಾರ್ಯಗಳಲ್ಲಿ ಊರವರು, ಭಕ್ತರು, ಸ್ಥಳೀಯ ಹಾಗೂ ದೂರ ಊರುಗಳ ಸಂಘ-ಸಂಸ್ಥೆಗಳು ಹಾಗೂ ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ದೇವಸ್ಥಾನದ ಸಿಬ್ಬಂದಿಗಳೊಂದಿಗೆ ಕೈಜೋಡಿಸಿ ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.

ಅನ್ನಪ್ರಸಾದ ವಿತರಣೆ, ಸ್ವಚ್ಛತೆ, ಭಕ್ತರಿಗೆ ಮಾರ್ಗದರ್ಶನ ಸೇರಿದಂತೆ ವಿವಿಧ ಜವಾಬ್ದಾರಿಗಳಲ್ಲಿ ಸ್ವಯಂ ಸೇವಕರು ಕೈಜೋಡಿಸಿದ್ದರು.

ಚಂಪಾಷಷ್ಠಿ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರ ವಾಹನ ನಿಲುಗಡೆಗೆ ಕುಮಾರಧಾರ ಭಾಗ ಹಾಗೂ ಇಂಜಾಡಿ ಭಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಬದಲಿ ಮಾರ್ಗದ ಆಯ್ಕೆಯನ್ನೂ ನೀಡಲಾಗಿತ್ತು. ಜಾತ್ರೆಯ ಬಂದೋಬಸ್ತ್‌ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಠಾಣೆಗಳ ಸಿಬ್ಬಂದಿಗಳು ಸುಬ್ರಹ್ಮಣ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಸುರಕ್ಷತೆ, ಮುನ್ನೆಚ್ಚರಿಕಾ ಕ್ರಮವಾಗಿ ಪೇಟೆಯಾದ್ಯಂತ ಆಯ್ದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ವಹಿಸಲಾಗಿತ್ತು. ಆರೋಗ್ಯ ಇಲಾಖೆಯ ವತಿಯಿಂದ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸುಬ್ರಹ್ಮಣ್ಯ ದೇವಸ್ಥಾನದ ಸಹಯೋಗದೊಂದಿಗೆ ರಥಬೀದಿಯಲ್ಲಿ ತಾತ್ಕಲಿಕ ಹೊರ ರೋಗಿ ಚಿಕಿತ್ಸಾ ವಿಭಾಗ ತೆರೆಯಲಾಗಿತ್ತು.  

ವೈಭವದ ಕುಕ್ಕೆ ಬೆಡಿ: ಬಳಿಕ ಶ್ರೀ ದೇವರಿಗೆ ಸವಾರಿ ಮಂಟಪದ ಸವಾರಿ ಕಟ್ಟೆಯಲ್ಲಿ ಪೂಜೆ ನೆರವೇರಿತು. ಈ ಸಂದರ್ಭ ಆಕರ್ಷಕ ಸುಡುಮದ್ದು ಕುಕ್ಕೆ ಬೆಡಿ ಪ್ರದರ್ಶಿತವಾಯಿತು. ಸುಡುಮದ್ದುಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿತು. ಹಸಿರು ಪಟಾಕಿಗಳನ್ನು ಒಳಗೊಂಡ ಕುಕ್ಕೆ ಬೆಡಿ ಭಕ್ತರಿಗೆ ವಿಶೇಷ ಮನರಂಜನೆ ಒದಗಿಸಿತು. ದೇವರು ದೇವಳಕ್ಕೆ ಮರಳಿದ ಬಳಿಕ ಶ್ರೀದೇವಳದಲ್ಲಿ ದೇವರಿಗೆ ಮಂಟಪೋತ್ಸವ ನಡೆಯಿತು.

ಇಂದು ಅವಭೃತೋತ್ಸವ: ನ.27ರಂದು ಬೆಳಿಗ್ಗೆ ದೇವಸ್ಥಾನದಿಂದ ಬಂಡಿ ರಥದಲ್ಲಿ ಉತ್ಸವಮೂರ್ತಿಯ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರ ಕಟ್ಟೆಯಲ್ಲಿ ಪೂಜೆ ನಡೆದು, ಬಳಿಕ ಕುಮಾರಧಾರ ನದಿಯಲ್ಲಿ ದೇವರ ನೌಕವಿಹಾರ ಮತ್ತು ಅವಭೃತೋತ್ಸವ ಜರುಗಲಿದೆ. ಡಿ.2ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

ಮಂಗಳವಾರ ಶ್ರದ್ಧಾ ಭಕ್ತಿಯ ಪಂಚಮಿ ರಥೋತ್ಸವ ನೆರವೇರಿತು. ಸ್ಕಂದ ಪಂಚಮಿಯಂದು ಪಂಚಮಿ ರಥದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯು ಉತ್ಸವ ನಡೆಯಿತು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.